2,579 total views
ಕಲಬುರಗಿ: – ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದರೆ ಸರಕಾರ ಬಿದ್ದು ಹೋಗುವ ಭಯ ಕಾಂಗ್ರೆಸ್ ಹೈ ಕಮಾಂಡ್ ಗೇ ಕಾಡುತ್ತಿದ್ದರೆ, ಇನ್ನೊಂದೆಡೆ ಸಿಎಂ ಕುರ್ಚಿ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಣ್ಣಿಟ್ಟಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನುಡಿದರು.
ಇಲ್ಲಿನ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಂದೆಡೆ ರಾಜ್ಯ ಸರಕಾರ ಉರುಳಿ ಬೀಳದಂತೆ ಕಾಂಗ್ರೆಸ್ ಹೈಕಮಾಂಡ್ ಆತಂಕಪಡುತ್ತಿದ್ದರೆ ಇನ್ನೊಂದೆಡೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ತಾವು ಸಿಎಂ ಆಗಬೇಕೆಂದು ಖರ್ಗೆ, ಡಿಕೆಶಿ ಮತ್ತು ಪಕ್ಷದ ಇತರ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದರು.
ಎಲ್ಲಕ್ಕಿಂತಲೂ ಮುಖ್ಯಮಂತ್ರಿ ರಾಜ್ಯದ ಕಾಂಗ್ರೆಸ್ ಸರಕಾರ ಆ ಪಕ್ಷದ ಹೈಕಮಾಂಡ್ ಪಾಲಿಗೆ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತಿದೆ. ಒಂದುವೇಳೆ, ಸರಕಾರ ಬಿದ್ದು ಹೋದರೆ ತಮ್ಮ ಪಾಲಿನ ಎಟಿಎಂ ಬಂದ್ ಆಗುತ್ತದೆ ಎಂಬ ಆತಂಕ ಆ ಪಕ್ಷದ ಹೈಕಮಾಂಡನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಹೀಗಾಗಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ರಾಜೀನಾಮೆಗೆ ಒತ್ತಾಯಿಸದೆ ಸೈಲೆಂಟಾಗಿ ಕುಳಿತಿದೆ ಎಂದು ಟೀಕಿಸಿದರು.
ಮುಡಾ ಹಗರಣ ಕುರಿತು ಪ್ರಸ್ತಾಪಿಸಿದ ಅವರು, ಮುಡಾ ವಿದ್ಯಮಾನ ರಾಜ್ಯದ ಬೆಳವಣಿಗೆ ಮತ್ತು ಕಾಂಗ್ರೆಸ್ ಪಕ್ಷದ ಪಾಲಿಗೆ ಕಪ್ಪುಚುಕ್ಕೆ ಎಂದು ವ್ಯಾಖ್ಯಾನಿಸಿದರು.
ಒಬ್ಬ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದು ತಮ್ಮ ವಿರುದ್ಧದ ವಿಚಾರಣೆಗೆ ಹಾಜರಾಗುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಹೀಗೆ ಆಗಬಾರದಿತ್ತು ಎಂದು ಅವರು ಸಿದ್ದರಾಮಯ್ಯ ಲೋಕಾಯುಕ್ತ ಅಧಿಕಾರಿಗಳ ಎದುರು ವಿಚಾರಣೆ ಎದುರಿಸಿದ್ದನ್ನು ಉಲ್ಲೇಖಿಸುತ್ತಾ ಬೇಸರ ವ್ಯಕ್ತಪಡಿಸಿದರು.
ಮುಡಾ ವಿಚಾರದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬುದು ಕಾಂಗ್ರೆಸ್ ಧೋರಣೆಯಾಗಿದೆ. ತಮ್ಮ ಮೇಲೆ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡಲು ಸಿದ್ದರಿಲ್ಲ. ಮತ್ತೊಂದೆಡೆ, ಈ ಹಿಂದೆ ತಮ್ಮ ಮೇಲೆ ಆರೋಪ ಬಂದಾಗ ಸಿದ್ದರಾಮಯ್ಯ ಮತ್ತು ಡಿಕೆಶಿ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದು ಹೋರಾಟ ನಡೆಸಿದರು. ಅದೇ ನಿಯಮ ಇಲ್ಲಿಯೂ ಅನ್ವಯವಾಗಬೇಕಿತ್ತು ತಾನೇ? ಎಂದು ಪ್ರಶ್ನಿಸಿದರು.
