5,814 total views
ಭಾರತೀಯರಿಗೆ ಎರಡು ಸಂಕ್ರಮಣಗಳು ಮಹತ್ವವಾದವುಗಳು. ಒಂದು ಮಕರ ಸಂಕ್ರಮಣ ಜನೇವರಿ 14 ಅಥವಾ 15 ರಂದು ಬರುವ ಪರ್ವವಾದರೆ, ಇನ್ನೊಂದು ಸೆಪ್ಟೆಂಬರ್ 17ರಂದು ಬರುವ ಕನ್ಯಾ ಸಂಕ್ರಮಣವಾಗಿದೆ. ಮಕರ ಸಂಕ್ರಮಣದಷ್ಟು ವಿಶೇಷತೆ ಇದಕ್ಕೂ ಇದೆ ಎಂದರೆ ಆಶ್ಚರ್ಯವೆನಿಸುತ್ತದೆ. ಆದ್ದರಿಂದ ಕನ್ಯಾಸಂಕ್ರಮಣವು ಸನಾತನ ಧರ್ಮಕ್ಕೆ ಅತ್ಯಂತ ಪವಿತ್ರವಾದ ದಿನವೆಂದು ಹೇಳುತ್ತಾರೆ. ಪ್ರಾಕೃತಿಕವಾಗಿ ಆಗುವ ಬದಲಾವಣೆಯಲ್ಲಿ ಸೂರ್ಯನು ಭೂಮಧ್ಯರೇಖೆಯ ಮೇಲಿದ್ದಾಗ ಹಗಲು ರಾತ್ರಿಗಳು ಸರಿಸಮವಾಗಿರುತ್ತವೆ. ಅಂದರೆ ಈ ಋತುವಿನಲ್ಲಿ ಹಗಲು ರಾತ್ರಿಗಳ ಸರಿಸಮವಾಗಿರುತ್ತವೆ. ಇನ್ನೊಂದೆಡೆ ಈ ಸೃಷ್ಟಿಯ ರೂಪಕ ಕರ್ತನೆಂದು ವೇದೋಕ್ತವಾಗಿ ವರ್ಣಿಸಿರುವ ಪ್ರರಬ್ರಹ್ಮ ವಿಶ್ವಕರ್ಮನು ಈ ವಿಶ್ವವನ್ನು ಕನ್ಯಾಸಂಕ್ರಮಣದಂದು ಸೃಷ್ಟಿಸಿದನೆಂದು ಪ್ರತೀತಿ. ಇನ್ನೊಂದೆಡೆ ವೇದರ್ಷಿಗಳ ಯಾಗ ಯಜ್ಞಗಳ ಕೈಂಕರ್ಯಕ್ಕೆ ಕೃತಾರ್ಥನಾಗಿ ‘ವಿಶ್ವಕರ್ಮ ಪ್ರರಬ್ರಹ್ಮನು’ ಆವಿರ್ಭಸಿರುವ ದಿನವೆಂದು ಹೇಳುತ್ತಾರೆ. ಇದಕ್ಕಾಗಿ ಈ ಶುಭದಿನದಂದು ವಿಶ್ವಚೈತನ್ಯಕ್ಕೆ ಕೃತಜ್ಞತೆಯನ್ನು (ಋಣಭಾರ) ಸಲ್ಲಿಸುವದಕ್ಕೋಸ್ಕರ ಮಾಡುವ ಪೂಜೆಯೇ ವಿಶ್ವಕರ್ಮ ಪೂಜಾ ಮಹೋತ್ಸವ ಎನ್ನುತ್ತಾರೆ.
