3,590 total views
ಮೈಸೂರು: ವರುಣಾದಲ್ಲಿ ಜೆಡಿಎಸ್ ಬೆಂಬಲಿಗರು ಬಿಜೆಪಿಗೆ ಮತ ಹಾಕಿದ್ದಾರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಆರೋಪಿಸಿದ್ದಾರೆ.ಬೆಂಗಳೂರಿಗೆ ತೆರಳುವ ಮುನ್ನ ಮೈಸೂರಿನ ಶಾರದಾದೇವಿ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಬಹುತೇಕ ಎಕ್ಸಿಟ್ ಪೋಲ್‌ಗಳು ಇದನ್ನೇ ಸೂಚಿಸುತ್ತಿವೆ ಎಂದು ಹೇಳಿದರು. “ಜನರ ನಾಡಿಮಿಡಿತದ ಬಗ್ಗೆ ನನ್ನ ತಿಳುವಳಿಕೆ ನಿಜವಾಗಿದೆ. ನಾನು ನಿರೀಕ್ಷಿಸಿದಂತೆಯೇ ಫಲಿತಾಂಶಗಳು ಬರಲಿದೆ. ಕಾಂಗ್ರೆಸ್ 130 ರಿಂದ 150 ಸ್ಥಾನಗಳನ್ನು ಗೆಲ್ಲಲಿದೆ. ಕರಾವಳಿ ಭಾಗದಲ್ಲಿಯೂ ಕಾಂಗ್ರೆಸ್‌ನ ಸ್ಥಾನಗಳು ಹೆಚ್ಚಾಗಲಿವೆ ಎಂದು ತಿಳಿಸಿದರು. ಹಳೆ ಮೈಸೂರಿನ ಕೆಲವೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಈ ಭಾಗದಲ್ಲಿ ಎಲ್ಲಿಯೂ ಬಿಜೆಪಿ ಜತೆ ನೇರ ಹಣಾಹಣಿ ಇಲ್ಲ. ವರುಣಾದಲ್ಲಿ ಸುಲಭವಾಗಿ ಗೆಲ್ಲುತ್ತೇನೆ, ಸೋಮಣ್ಣಗೆ ಇಲ್ಲಿನ ಜನರೇಕೆ ಮತ ಹಾಕುತ್ತಾರೆ? ವರುಣಾಗೆ ಅವರ ಕೊಡುಗೆ ಏನು? ವರುಣಾದಲ್ಲಿ ಬಿಜೆಪಿ ಜಾತಿ ರಾಜಕಾರಣ ಮತ್ತು ಹಣದ ರಾಜಕಾರಣ ಮಾಡಿದೆ. ವರುಣಾದಲ್ಲಿ ಜೆಡಿಎಸ್ ಬೆಂಬಲಿಗರು ಬಿಜೆಪಿಗೆ ಮತ ಹಾಕಿದ್ದಾರೆ, ಆದರೂ ನಾನು ಸುಲಭವಾಗಿ ಗೆಲ್ಲುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕದಡುವ ಇಂತಹ ಸಂಘಟನೆಗಳನ್ನು ನಿಷೇಧಿಸಲು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವುದರಿಂದ ಬಜರಂಗದಳ ವಿಚಾರ ನನಗೆ ಸಮಸ್ಯೆಯೇ ಆಗುವುದಿಲ್ಲ ಎಂದರು. ಲಿಂಗಾಯತ ನಾಯಕರೆಲ್ಲ ಭ್ರಷ್ಟರು ಎಂದು ಎಲ್ಲಿ ಹೇಳಿದ್ದೆ, ಸಿಎಂ ಬಸವರಾಜ ಬೊಮ್ಮಾಯಿ ಭ್ರಷ್ಟ ಎಂದು ಮಾತ್ರ ಹೇಳಿದ್ದೆ, ಅದನ್ನೂ ಬಿಜೆಪಿ ತಿರುಚಿ ನೆಗೆಟಿವ್ ಪ್ರಚಾರ ಮಾಡಿದೆ. ‘ಜನರು ಸ್ಪಷ್ಟ ಬಹುಮತ ನೀಡುತ್ತಿರುವಾಗ ಶಾಸಕರನ್ನು ರಕ್ಷಿಸಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದರು.