2,699 total views
ಕಲಬುರಗಿ:- ಪುರುಷ ಪ್ರಧಾನ ಸಮಾಜವು ಕೇವಲ ಗಂಡು ಮಗುವಿಗೆ ಪ್ರಾಧಾನ್ಯತೆ ನೀಡುತ್ತಿದೆ ವಿನಾ ಹೆಣ್ಣು ಮಗುವಿಗಲ್ಲ. ಮಹಿಳೆಯರ ಮೇಲೆ ಹಲವಾರು ನಿರ್ಭಂಧ ಮತ್ತು ನಿಯಂತ್ರಣಗಳು ವಿಧಿಸುತ್ತಿರುವುದು ಸಮಾನತೆಯ ತತ್ವಕ್ಕೆ ತಿಲಾಂಜಲಿ ಹೇಳಿದಂತಾಗಿದೆ ಎಂದು ಡಾ.ಬಸವರಾಜ ಕುಮ್ನೂರು ಅವರು ಅಭಿಪ್ರಾಯಪಟ್ಟರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಗರದಲ್ಲಿ ತನುಶ್ರೀ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿಚಾರ ಸಂಕಿರಣ ಹಾಗೂ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಇಷ್ಟೇಲ್ಲ ಕಾನೂನುಗಳಿದ್ಧರೂ ಸಹ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ಮಹಿಳೆಯರ ಮೇಲೆ ಹತ್ಯಾಚಾರ-ದೌರ್ಜನ್ಯಗಳು ಮತ್ತು ಮರ್ಯಾದ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಮಹಿಳೆಯರ ಮೇಲೆ ನಡೆಯುವ ಹತ್ಯಾಚಾರ ಮತ್ತು ದೌರ್ಜನ್ಯಗಳು ಶೇ.97 ರಷ್ಟು ಬೆಳಕಿಗೆ ಬರುವದೇ ಇಲ್ಲ. ಆದರೆ ಕೇವಲ ಶೇ.3ರಷ್ಟು ಮಾತ್ರ ಬೆಳಕಿಗೆ ಬರುತ್ತಿವೆ. ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರ ದುಡಿಮೆಯನ್ನು ಉತ್ಪನ್ನವೆಂದು ಪರಿಗಣಿಸುತ್ತಿಲ್ಲ ಅಂದರೆ ಮಹಿಳೆಯರಿಗೆ ಕೇವಲ ಸಂಗೋಪನೆಗೆ ಸೀಮಿತಗೊಳಿಸುತ್ತಿದ್ದಾರೆ ವಿನಾ ಸಂಪಾದನೆಗಲ್ಲ. ಹಾಗಾಗಿ ಸಮಾಜದಲ್ಲಿ ಮಹಿಳೆಯರ ಘನತೆ ಹಾಗೂ ಗೌರವವನ್ನು ಕಾಪಾಡುವ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಅಪರಾಧಿಗಳಿಗೆ ತಕ್ಕ ಶಿಕ್ಷೆ ಕೊಡುವಲ್ಲಿ ಪ್ರಭುತ್ವ ಮುಂದಾಗಬೇಕೆಂದರು.
