8,813 total views
ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ರ ಪೂರ್ವಭಾವಿಯಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆಯ ನಮೂನೆಯನ್ನು ವಿತರಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ನಮೂನೆ ನೀಡುವುದರ ಜೊತೆಗೆ, ಸಮೀಕ್ಷೆಯಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ನೀಡಲು ಕುಟುಂಬದ ಸದಸ್ಯರು ಮುಂಚಿತವಾಗಿ ತಯಾರಿರುವಂತೆ ನೋಡಿಕೊಳ್ಳುವುದು, ಅಗತ್ಯ ದಾಖಲಾತಿಗಳನ್ನು ತೆಗೆದಿಟ್ಟುಕೊಳ್ಳಲು ಹೇಳುವುದು, ಸರಿ ಇಲ್ಲದ ಪಕ್ಷದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವ ಮಾಹಿತಿಯನ್ನು ನೀಡುವುದು, ನಮೂನೆಗಳನ್ನು ಹಂಚಿರುವ ವಿವರಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್ಲೋಡ್ ಮಾಡುವುದು ಇತ್ಯಾದಿ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಲಾಗಿದೆ. ಈ ಎಲ್ಲಾ ಕೆಲಸಗಳಿಗೆ ಪತ್ರಿಕೆಯಲ್ಲಿ ವರದಿಯಾಗಿರುವಂತೆ 2000 ರೂ ನೀಡಲಾಗುವುದು ಎಂಬುದಾಗಿ ಇದೆ. ಆದರೆ ಇಲಾಖೆಯಿಂದ ಇದುವರೆಗೂ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲ.
ಈ ಹಿಂದೆಯೂ ಸಹ ಗ್ಯಾರಂಟಿ ಯೋಜನೆಯ ಸಮೀಕ್ಷೆಗೆ ರೂ.1000 ನೀಡುವುದಾಗಿ ಹೇಳಿ, ಆಶಾ ಕಾರ್ಯಕರ್ತೆಯರು ಸಮೀಕ್ಷೆಯನ್ನು ಮಾಡಿಕೊಟ್ಟ ಮೇಲೆ ಒಂದು ಪೈಸೆಯನ್ನೂ ನೀಡಲಿಲ್ಲ. ಅದೇ ರೀತಿ ಇತರ ಇಲಾಖೆಗಳಿಂದ ಮಾಡಿಸಿಕೊಂಡ ಹಲವಾರು ಸಮೀಕ್ಷೆಗಳಿಗೆ ಇದುವರೆಗೂ ಸೂಕ್ತ ಸಂಭಾವನೆ ದೊರೆತಿಲ್ಲ. ಏಪ್ರಿಲ್ 1 ರಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.10,000 ಗ್ಯಾರಂಟಿ ಗೌರವಧನ ಎಂದು ಭರವಸೆ ನೀಡಿದ ರಾಜ್ಯ ಸರ್ಕಾರ ಇದುವರೆಗೂ ಅದನ್ನೂ ಈಡೇರಿಸಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ರೂ.1000 ಹೆಚ್ಚಳ ಮಾಡಿ, ಆಶಾ ಕಾರ್ಯಕರ್ತೆಯರಿಗೆ ಮಾತ್ರ ರೂ.1000 ಹೆಚ್ಚಿಸಲಿಲ್ಲ. ಅದರಂತೆಯೇ ಈಗ ನಡೆಯಲಿರುವ ಸಮೀಕ್ಷೆ ಕೆಲಸಕ್ಕೆ ಆಶಾ ಕಾರ್ಯಕರ್ತೆಯರಿಗೆ ಎಷ್ಟು ಗೌರವ ಧನ ನೀಡಲಾಗುವುದು ಎಂದು ಸರ್ಕಾರ ಮತ್ತು ಇಲಾಖೆಯ ಅಧಿಕೃತ ಆದೇಶವೇ ಇಲ್ಲ. ಸರ್ವೆ ಮಾಡುವಷ್ಟು ದಿನಗಳ ಕಾಲ, ಚಟುವಟಿಕೆ ಆಧಾರಿತ ಪ್ರೋತ್ಸಾಹಧನಕ್ಕೂ ಕುತ್ತು ಬರುತ್ತದೆ ಮಾತ್ರವಲ್ಲದೆ, ಈ ಸರ್ವೆಗಾಗಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಮನೆಗೆ ಹೋಗುವಂತಹ ಪರಿಸ್ಥಿತಿ ಬಂದೊದಗಿದೆ. ಆದ್ದರಿಂದ ಈ ಮೇಲಿನ ಎಲ್ಲಾ ಕಾರಣಗಳಿಂದ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಗೌರವಧನವೂ ಇಲ್ಲದಿರುವುದರಿಂದ ಸರ್ವೆ ಕೆಲಸದಿಂದಲೇ ಹಿಂದೆ ಸರಿಯಲು ಎಲ್ಲಾ ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ನಿರ್ಣಯ ಮಾಡಿದ್ದಾರೆ.

