2,563 total views
ಚಿಟಗುಪ್ಪ: ವನ್ಯ ಸಂಪತ್ತು ಬೆಳೆಸಿ, ಸಂಪತ್ ಭರಿತ ದೇಶವನ್ನಾಗಿ ನಿರ್ಮಾಣ ಮಾಡುವ ಕಾರ್ಯದಲ್ಲಿ ಸರ್ವರ ಸಹಕಾರ ಅಗತ್ಯ ಇದೆ ಎಂದು ಸಾಹಿತಿ, ಪರಿಸರ ಸಂರಕ್ಷಕ ಸಂಗಮೇಶ ಎನ್ ಜವಾದಿ ನುಡಿದರು.ತಾಲೂಕಿನ ಇಟಗಾ ಗ್ರಾಮದ ಶ್ರೀ ಚೆನ್ನಮಲ್ಲೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರಣ್ಯ ಸಂಪತ್ತು ಇಂದು ನಶಿಸಿ ಹೋಗುತ್ತಿದೆ. ಈ ಸಂಪತ್ತು ಸಂರಕ್ಷಣೆ ಮಾಡುವುದು ಇಂದಿನ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರಿಸರ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವನ್ಯ ಸಂಪತ್ತು ಸಂರಕ್ಷಣೆ ಮಾಡುವಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ವಿಶೇಷವಾಗಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಹಾಕಿಕೊಂಡು ಪ್ರತಿಯೊಬ್ಬರಿಗೂ ಸಸಿಗಳು ವಿತರಿಸಿ, ಅವುಗಳ ಪಾಲನೆ ಮಾಡುವ ಮುಖಾಂತರ ಪರಿಸರ ಸಂರಕ್ಷಣೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ನಾಡಿಗೆ ಮಾದರಿಯಾಗಿದೆ ಎಂದರು. ಜನಜಾಗೃತಿ ಜಿಲ್ಲಾ ಸದಸ್ಯ ಅಸ್ಲಾಂಮೀಯಾ ಮಾತನಾಡಿ ಸಸಿಗಳು ನೆಟ್ಟು ದೇಶ ಉಳಿಸಿ, ದೇಶ ಉಳಿದರೆ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ.
ಸರ್ವರೂ ತಪ್ಪದೇ ಸಸಿಗಳು ನೆಟ್ಟು, ಅವುಗಳ ಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಧೂಳಯ್ಯ ಸ್ವಾಮಿಗಳು ಮಾತನಾಡಿ ಪರಿಸರ ಸ್ನೇಹಿ ಜೀವನವನ್ನು ಸರ್ವರೂ ನಡೆಸಬೇಕು. ಇದರಿಂದ ಅನೇಕ ರೋಗಿಗಳಿಂದ ಮುಕ್ತರಾಗುತ್ತೇವೆ. ಮನೆಯಲ್ಲಿ ಅನೇಕ ರೀತಿಯ ಆಯುರ್ವೇದಿಕ್ ಸಸಿಗಳನ್ನು ಬೆಳೆಸಿ, ಮಾನವರ ಪ್ರಾಣಕ್ಕೆ ಸಂಜೀವಿನಿಯಾಗುವಂತಹ ಕೆಲಸ ಆಗಬೇಕು. ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎಂದರು. ತಾಲೂಕಿನ ಯೋಜನಾಧಿಕಾರಿಗಳಾದ ಬಸವರಾಜ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹತ್ತು ಹಲವು ಕಾರ್ಯಕ್ರಮಗಳನ್ನು ಈ ತಾಲೂಕಿನಲ್ಲಿ ಹಾಕಿಕೊಂಡು ತಾಲೂಕಿನ ಅಭಿವೃದ್ಧಿಗಾಗಿ ಈ ಸಂಸ್ಥೆ ಹಗಲಿರಲು ದುಡಿಯುತ್ತಿದೆ. ಪರಿಸರ ಸಂರಕ್ಷಣೆ ಸೇರಿದಂತೆ ಬಡವರ ಪರ, ರೈತಪರ, ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಜಾರಿಗೆ ತಂದಿದ್ದೇವೆ ಎಂದರು.ಕೃಷಿ ಮೇಲ್ವಿಚಾರಕ ಸಿದ್ದು ಪೂಜಾರಿ ನಿರೂಪಿಸಿ, ವಂದಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನರಸಪ್ಪ ಪತ್ಮಾಪೂರ, ಮುಖಂಡರಾದ ಶ್ರೀನಿವಾಸ್ ರೆಡ್ಡಿ, ವಲಯ ಮೇಲ್ವಿಚಾರಕ ರಾಜಶೇಖರ,ಹೈನುಗಾರಿಕೆ ಸಹಾಯಕ ಪ್ರಬಂಧಕ, ಗ್ರಾಮದ ಮಹಿಳಾ ಸೇವಾ ಪ್ರತಿನಿಧಿಗಳು ಸೇರಿದಂತೆ ಸ್ವಸಹಾಯ ಸಂಘಗಳ ಮಾತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.