137 total views
ಫೆಬ್ರವರಿ 24 ರಿಂದ ಮೂರು ದಿನಗಳ “ಕಲ್ಯಾಣ ಕರ್ನಾಟಕ ಉತ್ಸವ” ಉತ್ಸವ ಐತಿಹಾಸಿಕವನ್ನಾಗಿಸಲು ಸಮಿತಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಅನಿರುದ್ಧ ಶ್ರವಣ ಪಿ.
ಕಲಬುರಗಿ,ಫೆ.2(ಕ.ವಾ) ಕಲ್ಯಾಣ ಕರ್ನಾಟಕದ ಕಲೆ, ಸಂಸ್ಕೃತಿ ಹಾಗೂ ಸ್ಥಳೀಯ ಪರಂಪರೆ ಅನಾವರಣಗೊಳಿಸುವ ಮೂರು ದಿನಗಳ “ಕಲ್ಯಾಣ ಕರ್ನಾಟಕ ಉತ್ಸವ” ಇದೇ ಫೆಬ್ರವರಿ 24 ರಿಂದ 26ರ ವರೆಗೆ ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಿದ್ದು, ಉತ್ಸವ ಯಶಸ್ಸಿಗೆ ರಚನೆ ಮಾಡಿರುವ ವಿವಿಧ ಸಮಿತಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ತಿಳಿಸಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಉತ್ಸವಕ್ಕಾಗಿ ರಚಿಸಲಾಗಿರುವ ವಿವಿಧ ಸಮಿತಿಗಳೊಂದಿಗೆ ಸಭೆ ನಡೆಸಿದ ಅವರು, ಗುಲಬರ್ಗಾ ವಿ.ವಿ. ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳದಲ್ಲಿಯೇ ಉತ್ಸವ ನಡೆಯಲಿದೆ. 100*60 ಚದುರ ಅಡಿ ಮುಖ್ಯ ವೇದಿಕೆ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ವಿ.ವಿ ಬಯಲು ರಂಗಮಂದಿರದಲ್ಲಿ ಎರಡು ಉಪ ವೇದಿಕೆ ನಿರ್ಮಿಸಿ ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳನ್ನು ಅಲ್ಲಿ ಆಯೋಜಿಸಲಾಗುತ್ತದೆ ಎಂದರು.
ಮೂರು ದಿನಗಳ ಉತ್ಸವ ಆಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದ್ದರಿಂದ ಕಾರ್ಯಕ್ರಮ ಐತಿಹಾಸಿಕವನ್ನಾಗಿಸಬೇಕು. ಇತರೆ ಜಿಲ್ಲೆ, ರಾಜ್ಯಗಳಿಂದ ಬರುವ ಜನಪ್ರತಿನಿಧಿಗಳು, ಗಣ್ಯರು, ಕಲಾವಿದರು, ಬಾಲಿವುಡ್, ಸ್ಯಾಂಡಲ್‍ವುಡ್ ಕಲಾವಿದರ ಊಟ, ವಸತಿ, ಸಾರಿಗೆ ಹೀಗೆ ಪ್ರತಿಯೊಂದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲು ವಿವಿಧ ಸಮಿತಿಗಳನ್ನು ರಚಿಸಿ, ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಅದರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಉತ್ಸವಕ್ಕೆ ಸಂಪೂರ್ಣ ಖರ್ಚು-ವೆಚ್ಚವನ್ನು ಮಂಡಳಿ ಭರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಸುಮಾರು 20 ರಿಂದ 40 ಸಾವಿರ ಆಸನ ವ್ಯವಸ್ಥೆ ಮಾಡಲಾಗುವುದು. ಪ್ರತಿ ದಿನ ಖ್ಯಾತ ನಾಮ ಚಲನಚಿತ್ರ ನಟರು, ಗಾಯಕರು, ಕಲಾವಿದರು ಬರುವುದರಿಂದ ಸುಮಾರು 1 ಲಕ್ಷ ಜನಸಂಖ್ಯೆ ಸೇರುವ ನಿರೀಕ್ಷೆ ಇದೆ. ಹೀಗಾಗಿ ವೇದಿಕೆ ಮತ್ತು ಸುತ್ತಮುತ್ತ ಸ್ಥಳದಲ್ಲಿ ಕೂಡಲೆ ಸ್ವಚ್ಚತಾ ಕಾರ್ಯ ಆರಂಭಿಸಬೇಕು. ಗುಲಬರ್ಗಾ ವಿ.ವಿ. ರಸ್ತೆ ರಿಪೇರಿ ಮಾಡಬೇಕು. ಮೂರು ದಿನ ಉತ್ಸವದಲ್ಲಿ ಕುಡಿಯವ ನೀರಿನ ವ್ಯವಸ್ಥೆ, ಬಯೋ ಟಾಯಲೆಟ್ ವ್ಯವಸ್ಥೆ ಮಾಡಬೇಕು. ನುಡಿ ಸಮ್ಮೇಳನದಲ್ಲಿ ಸ್ವಚ್ಛತಾ ಕಾರ್ಯ ತುಂಬಾ ಅಚ್ಚುಕಟಾಗಿ ನಿರ್ವಹಿಸಿದ್ದು, ಅದನ್ನೇ ಇಲ್ಲಿ ಪುನರಾವರ್ತನೆ ಮಾಡಬೇಕಿದೆ ಎಂದು ಅನಿರುದ್ಧ ಶ್ರವಣ ಪಿ. ಪುನರುಚ್ಚಿಸಿದರು.
ಮೂರು ದಿನಗಳ ಉತ್ಸವಕ್ಕೆ ಜಿಲ್ಲೆಯ ವಿವಿಧ ಕಡೆಯಿಂದ ಸಾರ್ವಜನಿಕರ ಆಗಮಿಸಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ವೇದಿಕೆ ಸುತ್ತಮುತ್ತ ವಾಹನಗಳ ಪಾರ್ಕಿಂಗ್ ವ್ಯಸವ್ಥೆ ಮಾಡಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ತಾತ್ಕಾಲಿಕ ಆರೋಗ್ಯ ಕೇಂದ್ರ ಅಲ್ಲಿ ಸ್ಥಾಪಿಸಬೇಕು ಎಂದರು.
ಉತ್ಸವದ ಆರಂಭದ ದಿನದಂದು ಪ್ರದೇಶದ ಏಳು ಜಿಲ್ಲೆಗಳ ಸಾಂಸ್ಕೃತಿಕ, ಜಾನಪದ ಕಲಾ ತಂಡಗಳು ಮತ್ತು ಕುಂಭಕಳಸದೊಂದಿಗೆ ಭವ್ಯ ಮೆರವಣಿಗೆ ನಗರದ ನಿಗದಿತ ