2,425 total views
ಹುಣಸೂರು : ಭತ್ತದ ನಾಟಿ ಮಾಡುವ ಗದ್ದೆಯಂತೆ ಕಾಣುತ್ತಿರುವ ರಸ್ತೆ, ರಸ್ತೆಯುದ್ದಕ್ಕೂ ತುಂಬಿದ ಕೆಸರು ರಸ್ತೆ, ರಸ್ತೆಯುದ್ದಕ್ಕೂ ತಗ್ಗು-ಗುಂಡಿ ಬಿದ್ದಿದ್ದು, ಅಲ್ಲಲ್ಲಿ ಬಿದ್ದ ಗುಂಡಿಗಳಲ್ಲಿ ಮಳೆ ನೀರು ನಿಂತು ನಿರ್ಮಾಣಗೊಂಡ ಬೃಹತ್ ಹೊಂಡಗಳು. ಜಿನಿ ಜಿನಿ ಮಳೆಗೆ ಸುಸ್ತಾದ ಜನತೆ. ಇದು ಹುಣಸೂರು ತಾಲ್ಲೂಕು ಹನಗೋಡು ಹೋಬಳಿ ಹೆಗ್ಗಂದೂರು ಗ್ರಾಮದ ಒಂದು ಭಾಗದ ರಸ್ತೆಯ ಪರಿಸ್ಥಿತಿ.
ಹೆಗ್ಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೆ ಬರುವ ಗ್ರಾಮದಲ್ಲಿ ಈ ರೀತಿಯ ಹದಗೆಟ್ಟ ರಸ್ತೆ ಕಂಡುಬಂದಿರುವಂತದು. ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಮಳೆ ನೀರಿನಿಂದ ಕೆಸರು ಆಗಿದೆ. ಹೀಗಾಗಿ ಪಾದಚಾರಿಗಳು, ವಾಹನ ಸವಾರರು ಸುಗಮ ಸಂಚಾರಕ್ಕೆ ಪರಿತಪ್ಪಿಸುವಂತಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಂಗೆಟ್ಟಿರುವ ಜನರು ಆಡಳಿತ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ನಡೆದುಕೊಂಡು ಹೋಗಲು ಸಮಸ್ಯೆಯಾಗಿದೆ. ಇದರ ನಡುವೆ ಗ್ರಾಮದ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾವಣೆ ಮಾಡುವ ಸ್ಥಿತಿ ಬಂದಿದೆ. ಮಳೆಗಾಲ ಮುಗಿಯುವರೆಗೂ ನಿತ್ಯ ನರಕಯಾತನೆ ಅನುಭವಿಸಂತಾಗಿದೆ.
ಮುಖ್ಯವಾಗಿ ಮಳೆ ನೀರು ಹರಿದುಕೊಂಡು ಹೋಗಲು ಚರಂಡಿ ಅವಶ್ಯವಿದೆ. ಆದರೆ ಚರಂಡಿಯೇ ಇಲ್ಲ. ಹೀಗಾಗಿ ನೀರು ರಸ್ತೆ ಮೇಲೆ ನಿಲ್ಲುವಂತಾಗಿದೆ. ಒಂದು ವೇಳೆ ಚರಂಡಿ ವ್ಯವಸ್ಥೆ ಇದ್ದಿದ್ದರೆ ಸರಾಗವಾಗಿ ಹರಿದುಕೊಂಡು ಮಳೆ ನೀರು ಹೋಗುತ್ತಿತ್ತು. ಇದೀಗ ಈ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. ರಸ್ತೆ ಹದಗೆಡಲು ಇದೊಂದು ಸಹ ಕಾರಣವಾಗಿದೆ.
ರಸ್ತೆಯಲ್ಲಿ ನಡೆಯಲು ಹೆದರಿಕೆ ಆಗುತ್ತಿದೆ. ನಡೆಯುವ ವೇಳೆ ಕಾಲಿಗೆ ಕೆಸರು ಮೆತ್ತಿಕೊಳುತ್ತಿದೆ ಇದರಿಂದಾಗಿ ಜಾರಿ ಬೀಳುವಂತಹ ಸ್ಥಿತಿ ಒದಗಿ ಬಂದಿದೆ.
ಸ್ಥಳಿಯರಾದ ಕೀರ್ತಿಕುಮಾರ್ ಮಾತನಾಡಿ, ತಾವು ಬೆಳೆದ ಫಸಲುಗಳನ್ನು ಸುಗಮವಾಗಿ, ತಂದೊಯ್ಯಲು, ಮಕ್ಕಳು ಶಾಲೆಗೆ ತೆರಳಲು, ಅನಾರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ವಾಹನ ಸಂಚರಿಸಲು ತುಂಬಾನೆ ತೊಂದರೆಯಾಗುತ್ತದೆ. ಈ ವಿಷಯವಾಗಿ ಪಂಚಾಯಿತಿಗೆ ಮನವಿ ಮಾಡಿದ್ದೀವಿ. ಪಂಚಾಯಿತಿಯಿಂದ ಅನುದಾನ ಬಿಡುಗಡೆಯಾಗಿ ರಸ್ತೆ ಕಾಮಾಗಾರಿ ಪ್ರಾರಂಭವಾದ ವೇಳೆ ಗ್ರಾಮದ ಕೆಲವು ಮುಖಂಡರ ದುರಾಸೆ ಹಾಗೂ ಅಸಮಾದಾನದಿಂದ ರಸ್ತೆ ಕಾಮಗಾರಿಗೆ ತಡೆಯುಂಟಾಗಿದೆ. ಆಗಾಗಿ ಮುಂದಾದರೂ ಸಂಬಂದಿಸಿದ ಹಿರಿಯ ಅಧಿಕಾರಿಗಳು ಗ್ರಾಮಸ್ಥರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ರಸ್ತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.