ಆಶಾ ಕಾರ್ಯಕರ್ತೆಯರು ಪ್ರೋತ್ಸಾಹಧನ ಆಧಾರಿತ ಕೆಲಸ ಮಾಡುವ ಕಾರ್ಯಕರ್ತೆಯರು ಆಗಿರುವುದರಿಂದ, ಈ ಸರ್ವೆ ಮಾಡುವ ದಿನಗಳಲ್ಲಿ ಅವರ ಚಟುವಟಿಕೆಗಳಿಗೆ ಧಕ್ಕೆಯಾಗಿ ಪ್ರೋತ್ಸಾಹ ಧನ ಕಡಿಮೆ ಆಗುವುದರಿಂದಲೂ ಮತ್ತು ಇದು ಹೆಚ್ಚುವರಿ ಕೆಲಸವೂ ಆಗಿರುವುದರಿಂದ ಇವರಿಗೆ ಸಮೀಕ್ಷೆ ಕಾರ್ಯಕ್ಕೆ ರೂ.5000 ಗೌರವಧನ ಕೊಡುವುದು ನ್ಯಾಯೋಚಿತವಾಗಿದೆ. ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ಆಗಿರುವ ಕಹಿ ಅನುಭವಗಳ ಹಿನ್ನಲೆಯಲ್ಲಿ ಬಾಕಿ ಇರುವ ಅನುದಾನಗಳ ಬಿಡುಗಡೆ ಮಾಡಬೇಕು. ಮತ್ತು ಸರ್ಕಾರ ಈ ಸರ್ವೆ ಕಾರ್ಯಕ್ಕೆ ಗ್ರಾಮೀಣ ಆಶಾಗಳಿಗೆ ರೂ. 5000, ನಗರ ಆಶಾಗಳಿಗೆ ರೂ.10,000 ಗೂ ಕಡಿಮೆ ಇರದಂತೆ ಗೌರವ ಧನ ನಿಗದಿಪಡಿಸಿ ಆದೇಶವನ್ನು ಕೂಡಲೇ ಹೊರಡಿಸಬೇಕು. ಇದಕ್ಕೆ ಸರ್ಕಾರ ಒಪ್ಪಿದಲ್ಲಿ ಆಶಾ ಕಾರ್ಯಕರ್ತೆಯರು ಸಮೀಕ್ಷೆಯ ಕೆಲಸಗಳಿಗೆ ಜೊತೆಗೂಡುವುದಾಗಿ ತೀರ್ಮಾನಿಸಿರುವರು.ಈ ಕೆಳಕಂಡ ಬೇಡಿಕೆಗಳ ಈಡೇರಿಕೆಗೆ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕೊಪ್ಪಳ ಜಿಲ್ಲಾ ಸಮಿತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಾದ ಸುರೇಶ ಹಿಟ್ನಾಳ್, ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ , ಜಿಲ್ಲಾ RCH ಅಧಿಕಾರಿಗಳಾದ ಪ್ರಕಾಶ್ ಅವರ ಮೂಲಕ ಸರ್ಕಾರಕ್ಕೆ ಹಾಗೂ ಅಭಿಯಾನ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ಡಿ. ಜಿಲ್ಲಾ ಮುಖಂಡರುಗಳಾದ ಶೋಭಾ ಹೂಗಾರ್, ಜ್ಯೋತಿ ಲಕ್ಷ್ಮಿ ಅಯೋಧ್ಯ, ರೇಖಾ ಹೊಸ್ಕೆರ, ಗಾಯತ್ರಿ ಬಳಿಗೆರ್, ರೇಣುಕಾ, ಸುನಿತಾ, ಲಲಿತಾ, ಅಕ್ಕಮಹಾದೇವಿ, ಮಹಾಲಕ್ಷ್ಮಿ, ಅಂಬ್ರಮ್ಮ,ರಜಿಯಾ ಬೇಗಂ, ಸವಿತಾ, ಮಕ್ಕಳಮ್ಮ, ಮುಂತಾದವರು ಆಶಾ ಕಾರ್ಯಕರ್ತೆಯರು ಭಾಗವಹಿದ್ದರು.
ಬೇಡಿಕೆಗಳು:
1. ಗ್ರಾಮೀಣ ಆಶಾ ಕಾರ್ಯಕರ್ತೆಯರಿಗೆ ಈ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯ ಕೆಲಸಕ್ಕೆ ರೂ5000 ಮತ್ತು ನಗರ ಆಶಾ ಕಾರ್ಯಕರ್ತೆಯರಿಗೆ ಮನೆಗಳ ಸಂಖ್ಯೆ ಹೆಚ್ಚು ಇರುವುದರಿಂದ ರೂ.10,000 ಕ್ಕೆ ಕಡಿಮೆ ಇರದಂತೆ ಗೌರವಧನ ನಿಗದಿ ಮಾಡಿ ಆದೇಶ ಮಾಡಬೇಕು. ಇಲ್ಲವೇ ಸಮೀಕ್ಷೆ ಕೆಲಸಗಳಿಂದ ಕೈಬಿಡಬೇಕು.
2. ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಹಿಂದೆ ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಯ ಸಮೀಕ್ಷೆ ಮಾಡಿರುವುದಕ್ಕೆ ಕೊಡಬೇಕಾಗಿದ್ದ ರೂ.1000 ಬಾಕಿ ಗೌರವಧನ ಈ ಕೂಡಲೇ ನೀಡಬೇಕು.
3. ಬಿಬಿಎಮ್‌ಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಸಮೀಕ್ಷೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ನಿಗದಿಯಾಗಿದ್ದ ಬಾಕಿ ಸಂಭಾವನೆ ನೀಡಬೇಕು.























