ವಿಶ್ವಸೃಷ್ಟಿಯ ಹಿಂದೆ ಇರುವ ಅನೇಕ ವಿಸ್ಮಯಕಾರಕ ವಿಷಯಗಳು ಇನ್ನೂ ನಿಗೂಢವಾಗಿಯೇ ಉಳಿದಿವೆ. ಈ ಬ್ರಹ್ಮಾಂಡದ ಚಲನೆಯೇ ಬಹುದೊಡ್ಡ ವಿಸ್ಮಯ ! ಸೂರ್ಯನ ಪ್ರಖರತೆ, ಚಂದ್ರನ ಆಹ್ಲಾದಕತೆ ಅದೆಷ್ಟು ಸುಂದರ ಅಲ್ಲವೇ? ಪೃಥ್ವಿಯು ಅದಾವ ಚೈತನ್ಯ ಪಡೆದು ತನ್ನ ಕಕ್ಷವನ್ನು ರೂಪಿಸಿಕೊಂಡು ತನ್ನ ಸುತ್ತಲು ತಾನು ಪ್ರದಕ್ಷಣೆ ಮಾಡುತ್ತ ಸೂರ್ಯನನ್ನು ಪ್ರದಕ್ಷಣೆಗೆಯುತ್ತಿದೆ? ಪ್ರಖರ ಗ್ರಹಗಳು ಸೂರ್ಯನನ್ನು ಅವಲಂಬಿಸಿ ತಮ್ಮ ತಮ್ಮ ನಿಯಂತ್ರಣದಲ್ಲಿಯೇ ಕಾರ್ಯನಿರತವಾಗಿವೆ ಅಲ್ಲವೇ? ಅದೇಷ್ಟೋ ಗ್ರಹ ನಕ್ಷತ್ರಾದಿಗಳು, ಆಕಾಶ ಕಾಯಗಳು, ಜಲಚರಗಳು, ಭೂರ್ಗದಲ್ಲಿಯ ಖನಿಜಗಳು ಇಂದಿನ ವಿಸ್ಮಯ ವಿಜ್ಙಾನಕ್ಕೂ ತೋಚದೆ ಉಳಿದುಕೊಂಡಿವೆ ಎಂದರೆ ಆಶ್ಚರ್ಯವೆನಿಸುತ್ತದೆ.
ಈ ನಿಗೂಢತೆಗೆ ಕಾರಣ ಅರಸಲು ಪ್ರಯತ್ನಸಿದವರು ವೇದಗಳ ಕಾಲದಲ್ಲಿಯ ಜ್ಞಾನಿಗಳು, ವಿಜ್ಞಾನಿಗಳೂ, ತಂತ್ರಜ್ಞರೂ ಆಗಿರುವ ಋಷಿಪುಂಗವರು, ಮಂತ್ರದೃಷ್ಠಾರರು. ಆ ನಿಟ್ಟಿನಲ್ಲಿ ತಮ್ಮ ಜ್ಞಾನವನ್ನು ಒರೆಗೆ ಹಚ್ಚಿ ಈ ವಿಸ್ಮಯ ವಿಶ್ವದ ತತ್ವಗಳನ್ನು ನಿರೂಪಿಸಿರುವ ಕಾರಣಕ್ಕಾಗಿ ತಮ್ಮ ಸುಪ್ತಚೇತನಕ್ಕೆ ತಾವೇ ಪ್ರಶ್ನೆಗಳನ್ನು ಹಾಕಿಕೊಂಡರು. ಅವರ ಮುಂದೆ ಹತ್ತು ಹಲವಾರು ಪ್ರಶ್ನೆಗಳು ಎದುರಾದವು. ಬ್ರಹ್ಮಾಂಡದ ಈ ಚೈತನಕ್ಕೆ ಯಾರು ಕಾರಣರು? ತಮ್ಮೊಳಗಿರುವ ಈ ಜಾಗೃತಾವಸ್ಥೆಯ ವ್ಯವಸ್ಥಾಪಕನು ಯಾರು? ಸೃಷ್ಟಿಯಲ್ಲಿ ಕಾಣಬರುವ ಅಣುರೇಣುತೃಕಾಷ್ಠಾದಿಗಳಲ್ಲಿರುವ ನಿತ್ಯನೂತನ ಚೇತನವಸ್ತು ಅದಾವುದು? ಪಂಚಭೂತಗಳಲ್ಲಿರುವ ಅಭೂತಪೂರ್ವ ಶಕ್ತಿ ಯಾವುದು? ಇತ್ಯಾದಿಯಾಗಿ ವಿಸ್ಮಯ ಚಿತ್ತದಿಂದ ತಮ್ಮನ್ನು ತಾವು ಅವಲೋಕಿಸಿಕೊಂಡು ಅದರ ಅನ್ವೇಷಣೆಯಲ್ಲಿ ತೊಡಗಿಕೊಂಡರು. ತಮ್ಮ ಜ್ಞಾನದ ಕ್ಷಿತಿಜಕ್ಕೆ ಒರೆಹಚ್ಚುವ ಪ್ರಯತ್ನದಲ್ಲಿದ್ದಾಗ ಅದು ಈ ಮೊದಲೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ ಎನ್ನುವ ಹೊಂಬೆಳಕು ಮೂಡಿತು. ಆ ದಿವ್ಯ ಚೇತನಕ್ಕೆ ಮೂಲಸ್ಥಂಭ ಪುರಾಣದಲ್ಲಿ ಹೀಗೆ ಹೇಳಿದೆ.
