5,501 total views
ಶಿರಸಿ: ಬೆನ್ನೆಲುಬಾಗಿ ಬಂದ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಕೃಷಿಯೊಂದಿಗೆ ವಿವಿಧ ಬಗೆಯ ಹತ್ತಾರು ಕೃಷಿಯನ್ನು ಮಾದರಿಯಾಗಿ ನಡೆಸುತ್ತ ಬಂದ ಹಾರ್ಮೋನಿಯಂ ವಾದಕರಾಗಿ ಗುರುತಿಸಿಕೊಂಡ ಶತಾಯುಷಿ ಶ್ರೀಕೃಷ್ಣ ಜಯದೇವ ರಾವ್ ವಡ್ಡಿನಕೊಪ್ಪ ಹಾಗೂ ರಾಧಾ ರಾವ್ ದಂಪತಿಗೆ ಅವರ ಮನೆಯಂಗಳದ ತೋಟದ ನಡುವೆ ಭವ್ಯ ವೇದಿಕೆಯಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದ ವಿಶೇಷ ಸಂದರ್ಭ ನಡೆಯಿತು.
ಶ್ರೀಕೃಷ್ಣ ರಾವ್ ದಂಪತಿ ಸಾರ್ಥಕ ಹಾಗೂ ಮಾದರಿ ಜೀವನ ನಡೆಸಿದ್ದು, ಕಲ್ಗುಂಡಿಕೊಪ್ಪ, ಸುಗಾವಿ, ಬೆಂಗಳೆ, ಓಣಿಕೇರಿ ಭಾಗದಲ್ಲಿ ನಡೆಸುತ್ತಿರುವ ಕೃಷಿಕರ ಜೀವನಕ್ಕೆ ಮಾದರಿಯಾಗಿ ಗುರುತಿಸಿಕೊಂಡವರು. ಶತವರ್ಷದ ಸಂಭ್ರಮದಲ್ಲಿರುವ ಇವರು ಸಂಗೀತ ಕ್ಷೇತ್ರದಲ್ಲಿ ಹಾರ್ಮೋನಿಯಂ ವಾದಕರಾಗಿ ಹಿರಿಯ ಶ್ರೇಷ್ಠ ಸಂಗೀತ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇಳಿ ವಯಸ್ಸಿನಲ್ಲಿ ತಮ್ಮ ದೈನಂದಿನ ಕಾರ್ಯಚಟುವಟಿಕೆಯ ಮೂಲಕ ಕ್ರಿಯಾಶೀಲರಾಗಿದ್ದು, ತುಂಬು ಕುಟುಂಬದ ಸುಖ ಸಂಸಾರ ಜೀವನ ನಡೆಸುತ್ತಿರುವುದು ಆ ಭಾಗದಲ್ಲಿ ಹಾರ್ಮೋನಿಯಂ ಅಜ್ಜ ಎಂದೇ ಗುರುತಿಸಲ್ಪಟ್ಟಿದ್ದಾರೆ.
ಅವರ ಪತ್ನಿ ರಾಧಾರವರು ಕೂಡ ೯೫ ರ ವಯಸ್ಸಿನಲ್ಲಿ ಶ್ರೀಕೃಷ್ಣ ರಾವ್ ಅವರ ಬದುಕಿಗೆ ಹೆಗಲಾಗಿ ಸಾಥ್ ನೀಡುತ್ತಿರುವುದು ಉಲ್ಲೇಖನಿಯವಾಗಿದೆ.
“ಶತಾಯುಷ್ಯ ಕೃತಜ್ಞತಾ” ಅಂಗವಾಗಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ವಿಸ್ತಾರವಾದ ರಾವ್ ಕುಟುಂಬಸ್ಥರೆಲ್ಲರೂ ಸೇರಿ ಅವರ ಸಾರ್ಥಕ ಬದುಕಿನ ಸಾಧನೆಗಾಗಿ ಮನೆ ಪಕ್ಕದಲ್ಲಿರುವ ಅಡಿಕೆ-ತೆಂಗು ತೋಟದ ನಡುವೆ ಭವ್ಯವಾದ ಚಪ್ಪರದ ವೇದಿಕೆ ನಿರ್ಮಿಸಿ, ಧಾರ್ಮಿಕ ಕಾರ್ಯಕ್ರಮವಾಗಿ ಅಷ್ಠೋತ್ತರ ಶತ ನಾರಿಕೇಳ ಮಹಾ ಗಣಪತಿ ಹವನ ಹಾಗೂ ಮುಕ್ಕೋಟಿ ದೇವತೆ ಪೂಜೆಗಾಗಿ ಸಾಲಂಕೃತ ಕಾಮಧೇನು ಪೂಜೆ ಮತ್ತು ೧೦೮ ಮುತ್ತೈದೆಯರ ಬಾಗಿನ ಸಮರ್ಪಣೆಗಾಗಿ ದೇವಿ ಸಂತೃಪ್ತಿ ಪೂಜೆಗಳನ್ನು ವಿಧಿವತ್ತಾಗಿ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಅಖಿಲ ಹವ್ಯಕ ಮಹಾಸಭೆ ಶ್ರೀಕೃಷ್ಣ ರಾವ್ ದಂಪತಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಕಾರ್ಯಕ್ರಮಕ್ಕೆ ಮತ್ತಷ್ಟು ಶೋಭೆ ತಂದಿದ್ದಾರೆ. ಪ್ರಶಸ್ತಿ ಪ್ರದಾನ ಮಾಡಿದ ಹವ್ಯಕ ಮಹಾಸಭಾದ ನಿರ್ದೇಶಕ ಹಾಗೂ ಧಾರವಾಡ ಹೈಕೋರ್ಟ್ ನ್ಯಾಯವಾದಿ ಶಶಾಂಕ ಹೆಗಡೆ ಶಿಗೇಹಳ್ಳಿ ಮಾತನಾಡಿ, ರಾವ್ ಕುಟುಂಬಕ್ಕೆ ಹವ್ಯಕ ಕೃಷಿ ರತ್ನ ಪ್ರದಾನ ಮಾಡುತ್ತಿರುವುದು ಬೆಂಗಳೂರು ಮಹಾಸಭೆಗೆ ತುಂಬಾ ಸಂತೋಷ ಹಾಗೂ ಗೌರವ ಬಂದಂತಾಗಿದ್ದು, ಶತಾಯುಷಿಗಳ ಪಾದಕ್ಕೆ ಮಹಾಸಭೆಯ ಗೌರವಪೂರ್ವಕ ನಮನ ತಿಳಿಸಿದರು.
