2,587 total views
ಚಿಂಚೋಳಿ:- ಚಿಂಚೋಳಿಯ ಹೊರವಲಯದಲ್ಲಿರುವ ಸಿದ್ದಸಿರಿ ಎಥೆನಾಲ್ ಕಾರ್ಖಾನೆಯನ್ನು ಪ್ರಾರಂಭಿಸುವಂತೆ ಕುರಿತು ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆಯನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.
ಚಿಂಚೋಳಿಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ನೂರಾರು ಜನ ರೈತರು ಸೇರಿಕೊಂಡು ತಮ್ಮ ತೋಳುಗಳಿಗೆ ಕಪ್ಪುಬಟ್ಟೆಯನ್ನು ಕಟ್ಟಿಕೊಂಡು ರೈತಪರ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.
ಪ್ರತಿಭಟನೆಯ ಕುರಿತು ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶಿವಶರಣಪ್ಪ ಜಾಪಟ್ಟಿ ಮಾತನಾಡಿ, ಸಿದ್ದಸಿರಿ ಕಾರ್ಖಾನೆ ಪ್ರಾರಂಭಿಸಿದ್ದು ಈ ಭಾಗದ ರೈತಾಪಿ ವರ್ಗಕ್ಕೆ ಅನುಕೂಲಕರವಾಗಲೆಂದು ಆದರೇ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ದುರುದ್ದೇಶದಿಂದ ಕಾರ್ಖಾನೆಯನ್ನು ಬಂದ್ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ ರೈತರ ಹಿತ ಕಾಪಾಡುವಂತಹ ಮನೋಭಾವವಿದ್ದರೆ ಕೂಡಲೇ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ ಮೇಲ್ಮನವಿಯನ್ನು ವಾಪಸ್ಸು ಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಐನಾಪುರದ ಸಿದ್ದೇಶ್ವರ ಹಿರೇಮಠದ ಪೂಜ್ಯ ಪಂಚಾಕ್ಷರಿ ದೇವರು ಮಾತನಾಡಿ, ಎಲ್ಲ ರಾಜಕೀಯ ಪಕ್ಷದ ರಾಜಕೀಯ ನಾಯಕರುಗಳು ತಾವು ಅಧಿಕಾರಕ್ಕೆ ಬರಬೇಕಾದರೆ ರೈತರ ಒಳಿತಿಗಾಗಿ ನಾವು ಕೆಲಸ ಮಾಡುತ್ತೇವೆ ನಾವು ಕೂಡ ರೈತರ ಮಕ್ಕಳೇ ಎನ್ನುವಂತಹ ಆಣೆ ಪ್ರಮಾಣಗಳನ್ನು ಮಾಡಿಕೊಂಡು ಅಧಿಕಾರಕ್ಕೆ ಬಂದು ಅಧಿಕಾರದ ಗದ್ದುಗೆಯ ಮೇಲೆ ಕುಳಿತ ನಂತರ ರೈತರ ಬೆನ್ನು ಮೂಳೆ ಮುರಿಯುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ರಟಕಲ್ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು,ನರನಾಳ ಹಿರೇಮಠದ ಶಿವಕುಮಾರ ಶಿವಾಚಾರ್ಯರು, ಚಿಮ್ಮಾಈದ್ಲಾಯಿನ ವಿಜಯ ಮಹಾಂತೇಶ್ವರ ಶಿವಾಚಾರ್ಯರು, ನೀಡಗುಂದಾದ ಕಂಚಾಳಕುಂಠಿ ಮಠದ ಕರುಣೆಶ್ವರ ಶಿವಾಚಾರ್ಯರು, ಸುಲೇಪೇಟದ ಪೂಜ್ಯ ಪಂಪಾಪತಿ ಮರಿದೇವರು ಸೇರಿದಂತೆ ಇನ್ನಿತರ ಶಿವಾಚಾರ್ಯರು ರೈತರು ಅನುಭವಿಸುವ ಕಷ್ಟಕಾರ್ಪಣ್ಯದ ಬಗೆಗೆ ಮಾತನಾಡಿದರು. ನಂದಿಕುಮಾರ ಪಾಟೀಲ್, ಜಗದೀಶ ಪಾಟೀಲ್, ಆರ್.ಆರ್.ಪಾಟೀಲ್, ವೀರಣ್ಣ ಗಂಗಾಣಿ, ಚಿತ್ರಶೇಖರ ಪಾಟೀಲ್, ಕೆ.ಎಂ.ಬಾರಿ, ಗೌತಮ ಪಾಟೀಲ್, ಗೌರಿಶಂಕರ ಉಪ್ಪಿನ್, ವಿಜಯಕುಮಾರ ಚೆಂಗಟಿ ಸೇರಿದಂತೆ ಅನೇಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯ ನಂತರ ರೈತರ ಹಿತಾಸಕ್ತಿ ಸಮಿತಿಯು ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಸವೇಶ್ವರ ವೃತ್ತದಲ್ಲಿನ ರಸ್ತೆಯನ್ನು ಬಂದ್ ಮಾಡಿದ್ದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ವಾಹನಗಳು ಸ್ಥಗಿತಗೊಂಡು ಪ್ರಯಾಣಿಕರಿಗೆ ಕೆಲಕಾಲ ತೊಂದರೆಯುಂಟಾಯಿತು. ಪರಿಸ್ಥಿತಿ ಕೈ ಮೀರಿ ಹೋಗಿ ಅಹಿತಕರ ಘಟನೆಗಳು ಜರುಗಬಾರದೆಂದು ಡಿ.ವೈ.ಎಸ್ಪಿ. ಸಂಗಮನಾಥ ಹಿರೇಮಠ,ಸಿಪಿಐ ಕಪಿಲ್ ದೇವ, ಪಿ ಎಸ್.ಐ ಗಂಗಮ್ಮಾ ಸೇರಿದಂತೆ ರಸ್ತೆ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿ ಹೇಳಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿ ಕೊಡಿ ಎಂದು ಮನವರಿಕೆ ಮಾಡುವ ಸಂದರ್ಭದಲ್ಲಿ ಪ್ರತಿಭಟನೆಕಾರರ ಮತ್ತು ಪೆÇಲೀಸ್ ಅಧಿಕಾರಿಗಳ ಮಧ್ಯೆ ಸ್ವಲ್ಪ ವಾಗ್ವಾದ ನಡೆಯಿತು. ಆದರೂ ಪ್ರತಿಭಟನೆಯಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಜರುಗದಂತೆ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎಚ್ಚರ ವಹಿಸಿ ಬಿಗಿ ಭದ್ರತೆ ನೀಡುವಲ್ಲಿ ಯಶಸ್ವಿಯಾದರು.
ವರದಿ-ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.