ನಭೂಮಿರ್ನಜಲಂ ಚೈವ ನತೇಜೋ ನಚ ವಾಯುವೇ | ನಾಕಾಶಂಚ ನಚಿತ್ತ ನಬುನ್ದಿಂದ್ರಿಯ ಗೋಚರಾಃ || ನಚ ಬ್ರಹ್ಮನವಿಷ್ಣು ನಚ ರುದ್ರಸ್ಯ ತಾರಕಾಃ | ಸರ್ವಶೂನ್ಯ ನಿರಾಲಂಭೋ ವಿಶ್ವಕರ್ಮ ಸ್ವಯಂಭೂಃ ||
-ಮೂಲಸ್ಥಂಭ ಪುರಾಣ.
ಏನೊಂದು ಇಲ್ಲದಿದ್ದಾಗ ಅಂದರೆ ಶೂನ್ಯವಿದ್ದಾಗ ಏನು ಇತ್ತೋ ಅದು ನಿರಾಕಾರ ಸ್ವಯಂಭೂ ವಿಶ್ವಕರ್ಮ. ಆ ಶೂನ್ಯದಲ್ಲಿ ತಾನಿದ್ದು ಕರ್ಮನಿರತನಾಗಬೇಕು ಎನ್ನವು ಮಹಾ ಸಂಕಲ್ಪವು ಆ ಚೇತನದಾಗಿತ್ತು. ಪ್ರಶಾಂತವಾದ ಸಮುದ್ರದಲ್ಲಿ ವಾಯುವಿನ ಆಘಾತದಿಂದ ತೆರೆಗಳು ಉತ್ಪನ್ನವಾಗುವಂತೆ ಆ ನಿರ್ಗುಣ ಬ್ರಹ್ಮದಲ್ಲಿ ‘ನಾನು ಬಹುವಾಗಬೇಕೆಂಬ’ ಸಂಕಲ್ಪ ಮಾತ್ರದಿಂದಲೇ ಈ ಜಗತ್ತು ತೋರಿತು.
ಮೊದಲು ಅಂತಃಕರಣ ಚತುಷ್ಟಯೂ ಆಮೇಲೆ ಆಕಾಶ, ವಾಯು, ತೇಜ, ಅಪ್ಪು, ಪೃಥ್ವಿ ಮೊದಲಾದ ಪಂಚತತ್ತ್ವಗಳುದಯಿಸಿ ಆ ನಿರಾಕಾರ ಬ್ರಹ್ಮದಿಂದ ಸಾಕಾರ ವಿಶ್ವಕರ್ಮನ ಅವತಾರವಾಯಿತು. ಆತನಿಗೆ ಪಂಚತತ್ತ್ವ ಸಂಕೇತಗಳಾದ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನಗಳೆಂಬ ಐದು ಮುಖಗಳಾದ್ದರಿಂದ ಪಂಚಾನನ ಅಥವಾ ಪಂಚಮುಖ ಪರಮೇಶ್ವರ ನಾಮವು ಪ್ರಖ್ಯಾತವಾಯಿತು. ಈ ಪಂಚಮುಖಗಳಿಂದ ಕ್ರಮವಾಗಿ ಮನು, ಮಯ, ತ್ವಷ್ಟೃ, ಶಿಲ್ಪಿ, ವಿಶ್ವಜ್ಞ, ಎಂಬ ಪಂಚ ಬ್ರಹ್ಮರ್ಷಿಗಳು ಉದಯಿಸಿದರು. ಇವರ ಪ್ರತಿರೂಪವಾಗಿ ರುದ್ರ, ವಿಷ್ಣು, ಬ್ರಹ್ಮ, ಇಂದ್ರ, ಸೂರ್ಯರು ಕಾರ್ಯಪ್ರವರ್ತರಾದರು. ಸಾನಗ, ಸನಾತನ, ಅಹಭೂನ, ಪ್ರತ್ನಸ್ಯ ಸುಪರ್ಣಸ್ಯರೆಂಬ ಪಂಚಬ್ರಹ್ಮ ಶಿಲ್ಪಿಗಳು ಗೋತ್ರರ್ಷಿಗಳಾದರು. ಇವರ ವಂಶಜರಾಗಿ ವಿಶ್ವಕರ್ಮ ಬ್ರಾಹ್ಮಣರೆಂದು ಕರೆಯಿಸಿಕೊಳ್ಳುವ ಕಮ್ಮಾರ, ಬಡಿಗ, ಕಂಚುಗಾರ, ಶಿಲ್ಪಿ, ಅಕ್ಕಸಾಲಿಗರು ಪಂಚವೃತ್ತಿಗಳ ನಿರ್ಮಾತೃಗಳಾಗಿದ್ದಾರೆ. ಅವನು ಸಂಕಲ್ಪ ಮಾತ್ರದಿಂದಲೇ ಅನ್ನುವ ಅರ್ಥವು ಗಮನಿಸಬೇಕು. ಅವನು ತಾನು ಎಲ್ಲದರಲ್ಲಿಯೂ ಇರಬೇಕು ಎನ್ನುವುದು ಅಪೇಕ್ಷೆಯಾಗಿದೆ. ಕಾವ್ಯಾನಂದರ ‘ಸೃಷ್ಟಿ’ ಎಂಬ ಕವನದ ಎರಡು ಸಾಲು ಗಮನಿಸಿದರೆ ಅದು ಸರಳವಾಗಿ ಅರ್ಥವಾಗಬಹುದು ಎನಿಸುತ್ತದೆ.
ಹಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ ಎಳೆನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಿಹಿಯಾಗಿ ನಿಂತು ಸಾರುತಿದೆ ಸೃಷ್ಟಿ
ಸವಿಯಾಗು ಸವಿಯಾಗು ಸವಿಯಾಗು ಎಂದು.
ಸೃಷ್ಟಿಯ ವಿಷ್ಮಯ ಇಲ್ಲಿ ಗಮನಿಸಬೇಕು. ಎಲ್ಲದರಲ್ಲಿಯೂ ಸಿಹಿ ಇದೆ. ಅದು ಹೇಗೆ ಸಾಧ್ಯವಾಯಿತು ಎನ್ನುವುದೇ ನಿಗೂಢ. ಇನ್ನೂ ಮುಂದಕ್ಕೆ ಹೋದಾಗ ಆಕಾರದಲ್ಲಿ, ಬಣ್ಣದಲ್ಲಿ, ಸಿಹಿ, ವಗರು, ಹುಳಿ, ಮುಂದಾದ ರೂಪ, ರಸ, ಗಂಧ ಗಾಳಿಯಲ್ಲಿ ಒಂದರಂತೆ ಇನ್ನೊಂದಿಲ್ಲ. ಹಾಗೆಯೇ ಈ ಜಗತ್ತಿನ ಪ್ರಾಣಿ, ಪಕ್ಷಿ, ಗಿಡ, ಮರ, ಪರ್ವತ, ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ತೊರೆ ಮುಂತಾದವುಗಳು ಇದಕ್ಕೆ ಮಾನವನೂ ಸೇರಬೇಕು. ಒಂದರಂತೆ ಒಂದಿಲ್ಲ. ಒಬ್ಬರಂತೆ ಒಬ್ಬರಿಲ್ಲ. (ರೂಪದಲ್ಲಿ ಅಪರೂಪಕ್ಕೆ ಒಂದಿಬ್ಬರು ಒಂದಾದರೂ ಗುಣಾವಗುಣಗಳಲ್ಲಿ ಭಿನ್ನರು). ಇಡಿ ವಿಶ್ವದ ಎಲ್ಲದರಲ್ಲಿಯೂ ಅವನು ಇದ್ದು, ಅವುಗಳಲ್ಲಿ ಕಾರ್ಯನಿರತನಾಗುವುದು ಅವನ ಪ್ರಮುಖ ಸಂಕಲ್ಪವಾಗಿರುವಂತಿದೆ. ಮತ್ತೂ ಮುಂದುವರೆದು ಆ ಕಾರಣಕ್ಕಾಗಿ ತಾನೂ ‘ಯಜ್ಞ’ದ ಮೂಲಕ (ಸಂಕಲ್ಪ ಕಾರ್ಯದ ಮುಂದಿನ ಹಜ್ಜೆ) ಆಹುತಿ ಹೊಂದುವುದು. ಅಂದರೆ ತನ್ನನ್ನು ತಾನು ಅದಕ್ಕಾಗಿ ಸಮರ್ಪಣ ಮನೋಭಾವದಿಂದ ಅರ್ಪಣೆಮಾಡಿಕೊಳ್ಳುವುದು. ಹೀಗೆ ‘ಅದರಲ್ಲಿ ಅವನು ಇದ್ದು ಸೃಷ್ಟಿ ಕಾರ್ಯವು ಚೇತನದೊಂದಿಗೆ ಪ್ರಾರಂಭಗೊಂಡಿತು ಎನ್ನುತ್ತಾರೆ ವೇದಕಾಲದ ಋಷಿವರ್ಯರು.
