2,735 total views
ಕಲಬುರಗಿ:- ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಹಿಂಪಡೆಯಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಹನುಮಂತ್ ಬಗಲಿ ಅವರು ಮಾತನಾಡಿ, ಭಾರತ ದೇಶದಲ್ಲಿ ಭಾರತದ ಶಿಕ್ಷಣ ನೀತಿ ಜಾರಿಗೆ ಬರಬೇಕು. ಅದು ಮುಂದಿನ ಹತ್ತಾರು ವರ್ಷಗಳ ನಂತರ ದೇಶದಲ್ಲಿ ಕೌಶಲ್ಯಯುತ ಯುವಶಕ್ತಿ ಹೊರಗಡೆ ಬರಬೇಕು. ಬ್ರಿಟಿಷ್ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣವನ್ನ ಪಡೆಯಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಈ ದೇಶದ ಸರ್ಕಾರ ಜಾರಿಗೆ ತಂದಿದ್ದು ಅದನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ರಾಜ್ಯ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇಂದಿನ ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಹಿಂಪಡೆಯುತ್ತೇವೆ ಎಂದು ಹೇಳಿದ ಕಾರಣಕ್ಕೋಸ್ಕರ ಒಂದು ಶಿಕ್ಷಣ ನೀತಿಯನ್ನ ಬದಲಾವಣೆ ಮಾಡಲು ಹೊರಟಿದೆ ಎಂದು ಖಂಡಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ರೀತಿಯ ಶಿಕ್ಷಣ ಪದ್ಧತಿ ಇರಬೇಕು. ಆ ಶಿಕ್ಷಣ ಪದ್ಧತಿ, ಭಾರತೀಯ ವಿದ್ಯಾರ್ಥಿಗಳಿಗೆ ಯೋಗ ಹಾಗೂ ಇನ್ನಿತರ ಕೌಶಲ್ಯವನ್ನು ನೀಡುವ ಉದ್ದೇಶ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ. ಮುಂದಿನ 20-25 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಯನ್ನು ಮುಂದಿಟ್ಟುಕೊಂಡು ನೀತಿಯನ್ನು ಹಲವಾರು ಶಿಕ್ಷಣ ತಜ್ಞರು ತಯಾರಿಸಿದ್ದಾರೆ. ಆದಾಗ್ಯೂ, ರಾಜ್ಯ ಸರ್ಕಾರ ರಾಷ್ಟ್ರೀಯತೆಯನ್ನ ತುಂಡು ಮಾಡಿ ಪ್ರತ್ಯೇಕತೆಯ ಹೆಜ್ಜೆಯನ್ನ ಇಡುತ್ತಿರುವುದು ಕರ್ನಾಟಕವನ್ನು ಹಿನ್ನಡೆಗೆ ತೆಗೆದುಕೊಂಡು ಹೋದಂತಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭಾರತೀಯತೆಯ ವಿರೋಧಿ ನೀತಿಯನ್ನು, ಭಾರತೀಯ ಜೀವನ ಪದ್ಧತಿಯನ್ನು ವಿರೋಧಿಸುವ ನೀತಿಯನ್ನು, ಇಂಗ್ಲಿಷ್ ಶಿಕ್ಷಣ ಪದ್ಧತಿಯ ನಿಲುವನ್ನ ಒಪ್ಪಿಕೊಳ್ಳುವ ನೀತಿಯನ್ನು, ಲಿಬರಲ್ ಎಜುಕೇಶನ್ನಿಂದ ಹಿನ್ನಡೆಗೆ ತೆಗೆದುಕೊಂಡು ಹೋಗುವ ನೀತಿಯನ್ನು, ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನಿಯಮಾವಳಿಗಳನ್ನು ಕಡೆಗಣಿಸುವ ನೀತಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುವುದರಿಂದ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗುತ್ತಿದೆ, ಯುಪಿಎಸ್ಸಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಕೋರ್ಸ್ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ಶಿಕ್ಷಣ ಪದ್ಧತಿಯನ್ನು ಬದಲಾವಣೆ ಮಾಡುವುದರಿಂದ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೇವಲ ರಾಜಕೀಯ ಕಾರಣಕ್ಕೋಸ್ಕರ ಒಂದು ಶಿಕ್ಷಣ ಪದ್ಧತಿಯನ್ನು ಬದಲಾವಣೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಲು ಹೊರಟಿರುವ ಸರ್ಕಾರದ ನಡೆ ನಿಜಕ್ಕೂ ಮುಂದಿನ ದಿನಗಳಲ್ಲಿ ಬಹು ದೊಡ್ಡ ಮಾರಕವಾಗಲಿದೆ ಎಂದು ಎಚ್ಚರಿಸಿದ ಅವರು, ಎನ್ಇಪಿ ಜಾರಿ ಮಾಡಿದ ಕಾರಣಕ್ಕೋಸ್ಕರ ನೂರಾರು ಕೋಟಿ ರೂ.ಗಳ ಅನುದಾನವನ್ನು ಪಿಎಂ ಉಷಾ ಯೋಜನೆಯಡಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ ನೀಡಿದೆ. ಒಂದು ವೇಳೆ ಎನ್ಇಪಿಯನ್ನ ರದ್ದುಪಡಿಸಿದ್ದೆ ಆದಲ್ಲಿ ವಿಶ್ವವಿದ್ಯಾಲಯ ನೀಡಿದ ಅನುದಾನವನ್ನು ಕರ್ನಾಟಕ ರಾಜ್ಯ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಎಲ್ಲ ವಿಷಯವನ್ನು ಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಧ್ಯಂತರ ವರದಿಯ ಪ್ರಕಾರ ಹಿಂದಿನ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುತ್ತೇವೆ ಎಂಬ ಆದೇಶವನ್ನು ನೀಡಿರುವುದು ಎಬಿವಿಪಿ ಖಂಡಿಸುತ್ತದೆ ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು ಎನ್ ಇ ಪಿ ಯಲ್ಲಿ ಆಗಿರುವ ಲೋಪದೋಷಗಳನ್ನ ಸರಿಮಾಡಿ ರಾಜ್ಯದಲ್ಲಿ ಸಮರ್ಪಕವಾದ ಎನ್ಇಪಿ ಅನುಷ್ಠಾನ ಮಾಡಿ ದೇಶದ ಶಿಕ್ಷಣ ಪದ್ಧತಿಯೊಂದಿಗೆ ಕರ್ನಾಟಕ ರಾಜ್ಯವನ್ನು ತೆಗೆದುಕೊಂಡು ಹೋಗುವ ಮಹತ್ತರ ಜವಾಬ್ದಾರಿಯನ್ನ ಮಾಡಬೇಕು ಎಂದು ಆಗ್ರಹಿಸಿದ ಅವರು, ಒಂದು ವೇಳೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸಿದ್ದೆ ಆದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಬಸವರಾಜ್ ಗುರುಗುಂಟಿ, ದಿಲೀಪ್ ದಾನೂರ್, ಗುರು ಪೂಜಾರಿ, ಶಾಂತಕುಮಾರ್, ನಗರ ಕಾರ್ಯದರ್ಶಿ ಮನೋಜ್, ನಗರ ಹೋರಾಟ ಶಿವಾನಿ ಮತ್ತು ತರುಣ್, ಅರುಣ್ ಮುಂತಾದವರು ಪಾಲ್ಗೊಂಡಿದ್ದರು. ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು
ವರದಿ- ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.