368 total views
ಮೈಸೂರು :-ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡಿರುವ ವಿವಿಧ ತಂಡದ ಅಧಿಕಾರಿಗಳು ಪರಸ್ಪರ ಸಹಕಾರ ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ಚುನಾವಣಾ ಯಶಸ್ಸಿಗೆ ಶ್ರಮಿಸಬೇಕೆಂದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬOಧ ಮೈಸೂರು ವಿಶ್ವ ವಿದ್ಯಾನಿಲಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ (ಸನೆಟ್ ಭವನ)ದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮುಕ್ತ, ಪಾರದರ್ಶಕ, ನ್ಯಾಯಸಮ್ಮತ ಚುನಾವಣೆ ಆಯೋಗದ ಗುರಿಯಾಗಿದ್ದು ಚುನಾವಣಾ ಆಯೋಗದ ನಿರ್ದೇಶನದಂತೆ ನಾವೆಲ್ಲ ಕಾರ್ಯ ನಿರ್ವಹಿಸಬೇಕಾಗಿದೆ. ಚುನಾವಣಾ ಕಾರ್ಯನಿರ್ವಹಿಸುವಾಗ ಈಗಾಗಲೇ ರಚಿಸಿರುವ ವಿವಿಧ ತಂಡಗಳಿಗೆ ತರಬೇತಿ ನೀಡಲಾಗಿದ್ದು ಯಾವುದೇ ಗೊಂದಲ ಒತ್ತಡಗಳಿಗೆ ಒಳಗಾಗದೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಹಾಗೂ ಆದೇಶಗಳನ್ನು ತಿಳಿದು ಕಾರ್ಯನಿರ್ವಹಿಸಬೇಕೆಂದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಯಾಗಿರುತ್ತಾರೆ. ಚುನಾವಣಾ ಸಮಯದಲ್ಲಿ ಮತದಾರರು ಯಾವುದೇ ಪ್ರೇರೇಪಣೆ/ಪ್ರಲೋಭನೆಗಳಿಗೆ ಒಳಗಾಗದಂತೆ ಮುಕ್ತವಾಗಿ ಚುನಾವಣೆ ನಡೆಸಬೇಕು. ಚುನಾವಣಾ ಕೆಲಸದಲ್ಲಿ ಎಲ್ಲಾ ಅಧಿಕಾರಿಗಳು ಭಾಗಿಯಾಗಲೇಬೇಕು. ಯಾವುದೇ ರೀತಿಯ ಸಬೂಬು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡಬಾರದು. ಚುನಾವಣಾ ಕರ್ತವ್ಯದಿಂದ ಪಲಾಯನವಾಗುವ ಯಾವುದೇ ಮಾರ್ಗಗಳನ್ನು ಮಾಡಬೇಡಿ ಎಂದರು.
ಚುನಾವಣೆಗಳಲ್ಲಿ ಕೆಲಸ ಮಾಡುವುದು ಹೆಮ್ಮೆಯ ವಿಚಾರ. ನಮ್ಮಲ್ಲಿರುವ 252 ಸೆಕ್ಟರ್‌ಆಫೀಸರ್ ಗಳನ್ನು ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳನ್ನಾಗಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಯಾವುದೇ ಚುನಾವಣೆ ವ್ಯವಸ್ಥಿತವಾಗಿ ನಡೆಯಲು ವಲ್ನರೆಬೆಲಟಿ ಮ್ಯಾಪಿಂಗ್ ಮತ್ತು ಕ್ರಿಟಿಕಲ್ ಪೋಲಿಂಗ್ ಸ್ಟೇಷನ್‌ಗಳ ವಿಶ್ಲೇಷಣೆ ಬಹಳ ಮುಖ್ಯ. 826 ಕ್ರಿಟಿಕಲ್ ಪೋಲಿಂಗ್ ಸ್ಟೇಷನ್ಗಳಿದ್ದು ಅವುಗಳಲ್ಲಿ ಮುಕ್ತವಾಗಿ ಮತದಾನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಪೂರ್ವಸಿದ್ಧತೆಗಳು ಸರಿ ಇಲ್ಲದಿದ್ದಾಗ ಚುನಾವಣೆಗಳು ಒತ್ತಡವೆನಿಸುತ್ತವೆ. ಒತ್ತಡ ಹೆಚ್ಚಿದಾಗ ಕೆಲಸದಲ್ಲಿ ತಪ್ಪುಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸೂಕ್ತ ರೀತಿಯಲ್ಲಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಿ. ಯಾವುದೇ ಗೊಂದಲಗಳಿಗೆ ಒಳಗಾಗದೆ ಅಸೆಂಬ್ಲಿ ಲೆವಲ್ ಮಾಸ್ಟರ್‌ಟೈನರ್ಸ್, ಡಿಸಿಗ್ನಟೆಡ್ ರಿಟರ್ನಿಂಗ್ ಆಫೀಸರ್ಸ್ಗಳಿಂದ ಅಗತ್ಯ ತರಬೇತಿಗಳನ್ನು ಪಡೆದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ. ಬೂತ್ ಲೆವೆಲ್‌ಜಾಗೃತಿ ತಂಡಗಳ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ. ಚುನಾವಣಾ ಕೆಲಸ ಯಶಸ್ವಿಯಾಗಬೇಕಾದರೆ ಅಧಿಕಾರಿಗಳ ಮಧ್ಯೆ ಸಹಕಾರ ಮುಖ್ಯ. ವಿವಿಧ ಇಲಾಖೆಗಳ ಮಧ್ಯ ಹಾಗೂ ಇಲಾಖೆಯ ಕೊನೆಯ ವ್ಯಕ್ತಿಯವರೆಗೂ ಸಹಕಾರವಿರಬೇಕು. ನಿಮ್ಮ ಮೇಲೆ ದೂರು ಬರದಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಮೈಸೂರಿನಲ್ಲಿ ಶಾಂತಿಯುತವಾದ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವಲ್ಲಿ ಕಾರ್ಯೋನ್ಮುಖರಾಗಿ ಎಂದರು.
