2,755 total views
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಗುರುಗಳಾದ ಡಾ. ಪ್ರಣವಾನಂದ ಶ್ರೀಗಳ ವಿರುದ್ಧ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಡಾ. ಎಂ. ತಿಮ್ಮೇಗೌಡ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿಯವರು ಈಡಿಗ ಸಮುದಾಯದ ಸ್ವಾಮೀಜಿಯಲ್ಲ ಎಂದು ಹೇಳಿ ಸಂತ ಪರಂಪರೆಗೆ ಅಪಮಾನ ಮಾಡಿರುವ ವಿಷಯ ಖಂಡನೀಯ. ಪೂಜ್ಯಶ್ರೀ ಡಾ.ಪ್ರಣವಾನಂದ ಸ್ವಾಮೀಜಿಯವರು ಕಲಬುರ್ಗಿಯ ಶ್ರೀ ಶರಣ ಬಸವೇಶ್ವರ ಸಂಸ್ಥಾನ ಪೀಠದ ಪೂಜ್ಯರಾದ ಮಹಾದಾಸೋಹಿ ಡಾ. ಶರಣಬಸವಪ್ಪ ಅವರಿಂದ ವೀರಶೈವ ಪರಂಪರೆಯಂತೆ ದೀಕ್ಷೆಯನ್ನು ಪಡೆದು ಸನ್ಯಾಸತ್ವ ಸ್ವೀಕರಿಸಿದರು ಪ್ರಸ್ತುತ ಹಾವೇರಿ ಸಮೀಪದ ಅರೆ ಮಲ್ಲಾಪುರ ಶ್ರೀ ಶರಣಬಸವೇಶ್ವರ ಪೀಠದ ಮತ್ತು ಕಲಬುರ್ಗಿ ಜಿಲ್ಲೆಯ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಸ್ವಾಮೀಜಿಗಳಾಗಿದ್ದಾರೆ. ಶ್ರೀಯುತರು ಎಲ್ಲಿಯೂ ಕೂಡ ಈಡಿಗ ಸಂಸ್ಥಾನದ ಮಠಾಧಿಪತಿ ಎಂದು ಹೇಳಿಕೊಂಡಿಲ್ಲ ಮತ್ತು ಅವರು ಕೇವಲ ಮಠ ಮತ್ತು ಪಾದಪೂಜೆಗಳಿಗೆ ಮಾತ್ರ ಸೀಮಿತಗೊಳ್ಳದೆ ಸಮಾಜದ ಕಟ್ಟ ಕಡೆಯ ಈಡಿಗ ಬಿಲ್ಲವ ಸೇರಿದಂತೆ 26 ಉಪಪಂಗಡಗಳ ಮನೆ ಮನೆಗೆ ಭೇಟಿ ನೀಡಿ ಕಷ್ಟ ಸುಖಗಳನ್ನು ತಿಳಿದು ಸಾಂತ್ವನ ಮತ್ತು ಪರಿಹಾರವನ್ನು ನೀಡುತ್ತಿರುವ ಸಮುದಾಯದ ಸ್ವಾಮೀಜಿಗಳು. ಡಾ. ಪ್ರಣವಾನಂದ ಸ್ವಾಮೀಜಿಯವರು ರಾಜ್ಯಾದ್ಯಂತ ಸಂಚರಿಸಿ ಸಮಾಜದ ಬಾಂಧವರ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಸಮಾಜದ ಏಳಿಗೆಗಾಗಿ ಹಗಲಿರುಳು ದುಡಿಯುತ್ತಿರುವಂತಹ ಒಬ್ಬ ನಿಷ್ಠಾವಂತ ಸ್ವಾಮೀಜಿಯವರು, ಅವರನ್ನು ಒಂದು ರಾಜಕೀಯಕ್ಕೂ ಒಂದು ಪಂಗಡಕ್ಕೂ ಸೀಮಿತಗೊಳಿಸದೆ ಈಡಿಗ ಬಿಲ್ಲವ ಸೇರಿದಂತೆ 26 ಉಪಪಂಗಡಗಳು ಹಾಗೂ ಅತಿ ಹಿಂದುಳಿದ ಸಮುದಾಯದವರ ಶ್ರೇಯೋಭಿವೃದ್ಧಿಗಾಗಿ ನಿತ್ಯ ನಿರಂತರ ಕಾರ್ಯಪ್ರವೃತ್ತರಾಗಿದ್ದಾರೆ, ಯಾವುದೇ ರಾಜಕೀಯ ಪಕ್ಷದ ಮುಖವಾಡವಾಗದೆ ಸರ್ವ ಪಕ್ಷೀಯರ ಗೌರವಕ್ಕೆ ಪಾತ್ರರಾದ ಸ್ವಾಮೀಜಿಯವರನ್ನು ಈ ರೀತಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಅವಮಾನಿಸುವ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘಕ್ಕೆ ಬೆಲೆ ತರುವಂಥದ್ದಲ್ಲ. ಪೂಜ್ಯ ಸ್ವಾಮೀಜಿಯವರು ಕರ್ನಾಟಕದ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ ಎಲ್ಲ ಉಪಪಂಗಡಗಳ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿಗಾಗಿ ಹೋರಾಟದ ಮೂಲಕ ಜಾಗೃತಿಯನ್ನು ಮೂಡಿಸಿ ಇಂದು ಕರ್ನಾಟಕದಲ್ಲಿ ಈ ಸಮುದಾಯ ಬಲಿಷ್ಠಗೊಳ್ಳುವಂತೆ ಮತ್ತು ಜಾಗೃತಗೊಳ್ಳುವಂತೆ ಮಾಡಿದ್ದಾರೆ, ಸಮುದಾಯದ ಕುಲಕಸುಬು ಸೇಂದಿ ವೃತ್ತಿಗೆ ಸರ್ಕಾರ ನಿಷೇಧ ಹೇರಿ ಈ ಸಮುದಾಯ ಬೀದಿಗೆ ಬಿದ್ದಾಗ ವರ್ಷಗಳ ಕಾಲ ಕೇಂದ್ರ ಸಂಘ ಯಾಕೆ ಮೌನ ವಹಿಸಿತ್ತು ಈ ಬಗ್ಗೆ ಸಂಘವು ಸ್ಪಷ್ಟನೆಯನ್ನು ನೀಡಬೇಕಾಗಿದೆ, ಪೂಜ್ಯ ಸ್ವಾಮೀಜಿಯವರು ಸಮುದಾಯದ ಜನರಿಗಾಗಿ ನಿಗಮ ರಚಿಸಿ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕೆಂದು ಒತ್ತಾಯಿಸಿ ಚಿಂಚೋಳಿಯಿಂದ ಕಲಬುರ್ಗಿಯವರೆಗೆ ಮೇ ತಿಂಗಳ ಸುಡು ಬಿಸಿಲಿನಲ್ಲಿ ಪಾದಯಾತ್ರೆ ಕೈಗೊಂಡಾಗ ಅದನ್ನು ಉದ್ಘಾಟಿಸಿದ ಪೂಜ್ಯರಾದ ಸೋಲೂರು ಮಠದ ಶ್ರೀ ಶ್ರೀ ವಿಖ್ಯಾತಾನಂದ ಶ್ರೀಗಳು ಅದಕ್ಕೆ ಚಾಲನೆ ಕೊಟ್ಟಿದ್ದನ್ನು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಮರೆತಿದೆಯೇ? ನಂತರ ಮಂಗಳೂರು ಕುದ್ರೋಳಿಯ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಬೆಂಗಳೂರಿನವರೆಗೆ ಸುಮಾರು 780 ಕಿಲೋಮೀಟರ್ ದೂರ ಪಾದಯಾತ್ರೆ ನಡೆಸಿ ಕೊನೆಯ ಹಂತದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಮಾಜ ಕಲ್ಯಾಣ ಖಾತೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಈಡಿಗ ನಿಗಮವನ್ನು ಮತ್ತು ಕುಲಶಾಸ್ತ್ರೀಯ ಅಧ್ಯಯನಕ್ಕೆ ಸರಕಾರ ಒಪ್ಪಿಗೆ ನೀಡುತ್ತದೆ ಎಂದು ಹೇಳಿ ಎರಡು ದಿನಗಳಲ್ಲಿ ಆದೇಶ ಹೊರಡಿಸಿದಾಗ ತಮ್ಮ ಸಂಘ ಎಲ್ಲಿ ಕೈಕಟ್ಟಿ ಕುಳಿತಿತ್ತು? ಸರಕಾರವು ನಿಗಮ ಮತ್ತು ಕುಲಶಾಸ್ತ್ರ ಅಧ್ಯಯನ ಆದೇಶ ಹೊರಡಿಸಿದ ತಕ್ಷಣ ಸರಕಾರಕ್ಕೆ ಹೋಗಿ ಅಭಿನಂದನೆ ಸಲ್ಲಿಸಿರುವುದು ತಮ್ಮದೇ ಪ್ರಯತ್ನ ಎಂದು ಬಿಂಬಿಸಲು ಎಂಬುದನ್ನು ನಾಡಿನ ಜನತೆ ಮರೆಯಲಾರದು ಆಗ ಡಾ. ಪ್ರಣವಾನಂದ ಶ್ರೀಗಳು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೆ ಸಮಾಜದ ಅಭ್ಯುದಯಕ್ಕೆ ಸರಕಾರ ಮಾಡಿದ ಕಾರ್ಯವನ್ನು ಯಾರೇ ಗೌರವಿಸಿದರು ಸ್ವಾಗತಿಸುವೆ ಎಂದು ಹೇಳಿದ್ದರು. ಡಾ. ಪ್ರಣವಾನಂದ ಶ್ರೀಗಳು ಎಲ್ಲಿಯೂ ಕೂಡ ತಾನು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಸ್ವಾಮೀಜಿ ಎಂದು ಹೇಳಿಕೊಂಡಿಲ್ಲ ಆದರೆ ಈ ಸಂಘದವರಿಗೆ ಸ್ವಾಮೀಜಿಯವರ ಬಗ್ಗೆ ಇಂತಹ ಭಾವನೆ ಯಾಕೆ ಎಂಬುದು ಇನ್ನೂ ನಿಗೂಢ,
ಸೆಪ್ಟೆಂಬರ್ 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮುದಾಯದ ಹಿರಿಯ ನಾಯಕರಾದ ಬಿ.ಕೆ ಹರಿಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಪೂಜ್ಯ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಈಡಿಗರು ಬಿಲ್ಲವರು ಸೇರಿದಂತೆ 26 ಉಪಪಂಗಡಗಳ ನೇತೃತ್ವದಲ್ಲಿ ಅತಿ ಹಿಂದುಳಿದವರ ಪೂರ್ವಭಾವಿ ಸಭೆಯನ್ನು ನಡೆಸಿ ಅಭೂತಪೂರ್ವ ಯಶಸ್ಸನ್ನು ಕಂಡಿರುವ ಮತ್ತು ನಂತರದ ಬೆಳವಣಿಗೆಗಳನ್ನು ಸಹಿಸದ ಈ ಸಂಘವು ಇಂತಹ ಕೀಳು ಮಟ್ಟದ ಪ್ರಚಾರಕ್ಕೆ ಇಳಿದಿರುವುದು ಸತ್ಯ. ಕರ್ನಾಟಕದ ಈ ಸಮುದಾಯದ ಹಾಗೂ ಅತೀ ಹಿಂದುಳಿದವರ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಲು ಈ ಸಭೆ ಅಭೂತಪೂರ್ವ ಯಶಸ್ಸನ್ನು ಕಂಡಿದ್ದೆ ಇಂತಹ ಕೀಳು ಮಟ್ಟದ ಆರೋಪಗಳಿಗೆ ಮೂಲ ಕಾರಣವಾಗಿದೆ.
