2,888 total views
ನಮ್ಮದು ಗಡಿನಾಡು ಪ್ರದೇಶವಾದರೂ ನಾವೂ ಅಪ್ಪಟ ಕನ್ನಡಿಗರು. ಕನ್ನಡದ ನೆಲ,ಜಲ ಮಣ್ಣಿನ ವಿಚಾರದಲ್ಲಿ ಸ್ನೇಹಕ್ಕೂ ಸೈ ಸಮರಕ್ಕೂ ಸೈ ಎಂದು ಜೈ ಕರುನಾಡು ರಕ್ಷಣಾ ಸೇನೆಯ ರಾಜ್ಯ ಪ್ರಧಾನಕಾರ್ಯದರ್ಶಿ ರಾಮಾಂಜಿ ಕೆ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಆನೆಮಡಗು ಗ್ರಾಮದಲ್ಲಿ ಜೈ ಕರುನಾಡು ರಕ್ಷಣಾ ಸೇನೆಯ ವತಿಯಿಂದ ಧ್ವಜಾರೋಹಣ ನೆರವೇರಿಸಿ ನಂತರ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮೈಸೂರು ರಾಜ್ಯದಿಂದ ಕರ್ನಾಟಕ ಎಂದು ನಾಮಕರಣ ಮಾಡಿ ಇಂದಿಗೆ 50 ವರ್ಷಗಳಾಗಿರುವ ಈ ವರ್ಷವನ್ನು ಬಹಳ ವಿಜೃಂಭಣೆಯಿಂದ ನಮ್ಮ ಗ್ರಾಮದಲ್ಲಿ ಆಚರಣೆ ಮಾಡುತ್ತಿದ್ದೇವೆ. ಹಾಗೇಯೆ ನಮ್ಮ ಕರುನಾಡು ರಕ್ಷಣಾ ಸೇನೆಯ ಗ್ರಾಮಾಂತರ ಘಟಕವನ್ನು ಸಹ ಸ್ಥಾಪನೆ ಮಾಡಲಿದ್ದೇವೆ. ಸಮಸ್ತ ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಆನೆಮಡಗು ಗ್ರಾಮದ ಕನ್ನಡಾಂಬೆಯ ಧ್ವಜಾರೋಹಣ ಮಾಡಿ ಗ್ರಾಮದ ಯುವಕರು ಪ್ರಮುಖ ಬೀದಿಗಳಲ್ಲಿ ಕಾರುಗಳು ಬೈಕ್ ಗಳಿಗೆ ಬಾವುಟ ಕಟ್ಟಿಕೊಂಡು ಮೆರವಣಿಗೆ ಮಾಡಿದರು.
ಈ ಸಂದರ್ಭದಲ್ಲಿ ಜೈ ಕರುನಾಡು ರಕ್ಷಣಾ ಸೇನೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಎ, ಜಿಲಾಧ್ಯಕ್ಷ ಅಶ್ವಥ್ ನಾರಾಯಣ, ರೈತ ಘಟಕದ ಜಿಲ್ಲಾಧ್ಯಕ್ಷ ರಾಮರೆಡ್ಡಿ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಕಲ್ಯಾಣ್ ಕುಮಾರ್, ಸದಸ್ಯರಾದ ಹರೀಶ್ ಎ.ಎನ್, ಪ್ರದೀಪ್, ಅನೀಲ್ ಕುಮಾರ್, ಮಂಜುನಾಥ್, ನವೀನ್ ಚಂದ್ರ, ಗಂಗರೆಡ್ಡಿ, ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.