ಈಗಲೂ ಕಾಲ ಮಿಂಚಿಲ್ಲ. ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಒಂದೊಮ್ಮೆ ಅವರು ತಪ್ಪಿತಸ್ಥರಲ್ಲ ಎಂದು ಸಾಬೀತಾದರೆ ಪುನಃ ಸಿಎಂ ಸ್ಥಾನ ಅಲಂಕರಿಸಲಿ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಾಯಲ್ಲಿ ಏನು ಇಟ್ಕೊಂಡಿದ್ದೀರಿ?
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೀನ್ಚಿಟ್ ಪಡೆದು ಬಂದಿದ್ದಾದರೆ ಅವರು ಸಿಎಂ ಸ್ಥಾನದಲ್ಲಿ ಮುಂದುವರೆಯಲು ನಮ್ಮದೇನೂ ಅಭ್ಯಂತರ ಇಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಸಮಜಾಯಿಷಿ ನೀಡಿದರು.
ಪ್ರಕರಣದ ಆರಂಭದಲ್ಲಿ ಸಿದ್ದರಾಮಯ್ಯ ಸತ್ಯಮೇವ ಜಯತೆ ಅಂದಿದ್ದರು. ಎಫ್ಐಆರ್ ದಾಖಲಾದ ಮೇಲೆ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ. ತನಿಖೆಯಲ್ಲಿ ತಾವು ತಪ್ಪಿತಸ್ಥ ಎಂಬುದು ಸಾಬೀತಾದರೆ ಮಾತ್ರ ರಾಜೀನಾಮೆ ನೀಡುವುದಾಗಿ ಭಂಡತನಕ್ಕೆ ಇಳಿದಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಹಾಗಾದರೆ, ತಮ್ಮ ವಿರುದ್ಧದ ಪ್ರಕರಣದಲ್ಲಿ ತನಿಖೆಗೂ ಮುಂಚೆಯೇ ರಾಜೀನಾಮೆಗೆ ಆಗ್ರಹಿಸಿದ್ದ ಸಿದ್ದರಾಮಯ್ಯ, ಈಗ ತಾವು ರಾಜೀನಾಮೆ ನೀಡುವುದಿಲ್ಲ ಎನ್ನುವುದಾದರೆ ‘ನೀವು ಬಾಯಲ್ಲಿ ಏನು ಇಟ್ಕೊಂಡಿದ್ದೀರಿ?’ ಎಂದು ಖಾರವಾಗಿ ಪ್ರಶ್ನಿಸಿದರು.
‘ಮುಡಾ ಹಗರಣ ಹೊರ ಬಂದಾಗ ನನಗೆ ಸಿದ್ದರಾಮಯ್ಯ ಅವರ ಪತ್ನಿ ನೆನಪಾದರು. ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ದೇವಸ್ಥಾನ ಬಿಟ್ಟರೆ ಮನೆಯಿಂದ ಹೊರಗಡೆ ಬಂದಿದ್ದು ಈವರೆಗೆ ಯಾರೂ ನೋಡಿಲ್ಲ. ಅಂಥವರ ಮೇಲೆ ಈಗ ಆಪಾದನೆ ಬಂದಿದೆ. ಇನ್ನಾದರೂ ಸಿದ್ದರಾಮಯ್ಯನವರೇ ನೀವು ತಪ್ಪಿತಸ್ಥರಲ್ಲ ಎಂದು ನಾಟಕೀಯ ಮಾತುಗಳನ್ನಾಡುವುದನ್ನು ಬಿಡಬೇಕು’ ಎಂದು ಸಲಹೆ ನೀಡಿದರು. ವರದಿ-ಡಾ ಎಮ್ ಬಿ ಹಡಪದ ಸುಗೂರ ಎನ್