3,380 total views
ಚಿತ್ತಾಪುರ:- ಮುಂಗಾರು ಮಳೆ ಆರಂಭವಾದರೆ ರೈತರಿಗೆ ಹಬ್ಬದ ದಿನಗಳು ಆರಂಭವಾದಂತೆ. ಮುಂಗಾರು ಬಿತ್ತನೆಯ ಕೆಲಸ ಮುಗಿಯುತ್ತಿದ್ದಂತೆ ರೈತರು, ಹಬ್ಬಗಳ ಆಚರಣೆ ಆರಂಭಿಸುತ್ತಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಾರಹುಣ್ಣಿಮೆಯನ್ನು ಆಚರಿಸಿರುವ ರೈತ ಬಾಂಧವರು ಇದೀಗ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆಗೆ ಸಜ್ಜಾಗುತ್ತಿದ್ದಾರೆ.
ನಗರದಲ್ಲಿ ಮತ್ತು ತಾಲ್ಲೂಕಿನ ನಾಲವಾರ ಪಟ್ಟಣ ಹಾಗೂ ವಿವಿಧ ಗ್ರಾಮದ ಮಾರುಕಟ್ಟೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಮಣ್ಣೆತ್ತುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಇಂದು ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ರೈತರು ಸೇರಿದಂತೆ ಸಾರ್ವಜನಿಕರು ಮಣ್ಣೆತ್ತಿನ ಗೊಂಬೆಗಳನ್ನು ಖರೀದಿಸುತ್ತಿದ್ದಾರೆ. ನಮ್ಮೂರಿನ ಕಲಾವಿದರಾದ ಕುಂಬಾರ ಸಮುದಾಯದ ಕೆಲವರು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಕಲಾವಿದರು ಮಣ್ಣಿನಿಂದ ಎತ್ತುಗಳನ್ನು ತಯಾರಿಸಲು ಸ್ಥಳೀಯವಾಗಿ ಉತ್ತಮ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ.
ತಯಾರಿಸಲು ಮಣ್ಣನ್ನು ಜರಡಿ ಹಿಡಿದು, ಸಣ್ಣನೆ ಮಣ್ಣನ್ನು ಕೆಲ ದಿನಗಳವರೆಗೆ ನೆನೆ ಹಾಕಿ, ನಂತರ ಹತ್ತಿಯನ್ನು ಮಣ್ಣಿನ ಜತೆ ಬೆರಸಿ, ಕುಟ್ಟುತ್ತಾರೆ. ಹದವಾದ ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತಾರೆ. ನಂತರ ತೈಲ ವರ್ಣದಿಂದ ಎತ್ತುಗಳ ಕಣ್ಣು, ವಿಭೂತಿ ಮುಂತಾದವುಗಳನ್ನು ಚಿತ್ರಿಸುತ್ತಾರೆ. ಸುಂದರವಾದ ಮಣ್ಣೆತ್ತುಗಳನ್ನು ಜೋಡಿಗೆ 20 ರೊ. 30 ರೊ ಮಾರಾಟ ಮಾಡುತ್ತಾರೆ. ನಮ್ಮೂರಿನ ತಮ್ಮ ಸ್ವಂತ ಕುಲ ಕಸುಬು ಕಾಯಕದಲ್ಲಿ ಶ್ರೀ ಶಾಂತಮ್ಮ ಕುಂಬಾರ ಸುಗೂರ ಎನ್ ಈ ಹಿರಿಯ ಅಜ್ಜಿ ಬಡತನದ ಜೀವನದಲ್ಲಿ ತಮ್ಮ ಕಾಯಕ ವೃತ್ತಿಯನ್ನು ಹೀಗೆ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಈ ಕುರಿತು ಮಾತನಾಡಿ, 28 ಅಥವಾ 30 ವರ್ಷಗಳಿಂದ ಮಣ್ಣೆತ್ತುಗಳನ್ನು ತಯಾರು ಮಾಡುತ್ತಿದ್ದು, ಗ್ರಾಮದಲ್ಲಿ ಮನೆ ಮನೆಗೆ ಸ್ವತಃ ತಾವೇ ಹೋಗಿ ಮಣ್ಣೆತ್ತಿನ ಬಸವಣ್ಣ ನೀಡುತ್ತಾರೆ. ಕನಸಿನ ಭಾರತ್ ಭಾರತ ಪತ್ರಿಕೆಯ ವರದಿಗಾರರು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಮನೆಗೆ ಹೋಗಿ ಭೇಟಿ ನೀಡಿ ಈ ವಿಷಯದ ಬಗ್ಗೆ ಪ್ರಸ್ತುತ ಪಡಿಸಿದರು .ಅಜ್ಜಿಯವರು ಇದರಲ್ಲಿ ನಮಗೆ ಅಷ್ಟೇನು ಲಾಭವಿಲ್ಲ ಎಂದರು.
ರೈತಾಪಿ ವರ್ಗಕ್ಕೆ ಎತ್ತುಗಳೇ ದೇವರ ಸ್ವರೂಪಿಗಳಾಗಿವೆ. ಕಾಯಕದಲ್ಲಿ ತೊಡಗುವ ಎತ್ತುಗಳನ್ನೇ ದೇವರ ರೂಪದಲ್ಲಿ ಪೂಜೆ ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಕಾರು ಹುಣ್ಣಿಮೆಯಲ್ಲಿ ಎತ್ತುಗಳನ್ನು ಅದ್ಧೂರಿಯಿಂದ ಮೆರವಣಿಗೆ ಮಾಡಿದರೆ, ಮಣ್ಣೆತ್ತಿನ ಅಮಾವಾಸ್ಯೆಯ ವೇಳೆ ಮಣ್ಣಿನ ಎತ್ತುಗಳನ್ನು ಪೂಜೆ ಮಾಡಿ ಸಂಜೆ ವೇಳೆ ಭಕ್ತಿಯಿಂದಲೇ ನದಿ ತಟಗಳಿಗೆ ವಿಸರ್ಜನೆ ಮಾಡುವ ಸಂಪ್ರದಾಯವಿದೆ. ಗ್ರಾಮೀಣ ಭಾಗದಲ್ಲಿ ಹುಡುಗರು ಎತ್ತಿನ ಗುಡಿಯನ್ನು ಮಾಡಿ ಮನೆ ಮನೆಯಿಂದ ಕಾಳು ಕೇಳಿ ತಂದು ಸಿಹಿ ಊಟ ಮಾಡಿ ಪೂಜ್ಯನೀಯವಾಗಿ ಮಣ್ಣಿನ ಎತ್ತು ವಿಸರ್ಜನೆ ಮಾಡುವ ಪದ್ಧತಿಯಿದೆ. ಈ ಹಬ್ಬದ ಸಡಗರವೂ ಜೋರಾಗಿಯೇ ಆಚರಿಸಲಾಗುತ್ತದೆ ಎಂದು ಶ್ರೀ ಬಸವರಾಜ ಹಡಪದ ಸುಗೂರ ಎನ್ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇವೆ ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಹೇಳಿದರು. ವರದಿ-ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್