3,606 total views
ಕುಮಟಾ ಮಣಕಿ ಮೈದಾನದಲ್ಲಿ ಐದು ದಿನಗಳ ಕಾಲ ಅತ್ಯಂತ ವಿಜ್ರಂಬಣೆಯಿಂದ ನಡೆಯಲಿರುವ ‘ಕುಮಟಾ ವೈಭವ -2023’ ವಿದ್ಯುಕ್ತವಾಗಿ ಗುರುವಾರದಿಂದ ಆರಂಭಗೊಂಡಿತು.ಬೆಂಗಳೂರಿನ ತಾಂಡವ ಕಲಾನಿಕೇತನ ಸಂಸ್ಥೆ ಮತ್ತು ಕುಮಟಾ ವೈಭವ ಸಮತಿ ಸಹಕಾರದಲ್ಲಿ ದಿ.ಲಿಂಗಪ್ಪ ಮಾಸ್ತರ್ ವೇದಿಕೆಯಲ್ಲಿ ನಡೆಯುತ್ತಿರುವ ಕುಮಟಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರತ್ನಾಕರ ನಾಯ್ಕ ದೀಪ ಬೆಳಗಿ ಉದ್ಘಾಟಿಸಿದರು.
ಕಳೆದ ಆರು ವರ್ಷಗಳಿಂದ ನಿರಂತರವಾಗಿ ಕುಮಟಾ ವೈಭವವನ್ನು ಹಮ್ಮಿಕೊಳ್ಳುತ್ತಾ ಬಂದಿರುವ ತಾಂಡವ ಕಲಾನಿಕೇತನ ಹಾಗೂ ಕುಮಟಾ ವೈಭವ ಸಮಿತಿಯ ಕಾರ್ಯ ಶ್ಲಾಘನೀಯವಾದುದು. ಕಲೆ ಸಂಸ್ಕೃತಿ ಸಂಪ್ರದಾಯವನ್ನು ಉಳಿಸುವ ಕಾರ್ಯವನ್ನು ಜೊತೆಜೊತೆಗೆ ಮಾಡಿಕೊಂಡು ಬಂದಿದ್ದು,ಅರ್ಹರಿಗೆ ಸಹಾಯ ಸಹಕಾರ ನೀಡುವ ನಿಟ್ಟಿನಲ್ಲಿಯೂ ಸಂಸ್ಥೆ ಈ ವೇದಿಕೆಯನ್ನು ಬಳಸಿಕೊಂಡಿರುವುದು ಸಂತಸದ ವಿಚಾರ ಎಂದು ಅವರು ಶ್ಲಾಘಿಸಿದರು.
ಬಿಜೆಪಿ ಮುಖಂಡ ಡಾ. ಜಿ.ಜಿ.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಪ್ರತಿಭೆಗಳ ಹೆಮ್ಮೆರವಾಗಿ ವಿಶ್ವದ ಮೂಲೆ ಮೂಲೆಯಲ್ಲೂ ಇಲ್ಲಿನ ಪ್ರತಿಭಾವಂತರು ಬೆಳಗುತ್ತಿದ್ದಾರೆ. ಇಂತಹ ಪ್ರತಿಭೆಗಳಿಗೆ ನಮ್ಮಲ್ಲೇ ನಡೆಯುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗಬೇಕು.
ಕುಮಟಾ ವೈಭವದಂತಹ ಕಾರ್ಯಕ್ರಮಗಳು ಕಲೆ, ಸಂಸ್ಕೃತಿಯ ರಕ್ಷಣೆಯ ಜತೆಗೆ ಕ್ಷೇತ್ರದ ಅಭಿವೃದ್ಧಿಯ ಚಿಂತನೆಗೂ ಒಂದು ವೇದಿಕೆಯಾಗಬೇಕು. ದಶಕಗಳ ಬೇಡಿಕೆಯಾದ ಸುಸಜ್ಜಿತ ಆಸ್ಪತ್ರೆಯನ್ನು ಜನಸಹಯೋಗವಿಲ್ಲದೇ ಯಶಸ್ವಿಯಾಗಿ ಮಾಡಲು ಸಾಧ್ಯವಿಲ್ಲ. ಸರ್ಕಾರ ದೊಡ್ಡ ಕಟ್ಟಡಗಳನ್ನು ಕಟ್ಟಬಹುದು, ಆದರೆ ಅದಕ್ಕೆ ಬೇಕಾದ ಜನಸಂಪನ್ಮೂಲವನ್ನು ಒದಗಿಸುವುದು ಸವಾಲಿನ ಸಂಗತಿ ಎಂದು ಅವರು ತಿಳಿಸುತ್ತಾ ಕಾರ್ಯಕ್ರಮ ಸಂಯೋಜನೆ ಕುರಿತಾಗಿ ಪ್ರಶoಸೆ ವ್ಯಕ್ತಪಡಿಸಿದ್ದರು.
