2,586 total views
ಕಲಬುರಗಿ:- ಶಿಸ್ತು ಇರುವಲ್ಲಿ ಮನಸ್ಸಿಗೆ ಚೈತನ್ಯ ನೀಡುವ ವಾತಾವರಣವಿರುತ್ತದೆ. ಧನಾತ್ಮಕ ಶಕ್ತಿಯು ಪ್ರವಹಿಸುತ್ತದೆ. ಸಮಾಧಾನ ಸಿಗುತ್ತದೆ. ಮಾತು ನಡತೆ ಮತ್ತು ಕೃತಿಯಲ್ಲಿ ಶಿಸ್ತನ್ನು ಕಾಯ್ದುಕೊಳ್ಳುವವರು ಅಪೂರ್ವ ಯಶಸ್ಸನ್ನು ಸಾಧಿಸುತ್ತಾರೆ. ಅಂತಹ ಶಿಸ್ತು ಸಂಯಮವನ್ನು ಕಟ್ಟೆಚ್ಚರಿಕೆಯಿಂದ ಪಾಲಿಸುವುದರ ಮೂಲಕ ಯಶಸ್ವೀ ಜೀವನ ಪಯಣ ಸಾಗಿಸುತ್ತಿರುವ ಭವಿಷ್ಯದ ಆದರ್ಶ ಶಿಕ್ಷಕಿ ಆಶಾ ಎಮ್ ಅವರು ನಿಜವಾದ ಅರ್ಥದಲ್ಲಿ ಶಿಸ್ತಿನ ಸಿಪಾಯಿ, ಅಚ್ಚುಕಟ್ಟುತನದ ಆರಾಧಕರು. ಆಶಾ ಎಮ್ ಅವರು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿ, ಫಲಿತಾಂಶದಲ್ಲಿ ಅಚ್ಛಳಿಯದ ಛಾಪು ಮೂಡಿಸಿದ್ದಾರೆ. ಮುಂದೆ ಬ್ಯಾಚುಲರ್ ಆಫ್ ಸೈನ್ಸ್ ಮತ್ತು ಬಿ.ಎಡ್ ಕೋರ್ಸ್‍ನಲ್ಲಿ ಕೂಡ ಗುಣಮಟ್ಟದ ಫಲಿತಾಂಶ ಪಡೆದು, ಮಾದರಿ ಪ್ರಶಿಕ್ಷಣಾರ್ಥಿಯಾಗಿದ್ದಾರೆ. ಆಶಾ ಎಮ್ ಅವರ ಅಭಿರುಚಿ ಮತ್ತು ಆಯ್ಕೆಗಳು ವಿಭಿನ್ನ ಮತ್ತು ವಿಶಿಷ್ಟ, ಗುಂಪಿನಲ್ಲಿ ಗೋವಿಂದನಾಗುವುದನ್ನು ಅವರಿಷ್ಟ ಪಡುವುದಿಲ್ಲ. ಹತ್ತರೊಂದಿಗೆ ಹನ್ನೊಂದಾಗುವ ಜಾಯಮಾನ ಅವರದಲ್ಲ. ಅವರಿಗೆ “ಯಾವುದು ಹೇಗಿರಬೇಕು ಯಾವುದು ಹೇಗಿರಕೂಡದು” ಎನ್ನುವ ಸ್ಪಷ್ಟಕಲ್ಪನೆ ಇದೆ.. ಈ ಎಲ್ಲ ಅನುಭವ ಮತ್ತು ಮಾಹಿತಿಯ ಹಿನ್ನೆಲೆಯಲ್ಲಿಯೇ ಅವರ ಪಾಠ ಯೋಜನೆ ತಯಾರಿ ನಡೆಯುತ್ತದೆ. ಯೋಜನೆ ಮತ್ತು ಅನುಷ್ಥಾನಗಳು ಸಾಗಿರುತ್ತದೆ. ಅವರು ತಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಗಂಭೀರವಾಗಿಯೇ ಪರಿಗಣಿಸುತ್ತಾರೆ, ವಿಶಿಷ್ಟವಾಗಿಯೇ ರೂಪಿಸುತ್ತಾರೆ. ಅಸೀಮ ಸಂಯಮ ಮೆರೆಯುತ್ತಾರೆ, ಕ್ಷಮೆ ಅವರ ಇನ್ನೊಂದು ದೊಡ್ಡಗುಣ ಆದ್ದರಿಂದ ಮಹಾಲಕ್ಷ್ಮೀ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಮನಸಲ್ಲಿ ಅಚ್ಛಳಿಯದೇ ಉಳಿದಿದ್ದಾರೆ ಎಂದು ಶಿಕ್ಷಣ ತಜ್ಞ ದೇವಿಂದ್ರ ವಿಶ್ವಕರ್ಮ ಹೇಳಿದರು. ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಈ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕಿಯರಾದ ಶಿವಾನಿ, ಭಾಗ್ಯಶ್ರೀ ವಾಯ್, ತಾಯಮ್ಮ, ಭಾಗ್ಯಶ್ರೀ ಪಾಟೀಲ್, ಶರಣಮ್ಮ, ಮೆಹಜಬಿನ್, ರೇಷ್ಮಾ, ರೇಣುಕಾ, ಭವಾನಿ ಮಾಲಿಪಾಟೀಲ್, ಬಸಮ್ಮ ಆರ್, ದಾನೇಶ್ವರಿ, ಮೋನಿಕಾ, ಭಾಗ್ಯಶ್ರೀ, ಸುಧಾ, ರಾಜೇಶ್ವರಿ, ಅಂಬಿಕಾ, ಪೂಜಾ ಎಸ್, ಜ್ಯೋತಿ, ಪೂಜಾ ಕಲಬುರಗಿ, ಐಶ್ವರ್ಯಾ, ಗುಂಡಮ್ಮ ಶಿಕ್ಷಕರಾದ ಶರಣಗೌಡ, ಶಿವರಾಜ್, ಮಹಾಂತೇಶ ಸೇರಿ ಮುಂತಾದವರು ಹಾಜರಿದ್ದರು.
ವರದಿಗಾರರು-ಡಾ.ಎಂ.ಬಿ.ಹಡಪದ ಸುಗೂರ ಎನ್