242 total views
ಕಲಬುರಗಿ:- ಮೇ 13 ರಂದು ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆದ ಮತದಾನದ ಭಾಗವಾಗಿ ಶನಿವಾರ ಬೆಳಗ್ಗೆ 8ರಿಂದ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಮತ ಎಣಿಕೆ ನಡೆಯಲಿದೆ. ಈ ನಿಟ್ಟಿನಲ್ಲಿ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ಗುರುಕರ್ ತಿಳಿಸಿದರು. ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕೇಂದ್ರಗಳ ಪರಿಶೀಲನೆ ಕೈಗೊಂಡ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡುತ್ತಾ, ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದು ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ನಡೆಯಲಿದೆ ಎಂದರು. ತಲಾ ಒಂದು ಕೇಂದ್ರಕ್ಕೆ 16 ಟೇಬಲ್ ಇರಲಿದ್ದು, ಈ ಪೈಕಿ ಎರಡು ಟೇಬಲ್ ಅಂಚೆ ಮತಗಳ ಎಣಿಕೆಗೆ ಬಳಸಿಕೊಳ್ಳಲಾಗುವುದು. ಸರಾಸರಿ 16 ಸುತ್ತುಗಳ ಮತ ಎಣಿಕೆ ನಡೆಯಲಿದ್ದು, ಇದು ಕ್ಷೇತ್ರಗಳ ಆಧಾರದ ಮೇಲೆ ನಡೆಯಲಿದೆ ಎಂದು ನುಡಿದರು. ಒಂದು ಟೇಬಲ್ ಗೆ ಒಬ್ಬ ಏಜೆಂಟ್ ಮಾತ್ರ ಇರಲಿದ್ದು, ಓರ್ವ ವೀಕ್ಷಕ, ಒಬ್ಬ ಕ್ಷೇತ್ರ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ, ಒಬ್ಬ ಮೈಕ್ರೋ ಅಬ್ಸರ್ವರ್ ಕಾರ್ಯನಿರ್ವಹಿಸಲಿದ್ದಾರೆಎಂದು ಮಾಹಿತಿ ನೀಡಿದರು.
ಬಿಗಿ ಬಂದೋಬಸ್ತ್:
ಇಂದು ಬೆಳಗ್ಗೆ 6ರಿಂದ ಶನಿವಾರ ಸಂಜೆ 6ರವರೆಗೆ ವಿವಿ ಆವರಣದಲ್ಲಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ವಿಧಿಸಲಾಗಿದ್ದು, ವಿವಿ ಆವರಣ ಪ್ರವೇಶಕ್ಕಾಗಿ ಕೇವಲ ಗೇಟ್ ಕ್ರಮಾಂಕ-1 ಬಳಸಲು ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರದ ಏಜೆಂಟ್ ಸೇರಿದಂತೆ ಯಾರದ್ದೇ ವಾಹನವನ್ನು ಗೇಟ್ ಒಳಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಇನ್ನು, ಮತ ಎಣಿಕೆ ಸಿಬ್ಬಂದಿ ಸೇರಿದಂತೆ ತುರ್ತು ಸಿಬ್ಬಂದಿಯ ವಾಹನಗಳನ್ನು ಮುಖ್ಯ ಗೇಟ್ -1ರ ಬಳಿ ಪಾರ್ಕ್ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.ಮೊಬೈಲ್ ಹಾಗೂ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಿವಿ ಆವರಣದಲ್ಲಿ ಕೊಂಡೊಯ್ಯಲು ಅವಕಾಶ ಇರುವುದಿಲ್ಲ ಎಂದು ಸಹ ಹೇಳಿದರು.
1500ಕ್ಕೂ ಹೆಚ್ಚು ಪೋಲೀಸ್ ಬಳಕೆ
ಮತ ಎಣಿಕೆ ನಡೆಯಲಿರುವ ಗುಲ್ಬರ್ಗ ವಿವಿ ಆವರಣದಲ್ಲಿ ಒಟ್ಟು 1500ಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ ಎಂದು ಪೋಲೀಸ್ ಕಮಿಷನರ್ ಚೇತನ್ ತಿಳಿಸಿದರು.
ಸಿ.ಆರ್.ಪಿಎಫ್, ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಸಿವಿಲ್ ಪೋಲೀಸ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ವಿಜಯೋತ್ಸವಕ್ಕೆ ಅವಕಾಶ ನಿಷಿದ್ಧ
ಮತ ಎಣಿಕೆ ನಡೆಯಲಿರುವ ವಿವಿ ಆವರಣ ಸೇರಿದಂತೆ ಇಡೀ ಕಲಬುರಗಿ ನಗರದ ಯಾವುದೇ ಭಾಗದಲ್ಲಿ ವಿಜಯೋತ್ಸವಕ್ಕೆ ಅವಕಾಶ ಇರುವುದಿಲ್ಲ ಎಂದು ಪೋಲೀಸ್ ಕಮಿಷನರ್ ಚೇತನ್ ಸ್ಪಷ್ಟಪಡಿಸಿದರು.
ವರದಿ – ಎಮ್.ಬಿ ಹಡಪದ ಸುಗೂರ ಎನ್.