ನಿಯಮಾನುಸಾರವಾಗಿ ಕಾನೂನಿನ ಅಡಿಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರವನ್ನು ಕೈಗೊಳ್ಳಲು ಅವಕಾಶವಿದೆ. ಆದರೆ ಅನಧಿಕೃತವಾಗಿ ಯಾವುದೇ ರೀತಿಯ ಪ್ರಚಾರಗಳನ್ನು, ಸಭೆಗಳನ್ನು, ಪೋಸ್ಟರ್ಸ್ಗಳನ್ನು ಹಾಗೂ ಗೋಡೆ ಬರಹಗಳನ್ನು ಬರೆಸುವುದು ಅಪರಾಧವಾಗಿದೆ. ಐವತ್ತು ಸಾವಿರಕ್ಕೂ ಮೀರಿ ನಗದನ್ನು ಕೊಂಡೊಯ್ಯಬಾರದು. ಅನಧಿಕೃತವಾಗಿ ಯಾವುದೇ ರೀತಿಯ ವಸ್ತುಗಳು, ಸೀರೆಗಳು ಹಾಗೂ ಹಣವನ್ನು ಹಂಚುವ ಮಾಹಿತಿ ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಿ ಎಂದರು.
ಚುನಾವಣೆ ಸಮಯದಲ್ಲಿ 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಣೆ ಪ್ರಕರಣಗಳು ಕಂಡ ತಕ್ಷಣ ಪ್ರಕರಣ ದಾಖಲಿಸಿ 10 ಲಕ್ಷಕ್ಕಿಂತ ಹೆಚ್ಚು ಹಣ ಸಾಗಣೆ ಕಂಡುಬOದಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿ ಎಂದರು. ಈಗಾಗಲೇ ಆರಂಭವಾಗಿರುವ ಸರ್ಕಾರಿ ಕಾಮಗಾರಿಗಳು ಹಾಗೂ ತುರ್ತುಕಾಮಗಾರಿ ಕೈಗೊಳ್ಳಲು ಯಾವುದೇ ತೊಂದರೆಯಿಲ್ಲ ಆದರೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಹೊಸ ಕಾಮಗಾರಿಗಳನ್ನು ಆರಂಭಿಸುವOತಿಲ್ಲ, ಖಾಸಗಿಯಾಗಿ ಆಯುಧಗಳನ್ನು ಹೊಂದಿರುವವರು ಸಮೀಪದ ಠಾಣೆಗೆ ಆಯುಧಗಳನ್ನು ಒಪ್ಪಿಸಬೇಕೆಂದರು.
ಮಾದರಿ ನೀತಿ ಸಂಹಿತೆ ಬಗೆಗೆ ಸಂಪನ್ಮೂಲ ವ್ಯಕ್ತಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ರೂಪ ಅವರು ತರಬೇತಿ ನೀಡಿದರು..
ಕಾರ್ಯಗಾರದಲ್ಲಿ ಪೊಲೀಸ್ ಆಯುಕ್ತಾರಾದ ರಮೇಶ್ ಬಾನೂತ್, ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮ ಲಾಟ್ಕರ್, ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗಾಯತ್ರಿ ಕೆ.ಎಂ, ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜರಾಮ್, ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಶ್ರೀಧರ್ ಅವರನ್ನು ಒಳಗೊಂಡOತೆ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ತಂಡಗಳಾದ ಎಪ್.ಎಸ್.ಟಿ, ವಿ.ಎಸ್.ಟಿ, ಪಿ.ವಿ.ಟಿ, ಎ.ಇ.ಒ, ಎ.ಟಿ,ಎಂ.ಸಿ.ಸಿ, ಎಂಸಿಎOಸಿ, ಪೊಲೀಸ್, ಅಬಕಾರಿ, ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು ಅಧಿಕಾರಿಗಳು ಉಪಸ್ಥಿತರಿದ್ದರು.