2,611 total views
ಶಿರಸಿ: ಸಹಕಾರಿ ಕ್ಷೇತ್ರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ರೈತರು, ಧುರೀಣರು ಹಾಗೂ ಅಧಿಕಾರಿ ವರ್ಗದವರು ಕಾರಣ. ಸೌಲಭ್ಯಗಳಿಲ್ಲ ಕಷ್ಟದ ದಿನಗಳಲ್ಲಿ ಸಹಕಾರಿ ಸಂಘಗಳನ್ನು ಕಟ್ಟಿ ಬೆಳೆಸಿದ ಮಹಾನ್ ಧುರೀಣರು ನಮ್ಮ ಜಿಲ್ಲೆಯಲ್ಲಿದ್ದಾರೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ನಗರದ ಟಿಎಸ್‌ಎಸ್ ಆವರಣದಲಿ ೭೦ ನೆಯ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ, ಮಾತನಾಡಿದರು. ರಾಜ್ಯ ಮಟ್ಟದ ಸಹಕಾರಿ ಕ್ಷೇತ್ರಕ್ಕೆ ಉತ್ತರ ಕನ್ನಡ ಜಿಲ್ಲೆ ಬಹುದೊಡ್ಡ ಕೊಡುಗೆ ನೀಡಿದೆ. ಸಹಕಾರಿ ರತ್ನ ಪ್ರಶಸ್ತಿಯನ್ನು ಅತೀ ಹೆಚ್ಚು ಪಡೆರುವ ಜಿಲ್ಲೆ ನಮ್ಮ ಉತ್ತರ ಕನ್ನಡ. ರೈತರನ್ನು ಬೆಳೆಸುವ ಉದ್ದೇಶದಿಂದಲೇ ಸಹಕಾರಿ ಕ್ಷೇತ್ರ ಸ್ಥಾಪನೆ ಮಾಡಲಾಗಿದೆ. ಸಹಕಾರಿ ಕ್ಷೇತ್ರ ಹಾಳಾದಾಗ ರೈತರ ಪರಿಸ್ಥಿತಿ ಸಹ ಹಾಳಾಗುತ್ತದೆ. ಇಡೀ ರಾಜ್ಯಕ್ಕೆ ನಮ್ಮ ಜಿಲ್ಲೆ ಮಾದರಿ ಜಿಲ್ಲೆಯನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದ್ದು, ಈಗ ಕೆಲ ಕಾನೂನು ತೊಡಕು ಸಹಕಾರಿ ಸಂಘಗಳು ಎದುರಿಸಬೇಕಾಗಿದೆ. ಅದನ್ನು ನಿವಾರಿಸಿದರೆ ವಿವಿದೋದ್ದೇಶ ಸಂಘಗಳಿಗೆ ಬಹಳ ಅನುಕೂಲವಾಗುತ್ತದೆ ಎಂದ ಅವರು, ಯುವಕರು ಸಹಕಾರಿ ಕ್ಷೇತ್ರದತ್ತ ಹೆಚ್ಚು ಆಸಕ್ತಿ ತೋರಬೇಕಾದ ಅನಿವಾರ್ಯ ಬಂದಿದೆ. ನ.೧೪ ರಿಂದ ೨೦ ವರೆಗೆ ಸಹಕಾರಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ರಾಜ್ಯಮಟ್ಟದ ಸಹಕಾರಿ ಸಪ್ತಾಹ ಶಿರಸಿಯಲ್ಲಿ ಹಮ್ಮಿಕೊಂಡಿರುವುದಕ್ಕೆ ಸಹಕಾರಿ ಸಚಿವ ರಾಜಣ್ಣ ಮತ್ತು ರಾಜ್ಯಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಹಿರಿಯ ಸಹಕಾರಿಗಳಾದ ಆರ್.ಎಂ.ಹೆಗಡೆ, ಜಿ.ಟಿ.ಹೆಗಡೆ ತಟ್ಟೀಸರ, ಜಿ.ಎಂ.ಹೆಗಡೆ, ಆರ್.ಎನ್.ಹೆಗಡೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ನೂರು ವರ್ಷ ಪೂರೈಸಿದ ಜಿಲ್ಲೆಯ ಸೇವಾಸಹಕಾರಿ ಸಂಘಗಳನ್ನು ಗೌರವಿಸಲಾಯಿತು. ಕೆಡಿಸಿಸಿ ಬ್ಯಾಂಕ್‌ನಿಂದ ಪ್ರತಿ ವರ್ಷ ಕೊಡಮಾಡುವ ಜಿ.ಎಸ್ ಹೆಗಡೆ ಅಜ್ಜಿಬಳ ಪ್ರಶಸ್ತಿಯನ್ನುಹಾಗೂ ಸುಂದರ್ ರಾವ್ ಪಂಡಿತ್ ಪ್ರಶಸ್ತಿಯನ್ನು ಮಾಡಲಾಯಿತು. ೨೦೨೧-೨೨ ನೆಯ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಅಪೆಕ್ಸ್ ಬ್ಯಾಂಕ್‌ನ ಪ್ರಶಸ್ತಿ, ಉತ್ತಮ ಸೇವಾ ಸಹಕಾರಿ ಸಂಘ ಪ್ರಶಸ್ತಿ, ೨೦೨೨-೨೩ ನೆಯ ಸಾಲಿನಲ್ಲಿ ನೂರಕ್ಕೆ ನೂರು ವಸೂಲಾತಿ ಮಾಡಿದ ಸಂಘಗಳ ಕಾರ್ಯದರ್ಶಿಗಳಿಗೆ ಬಹುಮಾನ, ಜಿಲ್ಲೆಯ ವಿವಿಧ ವರ್ಗಗಳ ಉತ್ತಮ ಕೃಷಿಯೇತರ ಸಹಕಾರಿ ಸಂಘಗಳಿಗೆ ಬಹುಮಾನ, ತಾಲೂಕಾ ಮಟ್ಟದ ಉತ್ತಮ ಶಾಖೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗುದ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜ ಅರಬಗೋಡ, ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಸಹಕಾರ ಸಂಘಗಳ ಅಪರ ನಿಬಂಧಕ ಪ್ರಕಾಶ ರಾವ್, ಸಂಯುಕ್ತ ನಿಬಂಧಕ ಡಾಸುರೇಶಗೌಡ ಪಾಟೀಲ್, ಅಪರ ನಿಬಂಧಕ ಕೆ.ಎಸ್.ನವೀನ್, ಧಾರವಾಡದ ಕೆ.ಐ.ಸಿ.ಎಂ. ಪ್ರಾಚಾರ್ಯ ಡಿ.ಆರ್.ವೆಂಕಟರಾವ್, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿ.ಎನ್.ಭಟ್ ಅಳ್ಳಂಕಿ, ಸಹಕಾರ ಸಂಘಗಳ ಉಪನಿಬಂಧಕ ಎಸ್.ಜಿ.ಮಂಜುನಾಥ ಸಿಂಗ್, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್ ಸೇರಿದಂತೆ ಬ್ಯಾಂಕ್‌ನ ನಿರ್ದೇಶಕರು, ಹಿರಿಯ ಸಹಕಾರಿಗಳು, ವಿವಿಧ ಸಹಕಾರಿ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.