ಅದೇರೀತಿಯಾಗಿ ಚಿಟಗುಪ್ಪಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿಯಾದ ಡಾ.ಜಯದೇವಿ ಗಾಯಕವಾಡ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ‘ಹೆಣ್ಣು ಸಮಾಜದ ಕಣ್ಣು’. ಮಹಿಳೆಯರು ಇಲ್ಲದ ಸಮಾಜ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ಇಂದು ಮಹಿಳೆಯರ ಮೇಲೆ ಅಮಾನವೀಯ ಘಟನೆಗಳನ್ನು ನಿರಂತರವಾಗಿ ನಡೆಯುತ್ತಿರುವುದು ನೋವಿನ ಸಂಗತಿ. ಮಹಿಳೆಯ ಮೇಲೆ ನಡೆಯುತ್ತಿರುವ ಹತ್ಯಾಚಾರ ಹಾಗೂ ಅನಾಚಾರಗಳ ಕುರಿತು ಬುದ್ಧಿಜೀವಿ ವರ್ಗ ಮೌನ ಮುರಿದು ಮಾತನಾಡಬೇಕೆಂದರು. ಬಾಬಾ ಸಾಹೇಬರು ಭಾರತೀಯ ಸಂವಿಧಾನದ ಕಲಂ 45ರಲ್ಲಿ 14ನೇ ವಯಸ್ಸಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲು ಶಿಫಾರಸು ಮಾಡಿದೆ.ಒಂದು ವೇಳೆ ಅದನ್ನು ಜಾರಿಗೆ ತಂದರೆ ದೇಶವು ಅನಕ್ಷರತೆಯಿಂದ ವಿಮೋಚನೆ ಆಗುವದರಲ್ಲಿ ಯಾವೂದೇ ಅನುಮಾನವಿಲ್ಲವೆಂದರು. ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಮೊದಲು ಅವರಿಗೆ ಶಿಕ್ಷಣ ಹಾಗೂ ಆಸ್ತಿಯಲ್ಲಿ ಸಮಾನ ಪಾಲು ಕೊಡಬೇಕೆಂದರು. ಆಂದಾಗ ಮಾತ್ರ ಮಹಿಳೆ ಆರ್ಥಿಕವಾಗಿ ಸಬಲತೆಯನ್ನು ಸಾಧಿಸಲು ಸಾಧ್ಯ ಎಂದರು. ಜಾತಿ ಪದ್ಧತಿ, ಸತಿಸಹಗಮನ ರದ್ಧತಿ ಮತ್ತು ಮೂಢನಂಬಿಕೆ ಮುಂತಾದ ಅನಿಷ್ಠತೆಗಳನ್ನು ಅಳಸಿ ಹಾಕುವಲ್ಲಿ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಅನನ್ಯವಾದದ್ದು ಎಂದರು. ಜೊತೆಗೆ ಮಹಿಳೆಯರಿಗೆ ಆಸ್ತಿ ಹಕ್ಕುಗಳನ್ನು ಕೊಡುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು. ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ವಿಭಾಗೀಯ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ, ಕಲಬುರಗಿ ನಗರದ ಸರಕಾರಿ ಸ್ವಯತ್ತ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ನಾಗಪ್ಪ ಗೋಗಿ ಹಾಗೂ ಹಮೀದ್ ಪ್ಯಾರೆ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶರಣಬಸಪ್ಪ ವಡ್ಡಣಕೇರಿ ಅವರುಗಳು ಕಾರ್ಯಕ್ರಮವನ್ನುದ್ದೇಶಿಸಿ ಮಾತನಡಿದರು.ಸಿದ್ಧಾರ್ಥ ಕಿವುಡ ಮತ್ತು ಮೂಕ ಬಾಲಕ/ ಬಾಲಕಿರ ವಸತಿಯುತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾನಿಯಾದ ಕುಮಾರಿ ರೇಣುಕಾ ದೊಡ್ಡಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ತನುಶ್ರೀ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಎಸ್.ಕೋರೆ ಅವರು ವಹಿಸಿದರು. ಕುಮಾರಿ ತನುಶ್ರೀ ಕೋರೆ ಅವರು ಪ್ರಾರ್ಥಿಸಿದರು. ಶ್ರೀಮತಿ ಜ್ಯೋತಿ ಜೋಕಾಲಿ ಅವರು ಸ್ವಾಗತಿಸಿದರು. ಅಂಬದಾಸ ಮರಗುತ್ತಿ ಅವರು ವಂದಿಸಿದರು. ಡಾ.ಶರಣಪ್ಪ ಸೈದಾಪೂರ ಅವರು ಕಾರ್ಯಕ್ರಮನ್ನು ನಿರೂಪಿಸಿದರು.ಶಾಲೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು. ಕೊನೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮಹಿಳೆಯರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು ವರದಿ-ಡಾ ಎಂ. ಬಿ ಹಡಪದ ಸುಗೂರ ಎನ್