2,563 total views
ಕಲಬುರಗಿ:- ಶ್ರೀ ಕೃಷ್ಣ ಪರಮಾತ್ಮ ಶ್ರೀ ಮಹಾವಿಷ್ಣುವಿನ 8ನೇ ಅವತಾರ. ಭೂದೇವಿ ದೈತ್ಯರ, ರಾಕ್ಷಸರ, ನಿಶಾಚರರ, ಭೂಭಾರ ಸಹಿಸಲಾರದೇ ಪರಮಾತ್ಮನಲ್ಲಿ ಪ್ರಾರ್ಥಿಸಿಕೊಂಡಾಗ ಪ್ರಾಧುರ್ಬಾವಗೊಂಡ ಅವತಾರವೇ ಶ್ರೀ ಕೃಷ್ಣ ಎಂದು ಜೈವೀರ್ ಹನುಮಾನ್ ದೇವಸ್ಥಾನದ ಪ್ರಮುಖ ವಿನುತ್ ಜೋಶಿ ಅವರು ಹೇಳಿದರು.
ನಗರದ ಕರುಣೇಶ್ವರ್ ನಗರದ ಜೈ ವೀರ್ ಹನುಮಾನ್ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುಷ್ಟ ಕಂಸ, ಕೌರವರ ವಿನಾಶ, ಪಾಂಡವರ ರಕ್ಷಣೆ, ಧರ್ಮ ಸಂಸ್ಥಾಪನೆಗಾಗಿ ಶ್ರೀ ಕೃಷ್ಣ ಪರಮಾತ್ಮ ಅವತಾರ ತಾಳಿದ ಎಂದರು.
ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಜೀವನದ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಿದ್ದಾನೆ. ಭಗವದ್ಗೀತೆ ನಮ್ಮೆಲ್ಲರ ಬದುಕಿನ ಗೀತೆಯಾಗಬೇಕು. ಸಜ್ಜನರ ರಕ್ಷಣೆ, ಧರ್ಮ ಸಂಸ್ಥಾಪನೆಗಾಗಿ ಯುಗ, ಯುಗಗಳಲ್ಲೂ ಅವತರಿಸುವ ಭರವಸೆಯನ್ನಿತ್ತು ಶ್ರೀ ಕೃಷ್ಣ ಪರಮಾತ್ಮ ಅವತಾರ ಸಮಾಪ್ತಿಗೊಳಿಸಿದನು ಎಂದು ಅವರು ಹೇಳಿದರು.
ದೇವಸ್ಥಾನದ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅವಿನಾಶ್ ಕುಲಕರ್ಣಿ ರೇವೂರ್ ಅವರು ಮಾತನಾಡಿ, ಹಿಂದೆಲ್ಲ ಶಾಲಾ ಪಠ್ಯದಲ್ಲಿ ರಾಮಾಯಣ, ಮಹಾಭಾರತದಂತಹ ಧಾರ್ಮಿಕ ಶಿಕ್ಷಣ ಇರುತ್ತಿತ್ತು. ಈಗಿನ ಪಠ್ಯದಲ್ಲಿ ನೈತಿಕ, ಧಾರ್ಮಿಕ ಶಿಕ್ಷಣ ಮಾಯವಾಗಿದೆ. ಆದ್ದರಿಂದ ನಾವೆಲ್ಲರೂ ಮನೆಯಲ್ಲಿ ಪ್ರತಿದಿನ ಭಗವದ್ಗೀತೆಯ ಶ್ಲೋಕವನ್ನು ಪಠಿಸಿ ಅರ್ಥೈಸಿ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಜೈವೀರ್ ಭಜನಾ ಮಂಡಳಿಯ ಮಾತೆಯರು ಮತ್ತು ಸಹೋದರಿಯರಿಂದ ಶ್ರೀ ಕೃಷ್ಣನ ಭಜನೆ, ವೈದಿಕರಾದ ರಘೋತ್ತಮಾಚಾರ್ ಅವರಿಂದ ಸಂಕಲ್ಪ, ಶ್ರೀಕೃಷ್ಣನಿಗೆ ಅಗ್ರ್ಯಪ್ರದಾನ, ನೈವೇದ್ಯ, ಮಂಗಳಾರತಿ, ತೊಟ್ಟಿಲು ಸೇವೆ ಜರುಗಿದವು.
ಪ್ರಮುಖರಾದ ಕಿಶನರಾವ್ ಮಟಮಾರಿ, ರಾಘವೇಂದ್ರ ಕುಲಕರ್ಣಿ, ವಿಜಯಕುಮಾರ್ ಕುಲಕರ್ಣಿ, ಕಿಶನರಾವ್ ಕುಲಕರ್ಣಿ, ಶಂಕರರಾವ್ ಸಿಂದಗಿಕರ್, ಮುರಳಿಧರರಾವ್ ಕುಲಕರ್ಣಿ, ಶಾಮರಾವ್ ಕುಲಕರ್ಣಿ, ವಿಶ್ವಾಸ್ ಮೊಘೇಕರ್, ಹೃಷಿಕೇಶ್ ಚೌಡಾಪುರ್, ರಘೋತ್ತಮಾಚಾರ್, ಗುಂಡು ಕುಲಕರ್ಣಿ, ಪ್ರವೀಣ್ ಓಂಕಾರ್, ರಾಕೇಶ್ ಕುಲಕರ್ಣಿ, ಭಜನಾ ಮಂಡಳಿಯ ಪದ್ಮಜಾ ಜಮಖಂಡಿ, ಹೇಮಾ ಚೌಡಾಪೂರಕರ್, ವಿನೀತಾ ಕುಲಕರ್ಣಿ, ಹೇಮಾ ರೇವೂರ್, ಮಾಲಿನಿ ಮಟಮಾರಿ, ಶೋಭಾ ಕುಲಕರ್ಣಿ, ಪಾರಾಯಣ ಸಂಘ ಹಾಗೂ ಶ್ರೀ ವಿದ್ಯಾ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.
ವರದಿಗಾರರು-ಡಾ.ಎಂ.ಬಿ.ಹಡಪದ ಸುಗೂರ ಎನ್