403 total views
ಕಲಬುರಗಿ:-ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಸಂರಕ್ಷಣೆ ಎಲ್ಲರದಾಗಿದೆ. ನೀತಿ ನಿಯಮಗಳು ಜೀವನ ಶ್ರೇಯಸ್ಸಿಗೆ ಮೂಲ. ಮೌಲ್ಯಾಧಾರಿತ ಬದುಕಿಗೆ ಧರ್ಮ ಸರ್ವರಿಗೂ ದಿಕ್ಸೂಚಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೇಡಂ ತಾಲೂಕಿನ ಮಳಖೇಡ ಮೂಲಾಧಾರ ಸಂಸ್ಥಾನ ಬೃಹನ್ಮಠದ ಪಟ್ಟಾಧಿಕಾರದ ಅಂಗವಾಗಿ ಜರುಗಿದ ಪುರಾಣ ಮಂಗಲ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಆಕಾಶ ಎಷ್ಟೇ ಅಗಲವಾಗಿದ್ದರೂ ನಕ್ಷತ್ರಕ್ಕೆ ಬೆಲೆ ಜಾಸ್ತಿ. ಮನುಷ್ಯ ಎಷ್ಟೇ ಸಿರಿವಂತನಾದರೂ ಗುಣಕ್ಕೆ ಬೆಲೆ ಜಾಸ್ತಿ. ನೋವುಗಳ ನಡುವೆ ನೆಮ್ಮದಿ ಹುಡುಕುವುದೇ ಜೀವನ. ನಿರಾಸೆಗಳ ನಡುವೆ ಭರವಸೆಯೊಂದಿಗೆ ಸಾಗುವುದೇ ಜೀವನವಾಗಿದೆ. ಅಲೆಗಳಿಲ್ಲದ ಸಮುದ್ರವಿಲ್ಲ. ಕಷ್ಟಗಳಿಲ್ಲದ ಮನುಷ್ಯನಿಲ್ಲ. ಅಲೆಗಳು ಸಮುದ್ರದ ಅಂದ ಹೆಚ್ಚಿಸಿದರೆ ಕಷ್ಟಗಳು ಜೀವನದ ಉನ್ನತಿಗೆ ಕಾರಣವಾಗುತ್ತವೆ. ಜೀವನದಲ್ಲಿ ಶಾಲೆ ಬದುಕಲು ವಿದ್ಯೆಯನ್ನು ಕಲಿಸುತ್ತದೆ. ಆದರೆ ಮನುಷ್ಯ ಜೀವನದಲ್ಲಿ ಹೇಗೆ ಬದುಕಬೇಕೆಂಬುದನ್ನು ಧರ್ಮ ಕಲಿಸುತ್ತದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ. ಜೀವನದಲ್ಲಿ ಯಾರು ನಮ್ಮ ಜೊತೆ ಇರುತ್ತಾರೋ ಇಲ್ಲವೋ ಗೊತ್ತಿಲ. ಆದರೆ ಧರ್ಮ ಯಾವಾಗಲೂ ನಮ್ಮ ಜೊತೆಗಿದ್ದರೆ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ. ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಮಳಖೇಡ ಮೂಲಾಧಾರ ಸಂಸ್ಥಾನ ಬೃಹನ್ಮಠ ಆದರ್ಶ ಗುರು ಪರಂಪರೆ ಹೊಂದಿ ಈ ಭಾಗದ ಭಕ್ತರಿಗೆ ಸನ್ಮಾರ್ಗ ದರ್ಶನ ತೋರಿದೆ. ನಾಳೆ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಸಂಭ್ರಮದಿಂದ ಜರುಗುತ್ತದೆ. ವಿದ್ಯಾ ವಿನಯ ಸಂಪನ್ನರಾದ ವಿರೂಪಾಕ್ಷ ದೇವರಿಗೆ ಪಟ್ಟಾಧಿಕಾರದ ನಂತರ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳೆಂಬ ನಾಮಾಂಕಿತದಿಂದ ಆಶೀರ್ವದಿಸಲಾಗುವುದೆಂದರು.
ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ತೋಟ್ನಳ್ಳಿ ಡಾ.ತ್ರಿಮೂರ್ತಿ ಶಿವಾಚಾರ್ಯರು, ಸೇಡಂ ಸದಾಶಿವ ಶ್ರೀಗಳು, ಸೇಡಂ ಪಂಚಾಕ್ಷರಿ ಶ್ರೀಗಳು ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು.
ಕೇದಾರಲಿಂಗಯ್ಯ ಹಿರೇಮಠ, ಶಿವಶರಣಪ್ಪ ಸೀರಿ, ಉದಯಕುಮಾರ ಪವಾರ, ಕೆ.ವಿ.ವಿ.ವಾಯ್.ಎಸ್.ನಾರಾಯಣ ಮೊದಲಾದ ಗಣ್ಯರು ಪಾಲ್ಗೊಂಡು ಗುರುರಕ್ಷೆ ಪಡೆದರು. ಇದೇ ಸಂದರ್ಭದಲ್ಲಿ ಮಾರ್ಚ 5ರಿಂದ ನಡೆದು ಬಂದ ರೇಣುಕ ವಿಜಯ ಪುರಾಣ ಪ್ರವಚನವನ್ನು ಗರೂರು ವೇ.ಶಿವಲಿಂಗ ಶಾಸ್ತ್ರಿಗಳು ಮಂಗಲಗೊಳಿಸಿದರು. ಸಿದ್ದಯ್ಯಸ್ವಾಮಿ ಹಿರೇಮಠ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಸಂಭ್ರಮದಿಂದ ಜರುಗಿತು.
ವರದಿ -ಎಮ್ ಬಿ ಹಡಪದ ಸುಗೂರ ಎನ್