ವೈಭವ ಸಮಿತಿಯ ಗೌರವಾಧ್ಯಕ್ಷ ರಾಜಗೋಪಾಲ ಅಡಿ ಮಾತನಾಡಿ, ಜಿಲ್ಲೆಯ ಹೊರಗೆ ಖ್ಯಾತಿ ಗಳಿಸಿರುವ ಇಲ್ಲಿನ ಪ್ರತಿಭೆಗಳನ್ನು, ಸಾಧಕರನ್ನು ಸೇರಿಸುವ ಕಾರ್ಯಕ್ರಮವೇ ಕುಮಟಾ ವೈಭವದ ಉದ್ದೇಶವಾಗಿದೆ
ತಾಂಡವ ಕಲಾನಿಕೇತನದ ಸಂಸ್ಥಾಪಕ ಮಂಜುನಾಥ ನಾಯ್ಕ, ಕಲೆ ಹಾಗೂ ಸಂಸ್ಕೃತಿಯೆರಡೂ ಮಾನವನ ಬದುಕಿನ ಅವಿಭಾಜ್ಯ ಅಂಗ, ಹಾಗೆಯೇ ಕುಮಟಾ ವೈಭವ ಕಾರ್ಯಕ್ರಮವೂ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಕ್ರಿಯೆಯ ಒಂದು ಭಾಗವಾಗಿ ಕಳೆದ ಆರು ವರ್ಷಗಳಿಂದ ಜನಸಹಯೋಗದಿಂದ ನಡೆದುಕೊಂಡು ಬಂದಿದೆ ಎಂದರು.ನ್ಯಾಯವಾದಿ ಎಸ್ ಜಿ ಹೆಗಡೆ ದುಗ್ಗೂರ, ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ಬಯ್ಯಾ ನಾಯ್ಕ, ಗೋಕರ್ಣದ ಸುಜಯ ಶೆಟ್ಟಿ, ಡಾ. ಶುಭಲತಾ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ಸಂತೋಷ ನಾಯ್ಕ, ಸೂರ್ಯಕಾಂತ ಗೌಡ, ಸುಜಯ ಶೆಟ್ಟಿ, ಡಾ. ಸುಮಲತಾ ಮಣಕಿಕರ್, ಡಾ. ಪ್ರಣವ ಮಣಕಿಕರ, ಮಂಜುನಾಥ ಹರಿಕಂತ್ರ, ಎಸ್.ಜಿ.ಹೆಗಡೆ, ಯತಿರಾಜ ಇತರರು ಇದ್ದರು. ಮಂಜುನಾಥ ನಾಯ್ಕ ನಿರ್ವಹಿಸಿದರು. ಕೃಷ್ಣಾನಂದ ಭಟ್ಟ ಉಪ್ಲೆ ವಂದಿಸಿದರು. ತಾಂಡವ ಕಲಾ ನಿಕೇತನ ಜಿಲ್ಲಾ ಸಂಚಾಲಕ ನರಸಿಂಹ ಭಟ್ಟ, ಸಮಿತಿಯ ಸದಸ್ಯರಾದ ನಿರಂಜನ ನಾಯ್ಕ, ಮಂಜುನಾಥ ಹರಿಕಾಂತ, ರವಿ ಶೇಟ್, ಕುಮಟಾ ವಾರಿರ್ಸ್ ಪವನ ಗುನಗಾ, ಪ್ರಾತೇಶ ನಂಬಿಯಾರ್ ಇತರರಿದ್ದರು.