![]()
ಸುರಪುರ :ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ, ಐತಿಹಾಸಿಕ ಕೊಡೇಕಲ್‌ನಲ್ಲಿ ಗುರುವಾರ ಕಾಲಜ್ಞಾನಿ ಕೊಡೇಕಲ್ ಬಸವವಣ್ಣನವರ ಸುಪ್ರಸಿದ್ಧ ಜೋಡು ಪಲ್ಲಕ್ಕಿ ಉತ್ಸವ ಬಸವಪೀಠಾಧಿಪತಿಗಳಾದ ಶ್ರೀ ವೃಷಭೇಂದ್ರ ಅಪ್ಪನವರ ಸಾನಿಧ್ಯದಲ್ಲಿ ಅತ್ಯಂತ ಸಡಗರ, ಸಂಭ್ರಮ, ಭಕ್ತಿಭಾವ ಹಾಗೂ ಭಾವೈಕ್ಯತೆ ಯೊಂದಿಗೆ ವೈಭವದಿಂದ ನಡೆಯಿತು. ಬೆಳಗ್ಗೆಯಿಂದಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆಗಳು ನಡೆದವು. ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಹರಕೆ ಸಮರ್ಪಿಸಿದರು. ಪ್ಯಾಟಿ ಬಸವೇಶ್ವರ ದೇವ ಸ್ಥಾನದಿಂದ ಬಂದ ಪಲ್ಲಕಿ ಊರೊಳಗಿನ ದೇವಸ್ಥಾನಕ್ಕೆ ತಲುಪಿದ ನಂತರ ಎರಡು ದೇವಸ್ಥಾನಗಳ ಪಲ್ಲಕ್ಕಿಗಳು ಛತ್ರಕಟ್ಟೆಯಲ್ಲಿ ವಿರಾಜಮಾನವಾದವು. ಈ ಸಂಧರ್ಭದಲ್ಲಿ ಪಲ್ಲಕ್ಕಿಗಳಿಗೆ ಭಕ್ತರಿಂದ ಚಾಮರ ಸೇವೆ, ವಿಶೇಷ ಪೂಜೆ, ನಡೆದವು. ಬೆಳಗ್ಗೆ 10ಕ್ಕೆ ಸಾಂಪ್ರದಾಯಿಕ ಪೋಷಾಕು ಧರಿಸಿ ಆಗಮಿಸಿದ ಬಸವಪೀಠಾದಿಪತಿ ಶ್ರೀವೃಷಭೇಂದ್ರ ಅಪ್ಪನವರು, ಜೋಡು ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಸಕಲ ವಾದ್ಯಮೇಳಗಳ ಮೆರವಣಿಗೆ ಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಾಗಿತು. ಪಲ್ಲಕ್ಕಿ ಮೆರವಣಿಗೆ ಸಾಗುವ ದಾರಿಯಲ್ಲಿ ಬಸವಗುರು ಪರಂಪರೆಯ ಗುರು ವರ್ಗ ದವರು ಬಸವಣ್ಣನವರ ವಚನಗಳನ್ನು ಹಿಮ್ಮು ಖವಾಗಿ ಪಠಿಸುತ್ತಾ ಸಾಗಿದ್ದು ಭಕ್ತಿ ಭಾವವನ್ನು ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಗುರುವಾರ ಶ್ರೀಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ ಅಪಾರ ಭಕ್ತ ಸಮೂಹದೊಂದಿಗೆ ವೈಭವದಿಂದ ಜರುಗಿತು. ಇಮ್ಮಡಿ ಗೊಳಿಸಿತು. ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿದ ಜೋಡು ಪಲ್ಲಕ್ಕಿ ಉತ್ಸವ ಕಣ್ಣುಂಬಿಕೊಳ್ಳಲು ಸಹಸ್ರಾರು ಭಕ್ತರು ಮನೆಯ ಮಾಳಿಗೆ ಸೇರಿದಂತೆ ಎತ್ತರದ ಸ್ಥಳಗಳಲ್ಲಿ ನಿಂತುಕೊಂಡು ಪಲ್ಲಕ್ಕಿಗಳಿಗೆ ಉತ್ತತ್ತಿ, ಬಾಳೆಹಣ್ಣು, ಚುರುಮುರಿ ಹಾರಿಸಿ ಘೋಷಗಳನ್ನು ಕೂಗಿದರು. ಪ್ಯಾಟಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ ನಂತರ ಮುಸ್ಲಿಂ ಭಾಂಧವರು ಪಾಥೆ ಹೊರಡಿ ಸಿದ ತರುವಾಯ ಎಲ್ಲ ಬಾರಾ ಬಲೂತಿ ಮಿರಸ್ತೆದಾರರು ಧೂಳಕಾಯಿ ಒಡೆದರು, ಪಲ್ಲಕ್ಕಿ ಉತ್ಸವ ಗ್ರಾಮದೊಳಗಿನ ಪ್ರಮುಖ ಬೀದಿಗಳ ಮಾರ್ಗವಾಗಿ ದೇವಸ್ಥಾನಕ್ಕೆ ಆಗಮಿಸಿದ ನಂತರ ಸಂಪ್ರದಾಯದಂತೆ ಧೂಳ ಕಾಯಿ ಒಡೆದು ಎಲ್ಲರಿಗೂ ಸಕ್ಕರೆ ಹಂಚಿದ ನಂತರ ಪಟ್ಟದಕುದುರೆ ಮೆವಣಿಗೆ ಯೊಂದಿಗೆ ಪಲ್ಲಕ್ಕಿ ಉತ್ಸವ ಸಂಪನ್ನ ಗೊಂಡಿತು. ಶ್ರೀ ವೃಷಭೇಂದ್ರ ಅಪ್ಪನವರ ಸಾನಿಧ್ಯದಲ್ಲಿ ನಡೆದ ಜೋಡ ಪಲ್ಲಕ್ಕಿ ಮಹೋತ್ಸವದಲ್ಲಿ, ರಾಜಾ ಜಿತೇಂದ್ರನಾಯಕ ಜಹಾಗೀರದಾರ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ, ಬಾರಾ ಬಲೂತಿ ಮಿರಸ್ತೆದಾರರು, ವತನದಾ ರರು, ಗುರು ವರ್ಗ, ಶಿಷ್ಯ ವರ್ಗ, ಜಾತ್ರಾ ಸಮಿತಿಯ ಕಾರ್ಯ ನಿರ್ವಾಹಕರು ಹಾಗೂ ತಹಸೀಲ್ದಾರ ಎಂ.ಬಸವರಾಜ, ಗ್ರಾಮದ ಪ್ರಮುಖರು ಸೇರಿದಂತೆ ರಾಯಚೂರು, ಯಾದಗಿರಿ, ವಿಜಯಪುರ, ಜಿಲ್ಲೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು. ಹುಣಸಗಿ ಸಿಪಿಐ ರವಿಕುಮಾರ ಎಸ್. ಎನ್ ಮಾರ್ಗದರ್ಶನದಲ್ಲಿ ಕೊಡೇಕಲ್, ನಾರಾಯಣ ಪುರ ಮತ್ತು ಹುಣಸಗಿ ಪೊಲೀಸ್ ಠಾಣೆಗಳ ಪಿಎಸ್‌ಐ ಮತ್ತು ಸಿಬ್ಬಂದಿಯವರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.


























































