2,849 total views
ಶಿರಸಿ: ನಗರದ ನೆಮ್ಮದಿಯ ರಂಗಧಾಮದಲ್ಲಿ ಒಡ್ಡೋಲಗ ತಂಡದ ರಂಗ ಪರ್ಯಟನೆಯ ‘ಬಹುಮುಖಿ’ ನಾಟಕ ಸಾರ್ವಜನಿಕರು, ಕಲಾ ಪ್ರೇಕ್ಷಕರ ಮೆಚ್ಚುಗೆಗೆ ಒಳಗಾಯಿತು. ಇವತ್ತಿನ ಕಾಲದಲ್ಲಿ ಜರುಗುವ ದೃಶ್ಯಾವಳಿಗಳನ್ನು ಕಟ್ಟಿಕೊಟ್ಟಿದೆ.
ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತ್ರಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವನ ಜೀವನದ ಒಳಕ್ಕೆ ಬರುವ ಜನರು ಅವರವರ ಕಥೆಗಳನ್ನು ಮುಂಚೂಣಿಗೆ ತರುತ್ತಾರೆ ಮತ್ತು ಆ ಮೂಲಕ ಪಲ್ಲಟದ ನೋವು, ಪೊಳ್ಳು ಸಂಬಂಧಗಳ ಅಸಹನೀಯತೆ, ನಗರವೆಂಬ ಬೆಂಕಿಯ ಒಳಗೆ ಧಾವಿಸಿ ಬಿದ್ದು ಉರಿದು ಹೋಗುತ್ತಿರುವ ಜೀವನ ಕ್ರಮಗಳುಅನಾವರಣಗೊಳ್ಳುತ್ತವೆ.
ಇತಿಹಾಸ -ಕಥನ- ನೆನಪುಗಳನ್ನು ಕುಶಲ ಕುತಂತ್ರದಿಂದ ಬಳಸುವ ಜನರು ನಾಟಕದುದ್ದಕ್ಕೂ ಹಲವು ವೇಷಗಳಲ್ಲಿ ಬರುತ್ತಾರೆ. ಯಾವುದು ಕಥನ, ಯಾವುದು ಇತಿಹಾಸ, ಯಾವುದು ವೈಯುಕ್ತಿಕ ದುರಂತ, ಯಾವುದು ಜೀವನೋಪಾಯದ ಕಾಯಕ ಅನ್ನುವುದು ಸ್ಪಷ್ಟವಾಗದ, ಯಾರೂ ಯಾರನ್ನೂ ಉಪಯೋಗಿಸಿಕೊಳ್ಳುತ್ತಿದ್ದಾರೆಂದು ತಿಳಿಯದ ವಿಶ್ವದೊಳಗೆ ಈ ನಾಟಕ ನಡೆಯುತ್ತದೆ.
ವಿವೇಕ ಶಾನಭಾಗ ಅವರು ಬರೆದ ಯುವ ನಿರ್ದೇಶಕ ಗಣಪತಿ ಬಿ.ಹಿತ್ತಲಕೈ ಅವರು ನಿರ್ದೇಶಿಸಿದ ನಾಟಕ ಇದಾಗಿದೆ. ರಂಗದಲ್ಲಿ ನಾಗರಾಜ ಬರೂರು, ಗಣಪತಿ ಬಿ ಹೆಗಡೆ, ನವೀನ್ ಕುಮಾರ್ ಕುಣಜಿ, ಪುಷ್ಪ ಸಾಗರ, ಯೋಗೀಶ್ ಕುಣಜಿ, ಪ್ರಸನ್ನಕುಮಾರ್ ಎನ್.ಎಮ್, ಮಾಧವ ಶರ್ಮಾ, ಸಂಧ್ಯಾ ಶಾಸ್ತ್ರಿ ಭೈರುಂಬೆ, ಕೇಶವ ಕಿಬ್ಳೆ, ರಾಮ ಯು ಗೌಡ ಹೊಸೂರು, ನಂದಿತಾ ಭಾಗ್ವತ್ ಯಲ್ಲಾಪುರ, ಪ್ರೀತಿ ಹೆಗಡೆ, ಮುರುಗೇಶ್ ಬಸ್ತೀಕೊಪ್ಪ, ಸಮರ್ಥ ಅಭಿನಯಿಸಿದರು. ಕಾರ್ಯಕ್ರಮಕ್ಕೆ ಚಾಲನೆಯನ್ನು ವೆಂಕಟೇಶ ನಾಯ್ಕ, ವಿ.ಪಿ.ಹೆಗಡೆ ವೈಶಾಲಿ, ರಮಾನಂದ ಐನಕೈ, ಡಾ. ಶಿವರಾಮ ಕೆ.ವಿ. ನೀಡಿದರು