460 total views
ಕಲಬುರಗಿ:-ಜಿಲ್ಲೆಯಾದ್ಯಂತ ಮಂಗಳವಾರ ವಿವಿಧೆಡೆ ರಂಗು, ರಂಗಿನ ಹೋಳಿ ಆಟವನ್ನು ಆರಂಭಿಸಲಾಗಿದೆ. ನಗರದ ಪುಟಾಣಿ ಗಲ್ಲಿಯಲ್ಲಿ ಇಡೀ ನಿವಾಸಿಗಳು ಬೆಳಿಗ್ಗೆಯಿಂದಲೇ ವಿವಿಧ ಬಣ್ಣಗಳನ್ನು ಪರಸ್ಪರರ ಮೇಲೆ ಎರಚಿ ಸಂಭ್ರಮಿಸಿದರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಾಬುರಾವ್ ಜಹಾಗೀರದಾರ್ ಅವರೇ ಸ್ವತ: ಬಣ್ಣದಾಟದ ಹೋಳಿಯಲ್ಲಿ ಪಾಲ್ಗೊಂಡು ಬಣ್ಣದಲ್ಲಿ ಮುಳುಗಿ ಎದ್ದರು. ಯುವಕರು ಹಾಗೂ ಮಹಿಳೆಯರು ಮತ್ತು ಮಕ್ಕಳೂ ಸಹ ಗಲ್ಲಿಯಲ್ಲಿ ಬಣ್ಣದಾಟವಾಡಿ ಸಂಭ್ರಮಿಸಿದರು. ನಗರದ ರೋಟರಿ ಶಾಲೆಯಲ್ಲಿ ಮಹಿಳೆಯರೂ ಸಹ ಬಣ್ಣಗಳನ್ನು ಪರಸ್ಪರರು ಎರಚಿ ಕೇಕೇ ಹಾಕಿ, ಕುಣಿದು ಕುಪ್ಪಳಿಸಿದರು. ಹೊನ್ನಕಿರಣಗಿ ಗ್ರಾಮದಲ್ಲಿಯೂ ಸಹ ರಂಗು, ರಂಗಿನ ಹೋಳಿಯಾಟದ ಸಂಭ್ರಮ ನಿರ್ಮಾಣವಾಗಿತ್ತು.ಖರೀದಿ ಜೋರು: ಆದಾಗ್ಯೂ, ಬುಧವಾರದಂದು ಇಡೀ ಜಿಲ್ಲೆಯಾದ್ಯಂತ ಪೂರ್ಣ ಹೋಳಿ ಬಣ್ಣ ಆಡಲಿದ್ದು, ಅದಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು. ಸೂಪರ್ ಮಾರ್ಕೆಟಿನಲ್ಲಿ ಬಣ್ಣ ಎರಚಲು ಜೀಕಳಿಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸಕ್ಕರೆ ಸರಗಳನ್ನು ಖರೀದಿ ಭರಾಟೆಯಾಗಿತ್ತು. ಇನ್ನು ರಾಜ್ಯದಲ್ಲಿ ಚುನಾವಣೆ ಸಮೀಪ ಇರುವುದರಿಂದ ಬಹುತೇಕ ರಾಜಕಾರಣಿಗಳು ವಾಟ್ಸಪ್, ಸಾಮಾಜಿಕ ಜಾಲತಾಣಗಳ ಮೂಲಕ ಹೋಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡುತ್ತಿದ್ದಾರೆ. ಈ ಬಾರಿ ಕೋವಿಡ್ ನಿಯಂತ್ರಣದಲ್ಲಿ ಇರುವುದರಿಂದ ಹೋಳಿ ಹಬ್ಬದ ಸಂಭ್ರಮದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್