ಇದಕ್ಕೆ ಪೂರಕವಾಗಿ ಇವನು ಪಂಚಕಾರ್ಯಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಇಟ್ಟುಕೊಳ್ಳುತ್ತಾನೆ. ಅವುಗಳೆಂದರೆ ಸೃಷ್ಟಿ, ಸ್ಥಿತಿ, ಲಯ, ತಿರೋದಾನ, ಹಾಗೂ ಅನುಗ್ರಹ ಎಂಬುವುಗಳು. ತನ್ನ ಸಂಕಲ್ಪದಿಂದ ಸೃಷ್ಟಿಸುವುದು, ತನ್ನ ಸಂಕಲ್ಪದ ಮೇರೆಗೆ ರಕ್ಷಿಸುವುದು, ಅದೇ ಸಂಕಲ್ಪದಂತೆ ಲಯವಾಗಿಸುವುದು, ಅದರಂತೆ ತಿರೋದಾನ (ಪುನಃರಪಿ ಮತ್ತೆ ಜನನಕ್ಕೆ ಪ್ರಯತ್ನಿಸುವುದು) ನಂತರ ಆ ಜನ್ಮಕ್ಕೆ ಅನುಗ್ರಹಿಸುವುದು ಅಥವಾ ಮೋಕ್ಷ ನಿಡುವುದು. ಇದೆಲ್ಲವೂ ಅವನ ಸಂಕಲ್ಪ ಮಾತ್ರದಿಂದಲೇ ನಡೆಯುವುದು ಎಂದರ್ಥ. ಇವು ಅವನ ಪ್ರಮುಖ ಪಂಚಕ್ರಿಯೆಗಳಾಗಿವೆ.
ಹೀಗೆ ವಿಶ್ವದ ಚರಾಚರಗಳಲ್ಲಿ ಇರುವ ಆ ದಿವ್ಯ ಚೇತನವೇ ವಿಶ್ವಕರ್ಮ. ಅದರಲ್ಲಿದ್ದು ಕಾರ್ಯ (ಕರ್ಮ) ನಿರ್ವಹಿಸುವಂತೆ ಮಾಡುವವನು ವಿಶ್ವಕರ್ಮ. ಅದರ ನಿಯಂತ್ರಣ ಮಾಡುವವನು ವಿಶ್ವಕರ್ಮ. ಅದರ ಮೇಲ್ವಿಚಾರಣೆ ಮಾಡುವವನು ವಿಶ್ವಕರ್ಮ. ಅದರ ಸಮಸ್ತ ಆಗುಹೋಗುಗಳನ್ನು ನಿರ್ವಹಿಸುವ ಜ್ಞಾನಿ, ವಿಜ್ಞಾನಿ, ತಂತ್ರಜ್ಞಾನಿ ಅವನೇ. ಆದ್ದರಿಂದಲೇ ಅವನು ವಿಶ್ವದ ಎಲ್ಲಾ ಕರ್ಮವನ್ನು ನಿರ್ವಹಿಸುವ ಶಿಲ್ಪಿಯಾಗಿದ್ದಾನೆ. ಅವನು ರೂಪಕ, ನಿರೂಪಕ, ನಿರ್ಮಾಪಕ, ನಿರ್ವಾಹಕ, ನಿರ್ದೇಶಕ, ಕೊನೆಗೆ ನಿಯಂತ್ರಕನೂ ಅವನೇ ಆಗಿದ್ದಾನೆ. ಹೀಗಿರುವ ಅಗಮ್ಯ ಚೈತನವೇ ವಿಶ್ವಕರ್ಮ ಪರಮಾತ್ಮ.
