470 total views
ಮೈಸೂರು :-ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಲೇಬೇಕೆಂಬ ಕನಸಿಗೆ ನೀರೆರೆಯಲಾಗಿದ್ದು, ಇದೇ ತಿಂಗಳ 19ರಂದು 5ಸಾವಿರ ಮಂದಿಗೆ ಸ್ವಂತ ಮನೆ ಮಂಜೂರಾತಿ ಪತ್ರ ಹಸ್ತಾಂತರ ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 65ರಲ್ಲಿ ಯೋಗಕ್ಷೇಮ ಯಾತ್ರೆ ಹಿನ್ನೆಲೆಯಲ್ಲಿ ಶ್ರೀರಾಂಪುರ ಬಡಾವಣೆಯ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಲೇಬೇಕು ಎಂಬ ಮಹಾಸಂಕಲ್ಪದೊಂದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಕೃಷ್ಣರಾಜ ಕ್ಷೇತ್ರದಲ್ಲಿ ಯಶಸ್ವಿಯಾಗಿ ಜಾರಿ ಮಾಡಲಾಗಿದ್ದು, ಈಗಾಗಲೇ 8 ಸಾವಿರ ಮಂದಿಗೆ ಸ್ವಂತ ಮನೆ ಮಂಜೂರಾತಿ ಪತ್ರ ಹಸ್ತಾಂತರ ಮಾಡಲಾಗಿದೆ.ಇನ್ನುಳಿದ 5 ಸಾವಿರ ಮಂದಿಗೆ ಇದೇ ತಿಂಗಳ 19ನೇ ತಾರೀಖಿನಂದು ಹಕ್ಕುಪತ್ರ ನೀಡಲಾಗುವುದು ಎಂದು ಘೋಷಿಸಿದರು.
ಅಭಿವೃದ್ಧಿ ವಿಚಾರದಲ್ಲಿ ಇಂದು ಕೆ.ಆರ್.ಕ್ಷೇತ್ರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸಾರ್ವಜನಿಕವಾಗಿ ಹೇಳಿದ್ದಾರೆ. ಈ ಮಾಹಿತಿ ತಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತುಂಬಿದ ಸಮಾವೇಶದಲ್ಲಿ ಬೆನ್ನಿಗೆ ಪ್ರೀತಿಯಿಂದ ಗುದ್ದುವ ಮೂಲಕ ಆಶೀರ್ವದಿಸಿದ್ದಾರೆ. ಈ ಎಲ್ಲಾ ಫಲ ಕ್ಷೇತ್ರದ ಜನರಿಗೆ ಸಲ್ಲಲಿದೆ ಎಂದರು.
ಏಪ್ರಿಲ್ ತಿಂಗಳಲ್ಲಿ ನಾನು ಹಾಗೂ ನಮ್ಮ ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆ ಬಾಗಿಲಿಗೆ ಬರಲಿದ್ದೇವೆ. ನಿಮ್ಮ ಆಶೀರ್ವಾದ ನನಗೆ ಬೇಕಿದೆ. ನಾನು ನಿಮ್ಮ ಮನೆಯ ಮಗ, ನಿಮ್ಮ ಸಹೋದರ, ಆದಕಾರಣ ಒಂದು ಸಹಾಯ ಮಾಡಿ. ಪ್ರತಿ ಮನೆಯಿಂದ ಕೇವಲ 10 ರೂಪಾಯಿಗಳನ್ನು ನಿಮ್ಮ ಮನೆಯಲ್ಲಿರುವ ಭಗವಂತನ ಮುಂದಿಟ್ಟು ಪೂಜಿಸಿ ಕೊಡಿ. ಅದು ಈ ಚುನಾವಣೆಗೆ ಠೇವಣಿ ಹಣವಾಗಲಿದೆ, ಅಷ್ಟು ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
1994ರಿಂದ ಈವರೆಗೆ ನಾನು ಕ್ಷೇತ್ರದಲ್ಲಿ ಹಣ, ಹೆಂಡ ಹಂಚಿಲ್ಲ. ನಿಮ್ಮೆಲ್ಲರ ವಿಶ್ವಾಸದಿಂದ ಆಯ್ಕೆಯಾಗುತ್ತಾ ಬಂದಿದ್ದೇನೆ. ನಿಮ್ಮ ಋಣ ನನ್ನ ಮೇಲಿದೆ. ಅದನ್ನು ಕಾಯಾ, ವಾಚಾ, ಮನಸಾ ತೀರಿಸುತ್ತಲೂ ಬಂದಿದ್ದೇನೆ. ಇದೀಗ ಮತ್ತೆ ಚುನಾವಣೆ ಎದುರಾಗಿದ್ದು, ಯಾವುದೇ ರೀತಿಯ ಖರ್ಚಿಲ್ಲದೆ ಈ ಚುನಾವಣೆ ನಡೆಸುವ ಮೂಲಕ ಹೊಸ ಭಾಷ್ಯ ಬರೆಯೋಣ ಎಂದರು.ಹಣ, ಹೆಂಡ ಹಂಚಿ ಚುನಾವಣೆ ಮಾಡಬೇಡ ಎಂದು ನಮ್ಮ ಅಮ್ಮ ನನಗೆ ತಿಳಿ ಹೇಳಿದ್ದರು. ಅವರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ತತ್ವಾದರ್ಶಗಳನ್ನು ಇಟ್ಟುಕೊಂಡು ರಾಜಕೀಯ ಬದುಕು ನಡೆಸಿದ್ದೇನೆ. ಆ ಬಗ್ಗೆ ಮೈಸೂರಿನ ಜನರಿಂದ ರಾಷ್ಟ್ರವ್ಯಾಪಿ ನಾಯಕರಿಗೂ ತಿಳಿದಿದೆ. ಅದು ಹಲವಾರು ದೊಡ್ಡ ದೊಡ್ಡ ವೇದಿಕೆಯಲ್ಲಿ ಚರ್ಚೆ ಆಗಿದೆ. ಅದು ನನ್ನೊಬ್ಬನಿಗೆ ಸಂದ ಗೌರವ ಅಲ್ಲ. ಇಡೀ ಕೃಷ್ಣರಾಜ ಕ್ಷೇತ್ರಕ್ಕೆ ಸಂದ ಗೌರವ ಎಂದರು.
ಈ ಕ್ಷೇತ್ರ ಮಾದರಿಯಾಗಿ ಇರಬೇಕು. ಭ್ರಷ್ಟಾಚಾರ ಮುಕ್ತ ಕ್ಷೇತ್ರ ಎಂಬ ಖ್ಯಾತಿ ಪಡೆಯಬೇಕು. ಅದಕ್ಕಾಗಿ ನಾನು ಮುಂದಿನ ಚುನಾವಣೆಯಲ್ಲಿ ನಾಮಪತ್ರದ ಠೇವಣಿ ಹಣವಾಗಿ ಪ್ರತಿ ಮನೆಯಿಂದ ಹತ್ತು ರೂಪಾಯಿ ಕೊಡಿ ಎಂದು ಮನವಿ ಮಾಡುತ್ತಿದ್ದೇನೆ. ಓಟು ನಿಮ್ಮದೇ, ನೋಟು ನಿಮ್ಮದೇ ಆಗರಲಿ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.