ಚಿತ್ತಾಪುರದ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠವನ್ನು ಸಮಾಜದ ಹಿರಿಯ ಮುಖಂಡರಾದ ಬಿ.ಕೆ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸ್ಥಾಪಿಸಿ ಉದ್ಘಾಟನೆಯ ಸಂದರ್ಭದಲ್ಲಿ ಅಂದಿನ ಕರ್ನಾಟಕ ಸರಕಾರದ ಸುನಿಲ್ ಕುಮಾರ್ ಹಾಗೂ ಮಾಜಿ ಶಾಸಕರಾದ ಹರತಾಳು ಹಾಲಪ್ಪ ಭಾಗವಹಿಸಿದ್ದರು.
ಶಕ್ತಿಪೀಠ ಆರಂಭ ಮತ್ತು ಸ್ವಾಮೀಜಿಯವರು ನಡೆಸಿದ ಪಾದಯಾತ್ರೆಗಳಿಂದ ಕರ್ನಾಟಕದಲ್ಲಿ ಈ ಸಮುದಾಯ ಒಗ್ಗಟ್ಟಿನಿಂದ ಬಲಗೊಳ್ಳುತ್ತಿದ್ದು ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಈಡಿಗರ ಸಂಘದ ಶಕ್ತಿ ಕುಗ್ಗಿ ಇದೀಗ ರಾಜಕೀಯ ಓಲೈಕೆಗಾಗಿ ಇಂತಹ ಕೀಳು ಮಟ್ಟದ ಪ್ರಚಾರಕ್ಕೆ ಇಳಿದಿರುವುದು ಅತ್ಯಂತ ಖೇದಕರ ಮತ್ತು ಖಂಡನೀಯ.
ಡಾ. ಪ್ರಣವಾನಂದ ಶ್ರೀಗಳು ಈಡಿಗ ಸಮುದಾಯದಲ್ಲಿ ಹುಟ್ಟಿ ದೀಕ್ಷೆ ಪಡೆದು ಸ್ವಾಮೀಜಿಯಾಗಿದ್ದಾರೆ, ಅವರು ಸ್ವಾಮೀಜಿ ಅಲ್ಲದಿದ್ದರೆ ಇತರ ಸಮುದಾಯದಲ್ಲಿ ಇರುವ ಇತರ ನಾಲ್ವರು ಸ್ವಾಮೀಜಿಗಳು ಈಡಿಗ ಸಮುದಾಯದ ಸ್ವಾಮೀಜಿಗಳು ಅಲ್ಲವೇ? ಎಂದು ಸಂಘದ ಅಧ್ಯಕ್ಷರಿಗೆ ಪ್ರಶ್ನಿಸಬೇಕಾಗುತ್ತದೆ.
ನಮ್ಮ ಸಮಾಜದ ಹಿರಿಯ ನಾಯಕರಾದ ಬಿ.ಕೆ ಹರಿಪ್ರಸಾದ್ ಅವರ ನಾಯಕತ್ವವನ್ನು ಮೂಲೆಗುಂಪಾಗಿಸಲು ಪ್ರಯತ್ನಿಸುವ ಗುಂಪುಗಳೊಂದಿಗೆ ಸೇರಿಕೊಂಡು ಈಡಿಗರ ಸಂಘವು ಇದೀಗ ಇಂತಹ ಷಡ್ಯಂತ್ರವನ್ನು ಮಾಡಿ ಈಡಿಗ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.
78 ವರ್ಷಗಳಿಂದ ಇರುವ ಈಡಿಗರ ಸಂಘವು ಬೆಂಗಳೂರಿಗೆ ಸೀಮಿತವಾಗಿ ಸ್ವಹಿತಾಸಕ್ತಿಯನ್ನು ಕಾಪಾಡಿಕೊಂಡು ಬರುವುದಕ್ಕೆ ಮಾತ್ರ ಸೀಮಿತವಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ಇತರ ಜಿಲ್ಲೆಗಳಿಗೆ ಈ ಸಮಾಜದ ಕೊಡುಗೆ ಏನು ಎಂಬುದನ್ನು ಸಂಘದ ಅಧ್ಯಕ್ಷರು ಕೂಡಲೇ ಸ್ಪಷ್ಟನೆ ನೀಡಬೇಕು.
