2,898 total views
ಚಿತ್ತಾಪುರ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿ ಪರಾಜಿತಗೊಂಡ ಮಣಿಕಂಠ ರಾಠೋಡ್ ಮೇಲೆ ಶನಿವಾರ ತಡರಾತ್ರಿ ದುಷ್ಕರ್ಮಿಗಳು ಕಾಗಿಣಾ ಸೇತುವೆ ಮಾಲಗತ್ತಿ ಮಧ್ಯೆ ಕಾರು ತಡೆದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಮಾಲಗತ್ತಿ ಸಮೀಪದ ತಮ್ಮ ಫಾರ್ಮ್ ಹೌಸ್ ಮನೆಯಿಂದ ರಾತ್ರಿ 1 ಗಂಟೆ ಸುಮಾರಿಗೆ ಕಲಬುರಗಿ ಕಡೆಗೆ ಹೊರಟಿದ್ದ ಮಣಿಕಂಠ ರಾಠೋಡ ಅವರ ಕಾರು ತಡೆದು ದುಷ್ಕರ್ಮಿಗಳು ಮದ್ಯದ ಬಾಟಲಿಗಳಿಂದ ಹಾಗೂ ಕಲ್ಲುಗಳಿಂದ ದಾಳಿ ಹಲ್ಲೆ ಎನ್ನಲಾಗಿದ್ದು, ಮಣಿಕಂಠ ರಾಠೋಡಗೆ ತಲೆಗೆ ಮತ್ತು ದೇಹಕ್ಕೆ ಪೆಟ್ಟಾಗಿದೆ. ತಲೆಯಿಂದ ರಕ್ತ ಸುರಿದು ಮಣಿಕಂಠ ನೆಲಕ್ಕೆ ಬಿದ್ದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ. ಜೊತೆಗಿದ್ದವರು ತಕ್ಷಣ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಣಿಕಂಠ ರಾಠೋಡ್ ಮೇಲೆ ಹಲ್ಲೆಗೆ ನಡೆಸಿದವರು ಯಾರು ಮತ್ತು ಹಲ್ಲೆಗೆ ಕಾರಣವೇನು ಎಂಬುವುದು ತಿಳಿದುಬಂದಿಲ್ಲ. ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.