3,924 total views
ಬೆಂಗಳೂರು: ಮೇ ೧೦ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಹೊರಬೀಳಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯದ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇವಿಎಂ ಮತ್ತು ವಿವಿಪ್ಯಾಟ್ಗಳನ್ನು ಇರಿಸಲಾಗಿರುವ ಎಲ್ಲಾ ಸ್ಟ್ರಾಂಗ್ ರೂಮ್ಗಳಲ್ಲಿ ಪೊಲೀಸರೊಂದಿಗೆ ಅರೆಸೇನಾ ಪಡೆಗಳು ಕಾವಲು ಕಾಯುತ್ತಿವೆ. ಎಲ್ಲ ಕೇಂದ್ರಗಳಿಗೂ ಮೂರು ಹಂತದ ಭದ್ರತೆ ಒದಗಿಸಲಾಗಿದೆ. ಅರೆಸೇನಾ ಪಡೆಗಳು ಸ್ಟ್ರಾಂಗ್ ರೂಮ್ಗಳಲ್ಲಿ ಕಾವಲು ಕಾಯುತ್ತಿದ್ದರೆ, ಮತ ಎಣಿಕೆ ಕೇಂದ್ರಗಳ ಆವರಣವನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್ಆರ್ಪಿ) ಪಡೆಯ ಸಿಬ್ಬಂದಿ ಮತ್ತು ನಗರ ಅಥವಾ ಜಿಲ್ಲಾ ಪೊಲೀಸರು ಮತ ಎಣಿಕೆ ಕೇಂದ್ರಗಳ ಪ್ರವೇಶ ದ್ವಾರದಲ್ಲಿ ಕಾವಲು ಕಾಯುತ್ತಿದ್ದಾರೆ. ಪ್ರತಿ ಕೇಂದ್ರದಲ್ಲಿ ೧೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ನಿಯೋಜಿಸಲಾಗಿದೆ. ಅಧಿಕೃತ ಪಾಸ್ಗಳನ್ನು ಹೊಂದಿರುವ ಅಭ್ಯರ್ಥಿಗಳು ಮತ್ತು ಪಕ್ಷದ ಏಜೆಂಟ್ಗಳನ್ನು ಹೊರತುಪಡಿಸಿ, ಮತ ಎಣಿಕೆ ಕೇಂದ್ರದೊಳಗೆ ಇತರರಿಗೆ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರಾಕರಿಸಲಾಗಿದೆ. ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ಗಳು (ಡಿಎಫ್ಎಮ್ಡಿ) ಮತ್ತು ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ಗಳು (ಎಚ್ಎಚ್ಎಮ್ಡಿ) ಸಹ ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶಿಸುವವರನ್ನು ಪರೀಕ್ಷಿಸಲಿವೆ. ರಾಜ್ಯಾದ್ಯಂತ ಎಲ್ಲಾ ಮತ ಎಣಿಕೆ ಕೇಂದ್ರಗಳಿಗೆ ಸುಮಾರು ೮೭ ಅರೆಸೇನಾ ಪಡೆ ತುಕಡಿ ಮತ್ತು ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗುವುದು. ರೌಂಡ್-ದಿ-ಕ್ಲಾಕ್-ಸೆಕ್ಯುರಿಟಿಯೊAದಿಗೆ ಭದ್ರತಾ ಕವರ್ ಅನ್ನು ಮೂರು ಪಾಳಿಗಳಲ್ಲಿ ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಐದು ಸ್ಟ್ರಾಂಗ್ ರೂಂಗಳಿದ್ದು, ಪ್ರತಿ ಸ್ಟ್ರಾಂಗ್ ರೂಂ ಸಹ ಎಸಿಪಿ ದರ್ಜೆಯ ಅಧಿಕಾರಿಯ ಮೇಲ್ವಿಚಾರಣೆಯಲ್ಲಿರುತ್ತದೆ.