ಮುಖ್ಯ ಅಭ್ಯಾಗತರಾಗಿದ್ದ ಶಿರಸಿ ಹುಲೇಮಳಗಿ ಬ್ರದರ್ಸ್ನ ಲೋಕೇಶ ಹೆಗಡೆ ಮಾತನಾಡಿ, ಶ್ರೀಕೃಷ್ಣ ರಾವ್ರವರ ಕೃಷಿ ಹಾಗೂ ಸಂಗೀತ ಜೀವನದ ಲವಲವಿಕೆ, ಕ್ರಿಯಾಶೀಲತೆ ಮತ್ತು ವ್ಯಕ್ತಿತ್ವದ ಕುರಿತು ಮಾತನಾಡಿದರು. ಇನ್ನೊಬ್ಬ ಅಭ್ಯಾಗತ ಖ್ಯಾತ ವೈದ್ಯ ಡಾ.ಕೃಷ್ಣಮೂರ್ತಿ ರಾಯ್ಸದ್ ಮಾತನಾಡಿ, ರಾವ್ ದಂಪತಿ ಜೀವನ ಹಾಗೂ ಅವರ ಕುಟುಂಬ ವರ್ಗದ ಆದರ್ಶ ವ್ಯಕ್ತಿತ್ವ ಈ ಸಮಾಜಕ್ಕೆ ಮಾದರಿಯಾಗಿದ್ದು, ಈ ದಂಪತಿ ಸಾವಿರಕ್ಕೆ ಒಬ್ಬರು ಎಂದರು. ಉಪಸ್ಥಿತರಿದ್ದ ಹವ್ಯಕ ಮಹಾಸಭೆಯ ನಿರ್ದೇಶಕ ಜಿ.ಎಂ.ಭಟ್ಟ ಕಾಜಿನಮನೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬನವಾಸಿ ಮಧುಕೇಶ್ವರ ದೇವಾಲಯದ ಪರವಾಗಿ ಮತ್ತು ಪಾಲ್ಗೊಂಡ ಅನೇಕ ಬಂಧುಗಳು, ಊರನಾಗರಿಕರು ರಾವ್ ದಂಪತಿಗೆ ಶಾಲು ಹೊದೆಸಿ, ಗೌರವ ಅಭಿನಂದನೆ ಸಮರ್ಪಿಸಿದರು. ಕುಟುಂಬದ ವಿಜಯಕುಮಾರ ಮತ್ತಿತರರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ರಾವ್ ದಂಪತಿಯ ಪುತ್ರ ಅಶೋಕ ರಾವ್ ಸ್ವಾಗತಿಸಿದರೆ, ಗಾಯಕಿ ಅಮೃತಾ ರಾವ್ ಯುಎಸ್ಎ ಪ್ರಾರ್ಥಿಸಿದರು. ಶ್ರೀ ವಸಂತ ರಾವ್ ಹಾಗೂ ವಂದನಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
“ಶತಾಯುಷ್ಯ ಕೃತಜ್ಞತಾ” ಸಂದರ್ಭದಲ್ಲಿ ಶತಾಯುಷಿ ರಾವ್ ದಂಪತಿಯ ಕೃಷಿ ಜೀವನ ಹಾಗೂ ಸಂಗೀತದ ಅಭಿಮಾನ ಅವರಿಗೆ ಒಡನಾಟವಿರುವ ಶ್ರೇಷ್ಠ ಗಾಯಕರ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ತದನಂತರ ಕೃತಜ್ಞತಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಹಾರ್ಮೋನಿಯಂ ವಾದಕ ಪಂಡಿತ್ ಸುವೇಂದು ಬ್ಯಾನರ್ಜಿ ಕೊಲ್ಕತ್ತ ಅವರು ತಮ್ಮ ಹಾರ್ಮೋನಿಯಂ ಸೋಲೋವನ್ನು ವೈವಿದ್ಯಮಯವಾಗಿ ನಡೆಸಿಕೊಡುತ್ತ ಕಿಕ್ಕಿರಿದ ಸಭೆಗೆ ಸಂಗೀತ ರಸದೂಟ ನೀಡಿದರು. ಹಾರ್ಮೋನಿಯಂ ಸೋಲೋಕ್ಕೆ ತಬಲಾದಲ್ಲಿ ಪಂಡಿತ ಶಂತನು ಶುಕ್ಲ ಮುಂಬೈ ಸಾಥ್ ನೀಡಿದರು. ಒಟ್ಟಾರೆಯಾಗಿ ರಾವ್ ದಂಪತಿಗಾಗಿ ಸಂಘಟಿತವಾಗಿದ್ದ ಶತಾಯುಷ್ಯ ಕೃತಜ್ಞತಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆದು ಮಾದರಿಯಾಗಿದೆ.