ಸ್ಕಂದ ಪುರಾಣೊಕ್ತ ಪರಮೇಶ್ವರನೇ ಸ್ಕಂದನಿಗೆ ಹೇಳಿರುವಂತೆ‘ನಾನು ಜಗದೊಡೆಯನ ಸ್ಮರಣೆ ಮಾಡುತ್ತಿದ್ದೇನೆ’ ಎನ್ನವ ಮಾತು ಈತನನ್ನೆ ಪರಮೇಶ್ವರ ಸ್ಮರಣೆ ಮಾಡುತ್ತಿದ್ದ ಎನ್ನುವುದಾಗಿದೆ. ಆದ್ದರಿಂದ ಈ ದೇವನು, ದೇವರ ದೇವನಾಗಿದ್ದಾನೆ. ಮಹಾದೇವನಾಗಿದ್ದಾನೆ. ಎಲ್ಲಾ ದೇವಾನು ದೇವತೆಗಳ ಹೃದಯದಲ್ಲಿ ನೆಲೆಸಿದ್ದಾನೆ. ಆತ ಒಬ್ಬನೇ ಪ್ರಮುಖ ದೇವನು. ಆತ ಎಲ್ಲರಲ್ಲಿಯೂ ಇದ್ದಾನೆ. ಮತ್ತು ತನ್ನ ಸಂಕಲ್ಪದಂತೆ ಅವರಿಗೆ ಕಾರ್ಯನಿರ್ವಹಿಸಲು ಅನುಗ್ರಹಿಸಿರುತ್ತಾನೆ.
ಜಗದೀಶ ಸರ್ವೇಶ, ಮಲ್ಲೇಶ, ಗೌರೀಶ, ನೂರಾರು ಹೆಸರು ಶಿವನೀಗೆ | ನೂರಾರು ಹೆಸರು ನಂಜುಂಡೇಶ್ವರನಿಗೆ ಇರವನು ನೆನೆದವರ ಮನದಾಗೆ |
ಎನ್ನುವ ಹಳೆ ಚಿತ್ರದ ಹಾಡು ಸ್ಮರಣೀಯ. ಈ ದೇವರ ದೇವನೇ ಆ ಪರಬ್ರಹ್ಮನು. ಅವನು ನೆನೆದವರ ಮನದಲ್ಲಿ ಇರುತ್ತಾನೆ ಎನ್ನುವದು. ಭಕ್ತ ಪ್ರಹ್ಲಾದ ತನ್ನ ತಂದೆ ಹಿರಣ್ಯಕಶ್ಯಪನಿಗೆ ‘ನನ್ನಲ್ಲಿ, ನಿನ್ನಲ್ಲಿ, ಅವನಲ್ಲಿ, ಇವನಲ್ಲಿ, ಅದರಲ್ಲಿ, ಇದರಲ್ಲಿ, ಎಲ್ಲದರಲ್ಲಿಯೂ ಅವನಿದ್ದಾನೆ’ ಎನ್ನುವ ದಿವ್ಯ ಚೈತನಾತ್ಮಕನಾದ ‘ಶ್ರೀಹರಿ’ ಅವತಾರ ನರಸಿಂಹನ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ಹಾಗೆ ಪ್ರಕಟಗೊಂಡಿರುವ ರೂಪದಲ್ಲಿಯೂ ಆ ಪರಬ್ರಹ್ಮ ರೂಪಿ ವಿಶ್ವಕರ್ಮನಿದ್ದಾನೆ.
