303 total views
ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಕುರಿತು ವಿಭಾಗೀಯ ಮಟ್ಟದ ಕಾರ್ಯಾಗಾರ
ಲಿಂಗಾನುಪಾತದಲ್ಲಿ ಆರೋಗ್ಯದ ಜೊತೆ ಸಾಮಾಜಿಕ ಅಂಶಗಳ ಪ್ರಭಾವವೂ ಹೆಚ್ಚು–ಡಾ. ಪ್ರಸಾದ್
ಮೈಸೂರು :-ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಲು ಸಾಮಾಜಿಕ ಹಾಗೂ ಆರೋಗ್ಯದ ಅಂಶಗಳು ಬಹಳ ಮುಖ್ಯ ಕಾರಣಗಳಾಗಿರುತ್ತವೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪ್ರಸಾದ್ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗಪತ್ತೆ ತಂತ್ರ ಕಾಯ್ದೆ -1994 ಕುರಿತು ನಗರದ ದಿ ಕೋರಂ ಹೋಟೆಲ್ ನಲ್ಲಿ ಎಂಟು ಜಿಲ್ಲೆಯ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಸಲಹಾ ಸಮಿತಿಯ ಸದಸ್ಯರಿಗೆ ಹಮ್ಮಿಕೊಂಡಿದ್ದ ವಿಭಾಗೀಯ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2001-2002 ರ ಸಾಲಿನಲ್ಲಿ ಸಾವಿರ ಪುರುಷರಿಗೆ 964 ಮಹಿಳೆಯರ ಲಿಂಗಾನುಪಾತವಿದ್ದು, 2011ರ ಸಾಲಿಗೆ ಸಾವಿರ ಪುರುಷರಿಗೆ 953 ಮಹಿಳೆಯರಿದ್ದಾರೆ. ಇದರಿಂದ ಲಿಂಗಾನುಪಾತದಲ್ಲಿ ಗಣನೀಯವಾಗಿ ಬದಲಾವಣೆಯಾಗುತ್ತಿರುವುದನ್ನು ಕಾಣಬಹುದಾಗಿದೆ. ಕಳೆದ ಆರು ವರ್ಷಗಳಿಂದ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳು ಲಿಂಗಾನುಪಾತದಲ್ಲಿ ಧನಾತ್ಮಕ ಬದಲಾವಣೆಯನ್ನು ಹೊಂದುತ್ತಿವೆ. ಇದು ಸಂತೋಷದ ವಿಷಯ. ಆದರೆ ಲಿಂಗಾನುಪಾತದಲ್ಲಿ ಹೆಚ್ಚು ವ್ಯತ್ಯಾಸ ಉಂಟಾದಲ್ಲಿ ವರದಕ್ಷಿಣೆ ನೀಡುವ ಹಾಗೆ ವಧುದಕ್ಷಣೆ ನೀಡಬೇಕಾಗುತ್ತದೆ ಅಥವಾ ಪಾಂಡವರoತೆ ಮದುವೆಯಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೆಣ್ಣು ಭ್ರೂಣಹತ್ಯೆಯನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಸಮಾಜದಲ್ಲಿ ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ಮುಂದಿನ ಆರು ವರ್ಷಗಳಲ್ಲಿ ಹೆಣ್ಣು ಮಕ್ಕಳ ವೃದ್ಧಿಯಾಗಲಿ. ಆ ನಿಟ್ಟಿನಲ್ಲಿ ಈ ಕಾರ್ಯಾಗಾರ ಯಶಸ್ವಿಯಾಗಲಿ ಎಂದು ತಿಳಿಸಿದರು.
ಪಿ.ಸಿ.ಪಿ.ಎನ್.ಡಿ.ಟಿ.ನ ಉಪನಿರ್ದೇಶಕರಾದ ಡಾ. ವಿವೇಕ್ ದೊರೈ ಅವರು ಮಾತನಾಡಿ, ಲಿಂಗಾನುಪಾತವನ್ನು ಸರಿದೂಗಿಸಲು, ಹೆಣ್ಣು ಭ್ರೂಣ ಹತ್ಯೆಯನ್ನು ಶೂನ್ಯಕ್ಕಿಳಿಸಲು ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಪಿಸಿ ಅಂಡ್ ಪಿ ಎನ್ ಡಿ ಟಿ ಆಕ್ಟ್ ಜಾರಿಯಾಗುವಂತೆ ಮಾಡಲು ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲಿಂಗಾನುಪಾತದಲ್ಲಿ ಈ ಅಂತರ ಹೀಗೆ ಮುಂದುವರೆದರೆ ಪಾಂಡವರoತೆ ದ್ರೌಪದಿಯನ್ನು ಮದುವೆಯಾಗುವ ವ್ಯವಸ್ಥೆ ಬರುವ ಸಾಧ್ಯತೆ ಇದೆ. ಆದಿಚುಂಚನಗಿರಿಯಲ್ಲಿ 200 ಮಹಿಳೆಯರನ್ನು ಮದುವೆಯಾಗಲು 11750 ಪುರುಷರು ಅರ್ಜಿ ಸಲ್ಲಿಸಿದ್ದ ಘಟನೆಯು ಲಿಂಗಾನುಪಾತದಲ್ಲಿ ಅಂತರ ಹೆಚ್ಚಾದರೆ ಸಮಾಜದಲ್ಲಿ ಎದುರಾಗಬಹುದಾದ ಸಮಸ್ಯೆಗೆ ಹಿಡಿದ ಕೈಗನ್ನಡಿಯಂತಿದೆ ಎಂದು ಅಭಿಪ್ರಾಯಪಟ್ಟರು.
ಪಿ.ಸಿ.ಪಿ.ಎನ್.ಡಿ.ಟಿ. ಯ ವಿಭಾಗಿಯ ಜಂಟಿ ನಿರ್ದೇಶಕರಾದ ರಾಜೇಶ್ವರಿ ಅವರು ಮಾತನಾಡಿ, ಪಿತೃ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಸ್ಥಾನಮಾನದಲ್ಲಿ ತಾರತಮ್ಯ ಉಂಟಾಗುತ್ತಿರುವುದರಿoದ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಫ್ಯಾಮಿಲಿ ಪ್ಲಾನಿಂಗ್ ಅನುಸರಣೆ ಮಾಡುವಲ್ಲಿ ಬಹಳಷ್ಟು ಜನರ ವಿರೋಧವಿದೆ. ಈ ಮನಸ್ಥಿತಿ ಬದಲಾಗಬೇಕು. ಈ ಕುರಿತು ಸಮಾಜದಲ್ಲಿ ಬದಲಾವಣೆ ತರಲು ಹಾಗೂ ಜಾಗೃತಿ ಮೂಡಿಸಲು ಜಿಲ್ಲಾಮಟ್ಟದಲ್ಲಿ ಮೀಟಿಂಗ್‌ಗಳು ಕಟ್ಟುನಿಟ್ಟಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಗಾರದಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಸಲಹಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.