2,395 total views
ಶಿರಸಿ: ಕಂದಾಯ ಭೂಮಿ ಅತಿಕ್ರಮಣದಾರನನ್ನ ಬಲಪ್ರಯೋಗದಿಂದ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ತಾಲೂಕಿನ ದೊಡ್ನಳ್ಳಿಯ ಸೋಮಯ್ಯ ಜೋಗಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ. ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅನಾದಿಕಾಲದಿಂದ ಕಂದಾಯ ಭೂಮಿ ಅತಿಕ್ರಮಣ ಮಾಡಿಕೊಂಡಿದ್ದ ಇವರನ್ನು ಬಲಪ್ರಯೋಗದಿಂದ, ಕಾನೂನಿಗೆ ವ್ಯತಿರಿಕ್ತವಾಗಿ, ಮಾನವೀಯತೆಯನ್ನು ಮೀರಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ನಂತರ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ರೋಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ರವೀಂದ್ರ ನಾಯ್ಕ ಒತ್ತಾಯ: ಸೋಮಯ್ಯ ಜೋಗಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನಲ್ಲಿ ಮೃತನಾಗಿರುವುದು ವಿಷಾದಕರ. ದುರ್ಘಟನೆಗೆ ಕಾರಣವಾದ ಕಂದಾಯ ಅಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.ಸೋಮಯ್ಯ ಜೋಗಿ ಅನಾದಿಕಾಲದಿಂದಲೂ ದೊಡ್ನಳ್ಳಿ ಗ್ರಾಮ ಸರ್ವೇ ನಂ ೨೧ ಕಂದಾಯ ಭೂಮಿಯನ್ನ ಅತಿಕ್ರಮಿಸಿ, ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಅತಿಕ್ರಮಣ ಕ್ಷೇತ್ರದ ಮೇಲೆ ಅವಲಂಭಿತರಾಗಿದ್ದಾರೆ. ಅ. ೭ ರಂದು ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಕಂದಾಯ ಕಾಯಿದೆಯ ವಿಧಿ-ವಿಧಾನ ಅನುಸರಿಸದೇ, ಬಲಪ್ರಯೋಗದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಯ ಸಂದರ್ಭದಲ್ಲಿ ರೈತ ಸೋಮಯ್ಯ ಜೋಗಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿರುವುದು ಖೇದಕರ. ಇಂತಹ ಘಟನೆಗಳ ಪುನರಾವರ್ತನೆ ಜರುಗದಂತೆ ಸರ್ಕಾರ ತೀವ್ರ ನಿಗಾ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.