ಈ ಪರಬ್ರಹ್ಮರೂಪ ವಿಶ್ವಕರ್ಮ ಸ್ವರೂಪ ‘ಆತ್ಮ’ ‘ಪರಮಾತ್ಮ’ ತತ್ವವನ್ನು ಮನ್ವಾದಿ ಪಂಚಬ್ರಹ್ಮರ ಮುಖೇನ ಶಿಲ್ಪ, ಕರ್ಮ, ಹಾಗೂ ಆಸ್ತಿಕ್ಯ ಭಾವಗಳಲ್ಲಿ ಅಡಕವಾಗಿವೆ. ಶಿಲ್ಪದಲ್ಲಿ ತನ್ನನ್ನು ತಾನು ಪರಿಶುದ್ಧವಾದ ಚಾರಿತ್ರ್ಯ ನಿರ್ಮಿಸಿಕೊಂಡು, ಆತನಲ್ಲಿ ಸಮಾಧಿ ಸ್ಥಿತಿಯೊಂದಿಗೆ ಬೆರೆತು ಪ್ರತಿಮಾದಿ ಶಿಲ್ಪಗಳಿಗೆ ರೂಪಿಸುವುದು, ಈ ಕೆಲಸವನ್ನು ಕೌಶಲ್ಯದಿಂದ ಅಂದರೆ ತನ್ನ ಜ್ಞಾನದ ಮೇರುದರ್ಶನದಿಂದ ‘ಸತ್ಯದಲ್ಲಿಯೂ, ಶಿವನನ್ನು, ಸೌಂದರ್ಯದಲ್ಲಿಯೂ ಶಿವನನ್ನು ದರ್ಶಿಸುವುದು. (ಸತ್ಯಂ ಶಿವಂ ಸುಂದರಂ) ಹೀಗೆ ರೂಪಿಸಿರುವ ಪವಿತ್ರ ಕರ್ಮದ ಫಲಿತವಾಗಿರುವ ಗುಡಿ, ಗೋಪುರ, ದೇವಶಿಲ್ಪಗಳು ಆಸ್ತಿಕ್ಯದತ್ತ ಮನವನ್ನು ನಿಲ್ಲಿಸುವಂತಾಗುತ್ತವೆ. ಶ್ರದ್ಧೆ, ಭಕ್ತಿ, ಮೋಕ್ಷಗಳ ಕುರಿತಾದ ಆತ್ಮನ ಕೂಗು ಪರಮಾತ್ಮನತ್ತ ಕೊಂಡೊಯ್ಯುತ್ತದೆ. ಇದು ಆ ಚೈತನ್ಯಾತ್ಮಕನಾದ ವಿಶ್ವನಿಯಾಮಕನನ್ನು ಸೇರಿಸುವ ಪಾರಮಾರ್ಥಿಕ ನಿಲುವು ಆಗಿದೆ. ‘ಆತ್ಮ ಪರಮಾತ್ಮ ಸಂಯೋಗಃ ಯೋಗಃ’ ಎನ್ನುತ್ತಾರಲ್ಲ ! ಅದೇ ಇದು.
ಅಂತರಂಗ ಶೋಧಿಸಿದರೆ ಈ ದೇಹವೇ ಒಂದು ವಿಶ್ವ ಅಥವಾ ಬ್ರಹ್ಮಾಂಡವೆಂದು ತಿಳಿದರೆ ಇದರಲ್ಲಿ ಕರ್ಮನಿರತ ಚೇತನವೊಂದಿದೆ. ಇದಕ್ಕೆ ಆತ್ಮವೆಂತಲೂ ಕರೆಯುತ್ತಾರೆ. ಇದು ಜೀವಿಗಳ ಹೃದಯದಲ್ಲಿರುವುದರಿಂದ ಇದಕ್ಕೆ ‘ಜೀವಾತ್ಮ’ ಎನ್ನುತ್ತಾರೆ. ಈ ಚೇತನಕ್ಕೆ ಮಿತಿ ಇದೆ. ಅಂದರೆ ಇಷ್ಟೆ ವರ್ಷ, ಇಷ್ಟೆ ದಿವಸ ಇಲ್ಲಿ ಇರಬೇಕೆಂದು ನಿಯಮವಿದೆ. ಅಂದರೆ ಅದು ‘ದೇಹ’ ವೆಂಬ ಗೊಂಬೆಯನ್ನು ಅವಲಂಬಿಸಿ ಅಲ್ಲಿರುವವರೆಗೆ ಅದು ಜೀವವಾಗಿರುತ್ತದೆ. ಅದಿಲ್ಲದಿದ್ದಾಗ ಇದು ಶವವಾಗುತ್ತದೆ. ಇದನ್ನು