ಪುನೀತ್ ರಾಜಕುಮಾರ್ ಮತ್ತು ಸ್ಪಂದನ ವಿಜಯ ರಾಘವೇಂದ್ರ ನಮ್ಮನ್ನಗಲಿದಾಗ ಈಡಿಗ ಸಮುದಾಯದ ಪ್ರಕಾರ ಅಂತ್ಯವಿಧಿ ವಿಧಾನಗಳನ್ನು ನೆರವೇರಿಸಲು ಮಾರ್ಗದರ್ಶನ ನೀಡಿದವರು ಪೂಜ್ಯ ಡಾ. ಪ್ರಣವಾನಂದ ಶ್ರೀಗಳು ಎಂಬುದನ್ನು ಸಂಘವು ಮರೆತಿದೆಯೇ?
ಸಮಾಜ ಬಾಂಧವ ಪ್ರವೀಣ ನೆಟ್ಟಾರು ಹತ್ಯೆಯಾದ ಸಂದರ್ಭದಲ್ಲಿ ಡಾ. ಪ್ರಣವಾನಂದ ಶ್ರೀಗಳು ಅವರ ಮನೆಗೆ ತೆರಳಿ ಸಾಂತ್ವನ ಹೇಳಿ ಧೈರ್ಯ ತುಂಬಿ ಸರಕಾರಕ್ಕೆ ಒತ್ತಾಯವನ್ನ ಮಾಡಿ ಪರಿಹಾರವನ್ನು ಕೊಡಿಸಲು ಯತ್ನಿಸಿದಾಗ ಈಡಿಗರ ಸಂಘವು ಯಾಕೆ ಮೌನ ವಹಿಸಿತ್ತು?
ಪೂಜ್ಯ ಡಾಕ್ಟರ್ ಪ್ರಣವಾನಂದ ಶ್ರೀಗಳ ಹೋರಾಟ ಮತ್ತು ಜಾಗೃತಿ ಸಮಾವೇಶಗಳಿಂದ ರಾಜ್ಯದಲ್ಲಿ ಈ ಸಮುದಾಯ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಹಿಸದೆ ಈಡಿಗರ ಸಂಘ ಇಂಥ ವೃಥಾ ಆರೋಪಗಳನ್ನು ಮಾಡಿ ಸಮಾಜ ಬಾಂಧವರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಇಂತಹ ಕುಟಿಲ ನೀತಿಯನ್ನು ಬಿಟ್ಟು ಸಮಾಜದ ಒಗ್ಗಟ್ಟಿಗಾಗಿ ಎಲ್ಲರೂ ಒಮ್ಮನಸ್ಸಿನಿಂದ ಮುಂದುವರಿಯುವ ಬದಲು ಈ ರೀತಿಯ ಕ್ಷುಲ್ಲಕ ಆರೋಪಗಳನ್ನು ಮಾಡಿ ಸಮಯ ವ್ಯರ್ಥ ಮಾಡುವುದನ್ನು ಇನ್ನಾದರೂ ನಿಲ್ಲಿಸುವುದು ಒಳಿತು. ಪಕ್ಷಾತೀತವಾಗಿರತಕ್ಕಂಥ ಮನೋಭಾವದೊಂದಿಗೆ ಡಾ. ಪ್ರಣವಾನಂದ ಶ್ರೀಗಳು ಇವತ್ತು ರಾಜ್ಯದಲ್ಲಿ ಸಂಘಟನೆಯನ್ನು ಮಾಡಿ ಜಾಗೃತಿಯ ಸಂದೇಶವನ್ನು ಮನೆ ಮನೆಗೆ ಮುಟ್ಟಿಸುತ್ತಿರುವುದನ್ನು ಸಮಾಜ ಬಾಂಧವರು ಬೆಂಬಲಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ “ಒಂದೇ ಜಾತಿ- ಒಂದೇ ಮತ- ಒಬ್ಬನೇ ದೇವರು” ಎಂಬ ಸಂದೇಶವನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯದಲ್ಲಿ ಎಲ್ಲರೂ ಒಗ್ಗೂಡಬೇಕಾಗಿದೆ
ಡಾಕ್ಟರ್ ಪ್ರಣವಾನಂದ ಶ್ರೀಗಳ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಅಪಮಾನಿಸಲು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಮುಂದಾದರೆ ಮುಂದಿನ ದಿನಗಳಲ್ಲಿ ಸಮುದಾಯದ ಜನರಿಂದ ಪ್ರಬಲ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತೇವೆ.
