450 total views
ಮೈಸೂರು :-ರಾಜ್ಯದಲ್ಲಿ ತಾಪಮಾನದಲ್ಲಿ ಏರಿಕೆಯಾಗಿದ್ದು, ಇದರಿಂದ ಜಿಲ್ಲೆಯೂ ಹೊರತಾಗಿಲ್ಲ. ನಗರದಲ್ಲಿ ಕಳೆದೊಂದು ವಾರದಿಂದ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸಾರ್ವಜನಿಕರು ಆರೋಗ್ಯ ರಕ್ಷಣೆಗಾಗಿ ತಂಪುಪಾನೀಯ ಮೊದಲಾದ ದ್ರವರೂಪದ ಆಹಾರಗಳಿಗೆ ಮೊರೆ ಹೋಗಿದ್ದಾರೆ.ಇದರಿಂದ, ಪೇಯಗಳಿಗೆ ಬೇಡಿಕೆ ಹೆಚ್ಚಿದೆ.
‘ಬೇಸಿಗೆಯಲ್ಲಿ ತಂಪು ಪಾನೀಯಗಳು ದೇಹದ ಉಷ್ಣತೆಯನ್ನು ನಿಯಂತ್ರಿಸಲು ನೆರವಾಗುತ್ತವೆ. ಹೀಗಾಗಿ ಎಳನೀರಿಗೂ ಬೇಡಿಕೆ ಬಂದಿದೆ. ಕಬ್ಬಿನ ರಸ ಹಾಗೂ ಹಣ್ಣುಗಳ ಪಾನೀಯಗಳಿಗೆ ಬೇಡಿಕೆ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಬೆಲೆಯೂ ಏರಿಕೆಯಾಗಿದೆ. ಆದರೆ, ಹಣ್ಣು ಬೆಳೆಯುವ ರೈತನಿಗೆ ಸಾಮಾನ್ಯ ದರವೇ ದೊರೆಯುತ್ತಿದೆ ಎಂಬ ಕೂಗು ಬೆಳೆಗಾರರಿಂದ ಕೇಳಿಬರುತ್ತಿದೆ.
ಇಲ್ಲಿ ಎಳನೀರು ವ್ಯಾಪಾರ ಹೆಚ್ಚಾಗಿ ಕಾಣಸಿಗುತ್ತಿದೆ. ಮೈಸೂರು ಸುತ್ತಮುತ್ತಲಿನ ಹಳ್ಳಿಗಳ ತೋಟದಿಂದ ಎಳನೀರು ಸಂಗ್ರಹಿಸಿ ಪೇಟೆಯಲ್ಲಿ ತಂದು ಮಾರುತ್ತಾರೆ. ಜನರ ಓಡಾಟ ಹೆಚ್ಚಿರುವ ಪ್ರದೇಶದಲ್ಲಿ ದಿನವೊಂದಕ್ಕೆ ನೂರಾರು ಎಳನೀರುಗಳು ಮಾರಾಟವಾಗುತ್ತಿವೆ.
ಒಂದು ಎಳನೀರಿಗೆ ಸರಾಸರಿ ₹20ರಿಂದ 40ರವರೆಗೆ (ಗಾತ್ರ ಆಧರಿಸಿ) ಇದೆ. ಕಳೆದ ಬಾರಿಗಿಂತ ಸರಾಸರಿ ₹ 5 ಏರಿಕೆಯಾಗಿದೆ. ಎಳನೀರು ಬೆಳೆದವರಿಗೆ ಸೀಸನ್‌ನಲ್ಲಿ ಒಂದು ಕಾಯಿಗೆ ₹15- ₹18 ದೊರೆಯುತ್ತಿದೆ. ಹಿಂದೆ ₹13 ನೀಡಲಾಗುತ್ತಿತ್ತು. ಇವಿಷ್ಟೇ ಅಲ್ಲದೆ ಕಾಯಿ ಕೀಳುವವರಿಗೂ ಒಂದು ಕಾಯಿಗೆ ₹5 ನೀಡುತ್ತಾರೆ. ಇಷ್ಟು ಹಣ ನೀಡಿದರೂ ಕಾಯಿ ಕೀಳುವವರು ದೊರೆಯುತ್ತಿಲ್ಲ ಎಂದು ವ್ಯಾಪಾರಿಗಳು ತಿಳಿಸಿದರು.ಕಬ್ಬು, ಗೋಲಿಸೋಡ ಹಾಗೂ ತಾಜಾ ಹಣ್ಣಿನ ಜ್ಯೂಸ್‌ಗಳಿಗೂ ಜನರು ಮೊರೆ ಹೋಗುತ್ತಿದ್ದಾರೆ. ಒಂದು ಲೋಟ ಕಬ್ಬಿನ ರಸವು ₹20 ರಿಂದ ₹25ಕ್ಕೆ ಮಾರಾಟವಾಗುತ್ತಿದೆ.