ಮೀರಿದ ಇನ್ನೊಂದು ಚೇತನವಿದೆ. ಅದನ್ನು ‘ಪರಮ ಆತ್ಮ’ ಎನ್ನುತ್ತಾರೆ. ಅಂದರೆ ಪವಿತ್ರವಾದದ್ದು, ಅಪರಿಮಿತವಾದದ್ದು ಇದರ ರೂಪ ಮತ್ತು ಸ್ವರೂಪವಾಗಿದೆ. ಈ ಮೊದಲು ಹೇಳಿರುವಂತೆ ಎಲ್ಲೆಲ್ಲೆಯೂ ಅವನಿದ್ದಾನೆ ಎಂದಿದ್ದೇವಲ್ಲ ಆ ದಿವ್ಯ ಚೇತನವೇ ಪರಮಾತ್ಮ. ಇದುವರೆಗೆ ದೇಹದಲ್ಲಿದ್ದ ಜೀವಾತ್ಮನು ಅಲ್ಲಿಂದ ನಿರ್ಗಮಿಸಿ ತಿರೋದಾನ ಪಡೆದು ಮತ್ತೆ ಈ ಮಹಾಚೇತನ ಅಂದರೆ ಪರಮಾತ್ಮನಲ್ಲಿ ಬಂದು ಕೂಡಿಕೊಳ್ಳುವದಕ್ಕ ‘ಆತ್ಮ ಪರಮಾತ್ಮ ಸಂಯೋಗ’ ಎನ್ನುತ್ತಾರೆ. ಇದು ಜ್ಞಾನ, ಭಕ್ತಿ, ಕರ್ಮ ಹಾಗೂ ರಾಜಮಾರ್ಗದಿಂದ ಸಾಧ್ಯವೆನ್ನುತ್ತಾರೆ ಯೋಗಿಗಳು. ಇವರು ತಮ್ಮ ಜ್ಞಾನ, ಕರ್ಮ, ಆಸ್ತಿಕ್ಯದ ಬಲದಿಂದ ಅವನಲ್ಲಿ ಒಂದಾಗಿ ಅವನೇ ನಾನು, ನಾನೇ ಅವನು ಎಂಬ ಏಕತ್ವ ಭಾವವನ್ನು ಹೊಂದುತ್ತಾರೆ. ಇದೊಂದು ವಿಶ್ವನಿಯಾಮಕನ ಯೋಜನೆ. ಈ ಯೋಜನೆಯ ನಿರ್ಮಾತೃ, ನಿರ್ವಾಹಕ ಮೇಲೆ ಹೇಳಿರುವ ವಿಶ್ವಕರ್ಮ ಪ್ರಬ್ರಹ್ಮನೇ ಆಗಿದ್ದಾನೆ.
ಹಾಗಾಗಿ ವಿಶ್ವಕರ್ಮ ಪಂಚ ತತ್ತ್ವವು ಇಂತಹ ಪಾರಮಾರ್ಥಿಕ ನಿಲುವು ಹೊಂದಿ ಭಾರತೀಯ ಸಂಸ್ಕೃತಿಗೆ ವೈಶಿಷ್ಟವಾದ ಕೊಡುಗೆ ನೀಡಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಹೀಗಿರುವ ಮೇರು ದರ್ಶನಕ್ಕೆ ಸ್ಪೂರ್ತಿಯಾಗಿರುವ ವಿಶ್ವಕರ್ಮ ಭಗವಂತನ ಪೂಜಾ ಮಹೋತ್ಸವ ನಮ್ಮೊಳಗಿನ ಚೇತನದ ಪೂಜೆಯಾಗಿದೆ. ಅವನಲ್ಲಿ ನನ್ನನ್ನು, ನನ್ನಲ್ಲಿ ಅವನನ್ನು ಕಾಣುವ ಸುಯೋಗವೆ ಇದಾಗಿದೆ.
ವಂದನೆಗಳು.
ಲೇಖಕರು
ದತ್ತಾತ್ರೇಯ ಶ್ರೀ. ವಿಶ್ವಕರ್ಮ
ನಿವೃತ್ತ ಶಿಕ್ಷಕರು ಕಲಬುರಗಿ






















































