2,684 total views
ಶಿರಸಿ: ದಿನದಿಂದ ದಿನಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿದ್ದು, ಡಿಸೆಂಬರ್ ನಂತರ ನೀರಿನ ಕೊರತೆ ಮತ್ತಷ್ಟು ಹೆಚ್ಚಲಿದೆ. ಈಗಿನಿಂದಲೇ ಜಲಮೂಲಗಳನ್ನು ಗುರುತಿಸಿಕೊಂಡು ಪೂರ್ವ ಸಿದ್ಧತೆ ಕೈಗೊಂಡಿರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದರು ಅವರು ಗುರುವಾರ ನಗರದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಬರಗಾಲ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ, ಪ್ರತಿನಿತ್ಯ ನೀರು ಸರಬರಾಜು ಮಾಡುತ್ತೇವೆ ಎಂಬ ಭಾವನೆಯಿಂದ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ನಿರ್ಲಕ್ಷ್ಯವಹಿಸಿದರೆ ಅಂತಹ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ, ಕ್ರಮ ವಹಿಸಲಾಗುತ್ತದೆ. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದ್ದಾರೆ. ನಗರಸಭೆ ಪೌರಾಯುಕ್ತ ಕಾಂತರಾಜು ಸಭೆಗೆ ಮಾಹಿತಿ ನೀಡಿ, ನಗರ ವ್ಯಾಪ್ತಿಯಲ್ಲಿ ೨೬ ಕೊಳವೆ ಬಾವಿಗಳಿದ್ದು, ೧೫ ಸದ್ಯ ಕಾರ್ಯನಿರ್ವಹಿಸುತ್ತಿದೆ. ೧೧ ದುರಸ್ತಿ ಮಾಡಬೇಕಾಗಿದೆ. ಮಾರಿಗದ್ದೆ ಮತ್ತು ಕೆಂಗ್ರೆ ಘಟಕದಿಂದ ಡಿಸೆಂಬರ್ ಅಂತ್ಯದ ವರೆಗೆ ಮಾತ್ರ ನೀರು ಪೂರೈಸಲು ಸಾಧ್ಯ. ಆ ನಂತರ ಸಮಸ್ಯೆ ಎದುರಾಗಲಿದೆ. ೨೦ ಹೆಚ್ಚುವರಿ ಹೊಸ ಕೊಳವೆ ಬಾವಿಗಳ ಅವಶ್ಯಕತೆಯಿದೆ ಎಂದು ಅಂದಜಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ವಾರಕ್ಕೊಮ್ಮೆ ನೀರು ಪೂರೈಕೆ ಮಾಡುವುದರಿಂದ ಸಮಸ್ಯೆ ಎದುರಾಗಲಿದೆ. ೨೫ ಹೊಸ ಕೊಳವೆಬಾವಿ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿ, ನಾನು ಸಹ ಮಾತನಾಡುತ್ತೇನೆ ಎಂದರು. ಇಂಜಿನಿಯರ್ ಅನೀಲಕುಮಾರ ಮಾತನಾಡಿ, ತಾಲೂಕಿನಲ್ಲಿ ಒಟ್ಟೂ ೧೧೬ ಜಲಜೀವನ ವಿಷನ್ ಕಾಮಗಾರಿ ಮಂಜೂರಿಯಾಗಿದ್ದು, ೪೮ ಕಾಮಗಾರಿ ಪೂರ್ಣಗೊಂಡಿದೆ. ಸಣ್ಣ ಕೆಲಸಗಳಿರುವುದರಿಂದ ಗ್ರಾಪಂಗೆ ಹಸ್ತಾಂತರಗೊಂಡಿಲ್ಲ. ಶೀಘ್ರವಾಗಿ ಹಸ್ತಾಂತರಿಸಲಾಗುತ್ತದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ತಾಲೂಕಿನ ೭ ಶಾಲೆಗಳಿಗೆ ಫೆಬ್ರವರಿ ತಿಂಗಳಿನಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂಬ ಮಾಹಿತಿ ಬಂದಿದೆ. ಬದಲಿ ಜಲಮೂಲ ಗುರುತಿಸಲಾಗಿದೆ. ಅಡುಗೆಗೆ ಮತ್ತು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು. ಸಭೆಯಲ್ಲಿ ತಹಸೀಲ್ದಾರ ಶ್ರೀಧರ ಮುಂದಲಮನಿ, ಲೊಕೋಪಯೋಗಿ ಇಲಾಖೆ ಅಭಿಯಂತರ ಶಿವಾನಂದ ಜಾಡರ್, ಆರ್‌ಎಫ್‌ಓಗಳಾದ ಶಿವಾನಂದ ನಿಂಗಾಣಿ, ಸಿಡಿಪಿಓ ವೀಣಾ ಸಿರ್ಸಿಕರ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.