2,360 total views
ಕಾಳಗಿ :ಪ್ಲಾಸ್ಟಿಕ್ ಮುಕ್ತ ಕಾಳಗಿಯನ್ನಾಗಿ ಮಾಡಿ ಮರುಬಳಕೆಯಾಗದ ಪ್ಲಾಸ್ಟಿಕ್ ಕೈ ಚೀಲಗಳು ಸೇರಿದಂತೆ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದು ಹಾಗೂ ಖರೀದಿಸುವುದನ್ನು ಸರ್ಕಾರ ನಿಷೇಧಿಸಿರುವ ಕಾರಣ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಪಂಕಜಾ ಆಂಜನೇಯ ಹೇಳಿದರು.
ಪಟ್ಟಣದ ಪಟ್ಟಣ ಪಂಚಾಯತ್ ಕಛೇರಿಯಲ್ಲಿ ಶುಕ್ರವಾರ ಡೇನೆಲ್ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಪತ್ರಿಕಾ ವಿತರಕರಿಗೆ ಗುರುತಿನ ಚೀಟಿ ವಿತರಣೆ ಹಾಗೂ ಸ್ವಚ್ಚತಾ ಹೀ ಸೇವಾ ಅಭಿಯಾನದಡಿ ಪ್ಲಾಸ್ಟಿಕ್ ನಿಷೇಧ, ಹಸಿ ಕಸ, ಒಣ ಕಸ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಪಟ್ಟಣದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು, ಅಂಗಡಿ-ಮುಂಗಟ್ಟುಗಳಲ್ಲಿ ಮಾರಾಟ ಮಾಡುವವರಿಗೆ ಯಾವ್ಯಾವ ಪ್ಲಾಸ್ಟಿಕ್ ನಿಷೇಧವಾಗಿದೆ, ಯಾವುದನ್ನು ಬಳಸಲು ಅನುಮತಿಯಿದೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಸಿಬ್ಬಂಧಿಗಳಿಗೆ ಸೂಚಿಸಿದರು.
ಮರುಬಳಕೆಯಾಗದ ಪ್ಲಾಸ್ಟಿಕ್ ಕೈ ಚೀಲಗಳು ಸೇರಿದಂತೆ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದು ಹಾಗೂ ಖರೀದಿಸುವುದನ್ನು ಸರ್ಕಾರ ನಿಷೇಧಿಸಿರುವ ಕಾರಣ ಶಿಕ್ಷಾರ್ಹ ಅಪರಾಧವಾಗಿದೆ. ಆದರೂ, ಬೀದಿ ವ್ಯಾಪಾರಿಗಳು, ಅಂಗಡಿ ಮುಗ್ಗಟ್ಟುಗಳಲ್ಲಿ ಪ್ಲಾಸ್ಟಿಕ್ ಚೀಲ ಬಳಸುತ್ತಿರುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪಟ್ಟಣದ ಸ್ವಚ್ಚತೆ, ನಾಗರೀಕರ ಆರೋಗ್ಯಕ್ಕಾಗಿ ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಅದರಿಂದ ಸಾರ್ವಜನಿಕರು ಪ್ರತಿ ವಾರ್ಡ್ನಲ್ಲೂ ಕಸ ತುಂಬಿಸಿಕೊಳ್ಳುವ ಆಟೊಗಳು ಬಂದಾಗ ಮನೆಯ ಕಸವನ್ನು ನೀಡಬೇಕು. ರಸ್ತೆ, ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯಬಾರದು. ಮನೆ ಸುತ್ತಮುತ್ತ ಇರುವ ಖಾಲಿ ಜಾಗಕ್ಕೆ ಹಾಕುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದರು.
ಇದೇ ವೇಳೆ ಪತ್ರಿಕಾ ವಿತರಕರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಪಪಂ ಮುಖ್ಯಾಧಿಕಾರಿ ಪಂಕಜಾ ಆಂಜನೇಯ ಗುರುತಿನ ಚೀಟಿ ವಿತರಿಸಿದರು.ಸಮುದಾಯ ಸಂಘಟನಾ ಅಧಿಕಾರಿ ರೇಣುಕಾ ಕಾಬಾ, ಕಿರಿಯ ಆರೋಗ್ಯ ಸಹಾಯಕ ಆನಂದ ಕಾಶಿ, ಸಮೂದಾಯ ಸಂಪನ್ಮೂಲ ವ್ಯಕ್ತಿ ಸಾವಿತ್ರಿ ಒಡೆಯರಾಜ್, ಸಿಬ್ಬಂದಿ ಕಾಳೇಶ್ವರ ಮಡಿವಾಳ, ವಿಶಾಲ ಮೊಟಗಿ, ಪತ್ರಿಕೆ ವಿತರಕರಾದ ಕುಮಾರಸ್ವಾಮಿ ಕೋಡ್ಲಿ, ಲಖನ್ ಮೋಘಾ, ರಾಮ ಮೋಘಾ, ಬೀದಿ ಬದಿ ವ್ಯಾಪಾರಿಗಳಾದ ಚಂದ್ರಕಾಂತ ಶೆಗಾಂವಕಾರ, ಪ್ರಲ್ಹಾದ ಸಿಂಗಶೆಟ್ಟಿ, ರೀಯಾಜ್ ಸಾಬ್ ಚಾಂದನೋರ ಇದ್ದರು.