3,876 total views
ಶಿರಸಿ: ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎನ್.ಪಿ.ಗಾಂವಕರ ಅವರಿಗೆ ರಾಜ್ಯದ ಪ್ರತಿಷ್ಠಿತ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ದೊರೆತ ಹಿನ್ನೆಲೆಯಲಿ ಅವರ ಸ್ವಗೃಹಕ್ಕೆ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ತೆರಳಿ, ಬ್ಯಾಂಕ್ ವತಿಯಿಂದ ಸನ್ಮಾನಿಸಿ, ಗೌರವಿಸಿದರು.
ನಂತರ ಮಾತನಾಡಿದ ಹೆಬ್ಬಾರ್, ಎನ್.ಪಿ.ಗಾಂವಕರ ಅವರು ಸುದೀರ್ಘ ಕಾಲ ಕೆಡಿಸಿಸಿ ಬ್ಯಾಂಕ್ನ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಮೊದಲೇ ಅವರಿಗೆ ರಾಜ್ಯ ಪ್ರಶಸ್ತಿ ದೊರೆಯಬೇಕಿತ್ತು. ನಮ್ಮಿಂದಲೂ ಲೋಪವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಈಗಲಾದರೂ ಸಹಕಾರಿ ದಿಗ್ಗಜನನ್ನು ಗುರುತಿಸಿ, ಗೌರವ ನೀಡಿರುವುದು ಹೆಮ್ಮೆ ತಂದಿದೆ. ಎನ್.ಪಿ.ಗಾಂವಕರ ಅನೇಕ ಸಂಸ್ಥೆಗೆ ಮರುಜೀವ ನೀಡಿ, ಆರ್ಥಿಕ ಶಕ್ತಿ ತುಂಬಿದ್ದರು. ಅವರ ನಡತೆ ಕಠೋರ ಮತ್ತು ವಿಶಿಷ್ಟವಾಗಿದ್ದರೂ, ಸ್ವಾರ್ಥ ರಹಿತವಾಗಿ ಕೇವಲ ಬ್ಯಾಂಕ್ ಹಿತಾಸಕ್ತಿಯ ಬಗ್ಗೆ ಚಿಂತಿಸುತ್ತಿದ್ದರು. ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಜಿಲ್ಲೆಯ ಸಾಧಕನಿಗೆ ಲಭಿಸಿರುವುದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಹಕಾರಿ ಸಚಿವರನ್ನು ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ಅದಕ್ಕಿಂತ ಹೆಚ್ಚಾಗಿ ಈ ಪ್ರಶಸ್ತಿಯು ನಮ್ಮ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ಗೆ ಲಭಿಸಿದೆ ಎಂಬ ಖುಷಿ ನನ್ನಲ್ಲಿದೆ ಎಂದರು.
ಸನ್ಮಾನ ಸ್ವೀಕರಿಸಿ, ಎನ್.ಪಿ.ಗಾಂವಕರ ಮಾತನಾಡಿ, ಸಹಕಾರ ರತ್ನ ಪ್ರಶಸ್ತಿ ದೊರೆತಿರುವುದು ಸಂತೋಷ ತಂದಿದೆ. ಈ ಮೊದಲೇ ಸಿಗಬೇಕಿತ್ತು. ನನ್ನನ್ನು ಕಡೆಗಣಿಸಿರುವುದಕ್ಕೆ ಬೇಸರ ಒಂದಡೆಯಾದರೆ, ಇನ್ನೊಂದೆಡೆ ತಡವಾಗಿಯಾದರೂ ಗುರುತಿಸಿ, ಪ್ರಶಸ್ತಿ ನೀಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೆಡಿಸಿಸಿ ಬ್ಯಾಂಕ್ನಲ್ಲಿ ೫೦ ವರ್ಷ ಸೇವೆ ಸಲ್ಲಿಸಿದ್ದು, ಅದರಲ್ಲಿ ೩೪ ವರ್ಷ ನೌಕರನಾಗಿ, ೨೩ ವರ್ಷ ಮ್ಯಾನೇಜಿಂಗ್ ಡೈರೆಕ್ಟ್ರ್ ಹಾಗೂ ೧೬ ವರ್ಷ ಕ್ರಿಯಾಶೀಲ ನಿರ್ದೇಶಕನಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಕರ್ತವ್ಯದಲ್ಲಿ ನಿಷ್ಠುರವಾಗಿದ್ದು, ಕಂಡಿದ್ದನ್ನು ಕಂಡ ಹಾಗೆಯೇ ಹೇಳುತ್ತಿದ್ದೆ. ಆ ಅವಧಿಯಲ್ಲಿ ನನ್ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಲ್.ಟಿ.ಪಾಟೀಲ, ರಾಮಕೃಷ್ಣ ಹೆಗಡೆ ಕಡವೆ, ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.