2,399 total views
ಕಲಬುರಗಿ:- ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗುಣತೀರ್ಥ ವಾಡಿಯಲ್ಲಿ ಯುವತಿ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕೋಲಿ/ಕಬ್ಬಲಿಗ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಮಿತಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಅವರ ನೇತೃತ್ವದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಟಾಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಯುವತಿಯ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಯುವತಿ ಕುಟುಂಬಕ್ಕೆ ಸರ್ಕಾರದಿಂದ 5 ಎಕರೆ ಜಮೀನು ಮಂಜೂರು ಮಾಡಬೇಕು, ಕುಟುಂಬ ನಿರ್ವಹಣೆಗಾಗಿ ಸರ್ಕಾರಿ ನೌಕರಿ ಮತ್ತು ಒಂದು ಕೋಟಿ ರೂ.ಪರಿಹಾರ ನೀಡಬೇಕು ಎಂದು ಮನವಿಪತ್ರದಲ್ಲಿ ಆಗ್ರಹಿಸಲಾಗಿದೆ.
ಇದೇ ತಿಂಗಳ 17 ರಂದು ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೋಲಿ/ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರ್ಪಡೆ ಮಾಡಲು ನಿರ್ಣಯ ಕೈಗೊಳ್ಳಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.
ಕೋಲಿ/ಕಬ್ಬಲಿಗ ಸಮನ್ವಯ ಸಮಿತಿ ಸದಸ್ಯರು, ಮುಖಂಡರು, ಸ್ವಾಮೀಜಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ-ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್