3,299 total views
ಕುಮಟಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಮೆಯಲ್ಲಿ ಸಾರ್ಥಕ ಸೇವಿ ಸಲ್ಲಿಸಿ ಅಂಕೋಲಾ ತಾಲೂಕಿನ ಕೇ.ಪಿ.ಎಸ್ ಅಗಸೂರು ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಸರಿತಾ ಆಚಾರಿ ರವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸರಿತಾ ಆಚಾರಿ ರವರು “ನನ್ನ ವೃತ್ತಿ ಜೀವನದಲ್ಲಿ ಕಡಮೆ ಶಾಲೆ ಎಂಬುದು ವಿಶೇಷ ಅಧ್ಯಾಯವಾಗಿ ಅಚ್ಚಳಿಯದೆ ನೆನಪಿನಲ್ಲಿ ಉಳಿಯಲಿದೆ, ಕಡಮೆ ಶಾಲೆಯಲ್ಲಿರುವ ಕಲಿಕೆಗೆ ಪೂರಕವಾದ ವಾತಾವರಣ, ಹಿರಿಯ ಶಿಕ್ಷಕರ ಮಾರ್ಗದರ್ಶನ, ಕುಟುಂಬದಂತೆ ಇರುವ ಶಿಕ್ಷಕರ ಬಳಗ, ಪ್ರೀತಿ ತೋರುವ ವಿದ್ಯಾರ್ಥಿಗಳ ಅಪಾರ ಪ್ರೀತಿಗೆ ನಾನೆಂದು ಆಭಾರಿಯಾಗಿರುವೆ. ಕಡಮೆ ಶಾಲೆಯಲ್ಲಿ ಸಲ್ಲಿಸಿದ ಸೇವೆ ನನ್ನ ವೃತ್ತಿ ಜೀವನದ ಅವಿಸ್ಮರಣೀಯ ನೆನಪು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕರಾದ ಉಮಾ ನಾಯ್ಕ ರವರು “ಶಿಕ್ಷಕ ವೃತ್ತಿಯಲ್ಲಿ ಆಗಮನ ಮತ್ತು ನಿರ್ಗಮನ ಅನಿವಾರ್ಯವಾಗಿದ್ದರು ಕೂಡ ಸರಿತಾ ಆಚಾರಿ ರವರಂತಹ ಆದರ್ಶ ಶಿಕ್ಷಕಿ ನಮ್ಮ ಶಾಲೆಯನ್ನು ಬೀಳ್ಕೊಟ್ಟು ಬೇರೆ ಶಾಲೆಗೆ ವರ್ಗಾವಣೆಯಾಗಿ ಸೇವೆ ಸಲ್ಲಿಸಲು ಹೋಗುತ್ತಿರುವುದು ನಮಗೆ ದುಃಖದ ಸಂಗತಿ, ಆದರೆ ಶಿಕ್ಷಣವೆಂಬುದು ನಿಂತ ನೀರಲ್ಲ, ಅದು ಹರಿಯುವ ನೀರಂತೆ ಸರಿತಾ ಆಚಾರಿ ರವರ ಮುಂಬರುವ ಸೇವಾ ದಿನಗಳು ಕೂಡ ಕೀರ್ತಿ ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದರು.” ಶಿಕ್ಷಕರಾದ ದೇವಯಾನಿ ನಾಯಕ, ಆನಂದ ನಾಯ್ಕ, ರಾಜೀವ ಗಾಂವಕರ, ವಿದ್ಯಾರ್ಥಿಗಳು ಸರಿತಾ ಆಚಾರಿ ರವರ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗರತ್ನ ಗೌಡ, ಸವಿತಾ ಗೌಡ ಉಪಸ್ಥಿತರಿದ್ದು ಹೊಸದಾಗಿ ವರ್ಗಾವಣೆ ಮೂಲಕ ಶಾಲೆಗೆ ಆಗಮಿಸಿದ ಶಿಕ್ಷಕಿ ನಯನಾ.ಜಿ.ಪಿ ರವರನ್ನು ಶಾಲೆಯ ಪರವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮವು ಕುಮಾರಿ ಖುಷಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಿಕ್ಷಕಿ ವೈಶಾಲಿ ನಾಯಕ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಲತಾ ಗೌಡ ವಂದಿಸಿದರು.