ಡಾಕ್ಟರ್ ಪ್ರಣವಾನಂದ ಶ್ರೀಗಳ ಹೋರಾಟದ ಫಲವಾಗಿ ಸಿಕ್ಕಿದ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದಿಂದ ಒಬ್ಬರನ್ನು ನಾಮನಿರ್ದೇಶನ ಮಾಡಲು ಸ್ವಾಮೀಜಿಯವರ ವಿರುದ್ಧ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡಿ ಹುನ್ನಾರ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಕರ್ನಾಟಕ ಪ್ರದೇಶ ಈಡಿಗರ ಸಂಘವು ಸಮಾಜವನ್ನು ಒಗ್ಗಟ್ಟು ಮಾಡುವಲ್ಲಿ ಕೆಲಸ ಮಾಡಲಿ ಪೂಜ್ಯಶ್ರೀಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಸಮಾಜದಲ್ಲಿ ಒಡಕು ಸೃಷ್ಟಿಸುವ ಪ್ರಯತ್ನವನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಾಜ ಬಾಂಧವರು ತೀವ್ರ ಹೋರಾಟಕ್ಕೆ ಸಿದ್ಧರಾಗುತ್ತಾರೆ ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತೇವೆ.
1. ಸತೀಶ್ ವಿ ಗುತ್ತೇದಾರ್, ಸದಸ್ಯರು ಕಾರ್ಯಕಾರಿ ಸಮಿತಿ ಕರ್ನಾಟಕ ಪ್ರದೇಶ ಬೆಂಗಳೂರು ಹಾಗೂ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಲ್ಬುರ್ಗಿ.
2. ಡಾ. ರಾಜಶೇಖರ್ ಸೇಡಂಕರ್, ಅಧ್ಯಕ್ಷರು ಬೀದರ್ ಜಿಲ್ಲಾ ಆರ್ಯ ಈಡಿಗರ ಸಂಘ.
3. ರಾಘವೇಂದ್ರ ಗೌಡ, ಅಧ್ಯಕ್ಷರು ರಾಯಚೂರು ಜಿಲ್ಲಾ ಆರ್ಯ ಈಡಿಗರ ಸಂಘ.
4. ನಾಗರಾಜ ಗೌಡ ಮಾನಸಗಲ್, ಅಧ್ಯಕ್ಷರು ಯಾದಗಿರಿ ಜಿಲ್ಲಾ ಆರ್ಯ ಈಡಿಗರ ಸಂಘ.
5. ರಾಜೇಶ್ ಜಗದೇವ ಗುತ್ತೇದಾರ್, ಅಧ್ಯಕ್ಷರು ಕಲಬುರ್ಗಿ ಜಿಲ್ಲಾ ಆರ್ಯ ಈಡಿಗರ ಸಂಘ.
ನಾಳೆಯಿಂದ ರಾಜ್ಯಾದ್ಯಂತ ತಿಮ್ಮೇಗೌಡರ ಹೇಳಿಕೆ ಖಂಡಿಸಿ ಪತ್ರಿಕಾಗೋಷ್ಠಿಗಳು ಮತ್ತು ಬೀದಿಗಿಳಿದು ಹೋರಾಟ ಮಾಡಲು ರಾಷ್ಟ್ರೀಯ ಈಡಿಗ ಮಹಾಮಂಡಳಿ, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಮತ್ತು ಈಡಿಗ ಬಿಲ್ಲವ ನಾಮಧಾರಿ ದೀವರು ಸಮಾಜದ ಮುಖಂಡರುಗಳು ಸೇರಿ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.