265 total views
ಬೆಂಗಳೂರು, ಫೆ. ೨೨- ಮುಂದಿನ ಚುನಾವಣೆಗೆ ನಾನು ನಿಲ್ಲಲ್ಲ. ನಾನು ಮತ್ತೆ ಈ ಸದನಕ್ಕೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಭಾವುಕರಾಗಿ ಹೇಳಿ ಗದ್ಗದಿತರಾದರು.ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಯಡಿಯೂರಪ್ಪನವರು, ನಾನು ಮತ್ತೆ ಈ ಸದನಕ್ಕೆ ಬರುವುದಿಲ್ಲ. ಈಗಾಗಲೇ ನಾನು ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳಿದ್ದೇನೆ ಎಂದು ಹೇಳುವಾಗ ಗದ್ಗದಿತರಾಗಿ ಭಾವುಕರಾದರು.ನಂತರ ಮಾತು ಮುಂದುವರೆಸಿದ ಅವರು, ವರಿಷ್ಠರು ನನ್ನನ್ನು ಎಂದೂ ಕಡೆಗಣಿಸಿಲ್ಲ. ಯಡಿಯೂರಪ್ಪಗೆ ಎಲ್ಲ ಗೌರವ ಸ್ಥಾನಮಾನ ಕೊಟ್ಟರು. ಪ್ರಧಾನಿ ನರೇಂದ್ರ ಮೋದಿಯವರು, ಪಕ್ಷ ಅವಕಾಶ ಕೊಟ್ಟಿದ್ದಕ್ಕೆ ನಾನು ೪ ಬಾರಿ ಮುಖ್ಯಮಂತ್ರಿಯಾದೆ. ಪಕ್ಷ ನನಗೆ ಕೊಟ್ಟ ಅವಕಾಶ ಯಾರಿಗೂ ಕೊಟ್ಟಿಲ್ಲ ಎಂದರು.
ಚುನಾವಣೆಗೆ ನಿಲ್ಲಲ್ಲ ಎಂದಾಕ್ಷಣ ಯಡಿಯೂರಪ್ಪ ಸುಮ್ಮನೆ ಕೂರಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ನಾವು ಮತ್ತೆ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದರು.ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸುವುದನ್ನು ಆ ಕಡೆ ಕೂತಿರುವ ವಿಪಕ್ಷದವರು ನೋಡುತ್ತಾರೆ. ಕಾಂಗ್ರೆಸ್ ಮತ್ತೆ ವಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ. ನೂರಕ್ಕೆ ನೂರರಷ್ಟು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು.ಯಡಿಯೂರಪ್ಪನವರ ಮಾತಿನ ಮಧ್ಯೆಯೇ ಎದ್ದುನಿಂತ ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ, ಜೆಡಿಎಸ್‌ನ ಶಿವಲಿಂಗೇಗೌಡ ಸೇರಿದಂತೆ ಹಲವು ಸದಸ್ಯರು ನೀವು ಮತ್ತೆ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರು.ಈ ನಡುವೆಯೇ ಮಾತು ಮುಂದುವರೆಸಿದ ಯಡಿಯೂರಪ್ಪನವರು ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ. ಅಲ್ಲಿಯೇ ಸ್ಪರ್ಧೆ ಮಾಡಬೇಕು. ನೀವು ಗೆದ್ದ ಕ್ಷೇತ್ರದಲ್ಲಿ ನಿಲ್ಲಲ್ಲ ಎಂದರೆ ಜನ ಹೇಗೆ ನಂಬುತ್ತಾರೆ. ನೀವು ಗೆದ್ದ ಕ್ಷೇತ್ರದಲ್ಲಿ ನಿಲ್ಲಿ ಎಂದು ಕಿವಿಮಾತು ಹೇಳಿದರು.
ರಾಜ್ಯದ ಬಜೆಟ್ ಎಲ್ಲ ವರ್ಗದ ಜನರನ್ನು ತಲುಪುವ ಬಜೆಟ್ ಆಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡುವ ಪ್ರಯತ್ನಗಳು ಬಜೆಟ್‌ನಲ್ಲಿ ಆಗಿವೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಮೋದಿಯವರು ಇದ್ದಿದ್ದಕ್ಕೆ ದೇಶ ಸದೃಢವಾಗಿದೆ. ಮೋದಿ ವಿಶ್ವಗುರು ಆಗಿದ್ದಾರೆ ಎಂದರು.ರಾಜ್ಯದ ಬಿಜೆಪಿ ಸರ್ಕಾರ ಉತ್ತಮ ಆಡಳಿತ ಕೊಟ್ಟಿದೆ. ನಮ್ಮ ಆಡಳಿತದಲ್ಲಿ ರಾಜ್ಯ ವಿಕಾಸ ಹೊಂದಿದೆ ಎಂದು ಯಡಿಯೂರಪ್ಪ ಹೇಳಿದರು.
ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್