3,629 total views
ಮೈಸೂರು :ನಕಲಿ ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಸೃಷ್ಟಿಸಿ ಬೇನಾಮಿ ವ್ಯಕ್ತಿಗಳಿಗೆ ಪೌತಿ ಮಾಡಿಕೊಟ್ಟು ಭಾರಿ ಗೋಲ್ ಮಾಲ್ ಎಸಗಿದ ಮೂವರು ಅಧಿಕಾರಿಗಳನ್ನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.ಐವರು ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಹಿಂದಿನ ಟಿ.ನರಸೀಪುರ ತಹಸೀಲ್ದಾರ್ ಗೀತಾ ಹಾಗೂ ಉಪವಿಭಾಗಾಧಿಕಾರಿಗಳಾದ ಕೆ.ಆರ್.ರಕ್ಷಿತ್ ರವರು ಸಮಗ್ರ ತೆನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ನೀಡಿದ್ದರು. ಇದರ ಅನ್ವಯದಂತೆ ಮೂವರು ಅಧಿಕಾರಿಗಳನ್ನ ಅಮಾನತ್ತಿನಲ್ಲಿಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಟಿ.ನರಸೀಪುರ ತಾಲೂಕು ಕಚೇರಿ ಹಿಂದಿನ ರಾಜಸ್ವ ನಿರೀಕ್ಷಕ(ಹಾಲಿ ಆಹಾರ ನಿರೀಕ್ಷಕ ಟಿ.ನರಸೀಪುರ)ರಾದ ದೇವಣ್ಣ.ಕೆ, ಟಿ.ನರಸೀಪುರ ಭೈರಾಪುರ ಹಿಂದಿನ ಗ್ರಾಮ ಆಡಳಿತ ಅಧಿಕಾರಿ(ಹಾಲಿ ಜಯಪುರ ವೃತ್ತ ಗ್ರಾಮ ಆಡಳಿತಾಧಿಕಾರಿ)ಪ್ರದೀಪ್ ಸಿಂಗ್ ಹಾಗೂ ಟಿ.ನರಸೀಪುರ ತಾಲೂಕು ಕಚೇರಿ ಗ್ರಾಮ ಆಡಳಿತ ಅಧಿಕಾರಿ,ಭೂಮಿಕೇಂದ್ರದ ಶ್ರೀಮತಿ ಹಂಸಲೇಖ ಅಮಾನತ್ತಿನ ಶಿಕ್ಷೆ ಎದುರಿಸುತ್ತಿರುವ ಅಧಿಕಾರಿಗಳು.
ಟಿ.ನರಸೀಪುರ ತಾಲೂಕು ಕಸಬಾ ಹೋಬಳಿ ತಿರುಮಕೂಡಲು ಗ್ರಾಮದ ಸರ್ವೆ ನಂ.55/2 ರಲ್ಲಿ 22 ಗುಂಟೆ ಹಾಗೂ 55/6 ರಲ್ಲಿನ 8 ಗುಂಟೆ ಜಮೀನಿಗೆ ಅಕ್ರಮವಾಗಿ ಪೌತಿಖಾತೆ ಮಾಡಿಕೊಟ್ಟು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನಲೆ ಇವರ ವಿರುದ್ದ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಈ ಅಕ್ರಮದ ಬಗ್ಗೆ RTI ಕಾರ್ಯಕರ್ತರಾದ ಬಿ.ಎನ್.ನಾಗೇಂದ್ರ ರವರು ದಾಖಲೆಗಳ ಸಮೇತ ದೂರು ನೀಡಿದ ಹಿನ್ನಲೆ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಂದ ವರದಿ ಪಡೆದು ಕ್ರಮ ಕೈಗೊಂಡಿದ್ದಾರೆ.
ಸದರಿ ಜಮೀನಿಗೆ ಮೂಲ ಖಾತೆದಾರರು ಎಂ.ಆರ್.ರಘುನಾಥ ರಾವ್,ಎಂ.ಆರ್.ಗೋಪಾಲರಾವ್ ಹಾಗೂ ಎಂ.ಆರ್.ನಾಗರಾಜ ರಾವ್ ಆಗಿದ್ದಾರೆ.2019-20 ರವರೆಗೆ ಇವರ ಹೆಸರಿನಲ್ಲಿ ಜಂಟಿ ಖಾತೆ ಇದೆ.ಆದರೆ ಮೂಲ ಖಾತೆದಾರರಿಂದ ಯಾವುದೇ ದಾಖಲೆ ಪಡೆಯದೆ ನಕಲಿ ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಸೃಷ್ಟಿಸಿ ವಾರಸುದಾರರಲ್ಲದ ಟಿ.ನರಸೀಪುರದ ಮಾಜಿ MLA ದಿ.ಶ್ರೀನಿವಾಸ ಅಯ್ಯಂಗಾರ್ ರವರ ಮಗನಾದ ಗೋಪಾಲ್ ಅಯ್ಯಂಗಾರ್ ರವರ ಪತ್ನಿ ಮತ್ತು ಮಕ್ಕಳಾದ ಹಾಗೂ ಬೆಂಗಳೂರು ನಿವಾಸಿಗಳಾದ ಜಯಗೋಪಾಲ್,ಸುಧೀರ್ ಜಯಗೋಪಾಲ್ ಹಾಗೂ ಸುಮನ್ ಗೋಪಾಲ್ ಇವರ ಹೆಸರಿಗೆ ವಂಶವೃಕ್ಷ ಹಾಗೂ ಆರ್.ಟಿ.ಸಿ.ಯಲ್ಲಿರುವ ಅನುಭವದಾರರಿಗೆ ತಾಳೆ ಇಲ್ಲದಿದ್ದರೂ ನಮೂನೆ 12 ಮತ್ತು 21 ನ್ನು ಸೃಷ್ಟಿಸಿ ಅಕ್ರಮವಾಗಿ ಪೌತಿಖಾತೆ ಮಾಡಿದ್ದಾರೆ.
ಈ ಸಂಭಂಧ ಹಿಂದಿನ RRT ಶಿರಸ್ತೇದಾರ್ ತಾಲೂಕು ಕಚೇರಿ ಟಿ.ನರಸೀಪುರ(ಹಾಲಿ ಮುಡಾ ವಿಶೇಷ ತಹಸೀಲ್ದಾರ್) ಹೆಚ್.ಪಿ.ರವಿಪ್ರಸಾದ್ ಹಾಗೂ ಹಿಂದಿನ RRT ಶಿರಸ್ತೇದಾರ್ ಟಿ.ನರಸೀಪುರ(ಹಾಲಿ ಮೈಸೂರು ಮಹಾನಗರ ಪಾಲಿಕೆ ಚುನಾವಣಾ ಶಿರಸ್ತೇದಾರ್) ಆಗಿರುವ ಪ್ರಭುರಾಜ್ ವಿರುದ್ದವೂ ಶಿಸ್ತುಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳು ವರದಿಯಲ್ಲಿ ನೀಡಿದ್ದಾರೆ.
ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನ ಬೇನಾಮಿ ವ್ಯಕ್ತಿಗಳಿಗೆ ಅಕ್ರಮವಾಗಿ ಪೌತಿಖಾತೆ ಮಾಡಿಕೊಟ್ಟ ಬಗ್ಗೆ Tv10 ಕನ್ನಡ ವಾಹಿನಿಯಲ್ಲಿ ಈ ಹಿಂದೆ ಪ್ರಸಾರ್ ಮಾಡಲಾಗಿತ್ತು.ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡಿದ್ದಾರೆ…