2,571 total views
ಕುಮಟಾ : ಇತರೆಲ್ಲ ವೃತ್ತಿಗಳಿಗಿಂತಲೂ ಶಿಕ್ಷಕರ ವೃತ್ತಿಯು ಪವಿತ್ರವಾದದು. ಅಲ್ಲದೇ ಅತ್ಯಂತ ಪ್ರತಿಭಾ ಶಾಲಿಗಳು ಮಾತ್ರ ಶಿಕ್ಷಕರಾಗಲು ಸಾಧ್ಯ, ಶಿಕ್ಷಕರಲ್ಲಿ ಸುಪ್ತವಾಗಿರುವ ವೈವಿಧ್ಯಮಯವಾದ ಅಭಿರುಚಿ ಹಾಗೂ ಪ್ರತಿಭೆಯ ಅಭಿವ್ಯಕ್ತಿಗೆ ಸೂಕ್ತ ಭೂಮಿಕೆಯು ಅಗತ್ಯ, ಶಿಕ್ಷಕರು ಕೇವಲ ವರ್ಗಭೋದನೆಗಷ್ಟೇ ತಮ್ಮನ್ನು ಮಿತಿಗೊಳಿಸಿಕೊಳ್ಳದೇ,ತಮ್ಮಲ್ಲಿ ಹುದುಗಿದ ಪಠ್ಯೇತರ ಕೌಶಲ್ಯವನ್ನು ಅನಾವರಣಗೊಳಿಸುವುದಕ್ಕೆ ಇಲಾಖೆಯಿಂದ ಮತ್ತು ಸಾರ್ವಜನಿಕವಾಗಿ ಲಭ್ಯವಾದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಲಕ್ಷ್ಮೀನಾರಾಯಣ ಭಟ್ ರವರು ನುಡಿದರು.
ಅವರು ತಾಲ್ಲೂಕಿನ ಹಿರೇಗುತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಕುಮಟಾ ತಾಲ್ಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
” ಸ್ಪರ್ದಾಳುಗಳು ಬಹುಮಾನಕ್ಕಾಗಿ ಸ್ಪರ್ಧೆಯಲ್ಲಿ ಸ್ಪರ್ಧಿಸದೇ,ಕೇವಲ ಸ್ಪರ್ಧಾಮನೋಭಾವದಿಂದ ಭಾಗವಹಿಸಬೇಕೆಂದು, ನಿರ್ಣಾಯಕರು ನಿಷ್ಪಕ್ಷಪಾತದಿಂದ ನಿರ್ಣಯವನ್ನು ನೀಡಿ ಸ್ಪರ್ಧೆಯ ಪಾವಿತ್ರ್ಯತೆಯನ್ನು ಕರೆ ನೀಡಿದರು”,
ಸಭಾಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಾಲಾ ಪ್ರಭಾರ ಮುಖ್ಯಾಧ್ಯಾಪಕ ಆನಂದು .ಬಿ. ಗಾಂವಕರರವರು “ಶಿಕ್ಷಕರು ಬೌದ್ಧಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಕಣಜ ವಾಗಿದ್ದು, ಅವಕಾಶವನ್ನು ಬಳಸಿಕೊಳ್ಳುವವರೇ ನಿಜವಾದ ಶಿಕ್ಷಕರು” ಎಂದು ಹೇಳಿದರು.
ಶಿಕ್ಷಣ ಸಂಯೋಜಕ ದೀಪಾ ಕಾಮತ್ ಸ್ವಾಗತಿಸಿದರು. ಶಿಕ್ಷಕಿ ಕಲ್ಪನಾ ನಾಯಕ ವಂದಿಸಿದರು, ಸಮೂಹ ಸಂಪನ್ಮೂಲ ವ್ಯಕ್ತಿ ರೋಹಿದಾಸ ನಾಯ್ಕ ನಿರೂಪಿಸಿದರು. ತಾಲ್ಲೂಕಾ ಪ್ರಭಾರ ದೈಹಿಕ ಪರಿವೀಕ್ಷಕರಾದ ಮಿರ್ಜಾನಿನ ಸರ್ಕಾರಿ ಉರ್ದು ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಜಿ.ನಾಯಕ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ತಜ್ಞತೆಯನ್ನು ಹೊಂದಿರುವ ಕರ್ನಾಟಕ ರಾಜ್ಯ ಬೋಧಕರ ಸಂಘ ಹಾಗೂ ಕರ್ನಾಟಕ ಸಂಸ್ಕೃತ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿ, ಡಯಟಿನ ವಿಶ್ರಾಂತ ಉಪನ್ಯಾಸಕ ಹಾಗೂ ಹೆಸರಂತ ಯಕ್ಷಗಾನ ಕಲಾವಿದ ಬಿ.ಎಸ್. ಗೌಡ, ಗೋಕರ್ಣದ ಶ್ರೀ ಭದ್ರಕಾಳಿ ಪದವಿಪೂರ್ವ ಮಹಾವಿದ್ಯಾಲಯದ ಸಂಸ್ಕೃತ ಉಪನ್ಯಾಸಕಿ ಹಾಗೂ ಭರತನಾಟ್ಯ ವಿದೂಷಿ ಪಲ್ಲವಿ ಗೋಪಾಲಕೃಷ್ಣ ಹೆಗಡೆ, ವಾಗ್ಮಿ ಚಿದಾನಂದ ಭಂಡಾರಿ, ಹಿರೇಗುತ್ತಿ ಕಾಲೇಜಿನ ಉಪನ್ಯಾಸಕರಾದ ನಾಗರಾಜ ಗಾಂವಕರ, ರಮೇಶ ಗೌಡ, ಡಯಟಿನ ಉಪನ್ಯಾಸಕರಾದ ತ್ರಿವೇಣಿ ನಾಯಕ,ಗಣೇಶ ನಾಯ್ಕ ಹಾಗೂ ಮುಖ್ಯಾಧ್ಯಾಪಕ ಪಿ.ಎಂ. ಮುಕ್ರಿ ಮೊದಲಾದವರು ನಿರ್ಣಾಯಕರಾಗಿ ಸ್ಪರ್ಧೆಗಳನ್ನು ನ್ನು ಯಶಸ್ವಿಗೊಳಿಸಿದರು.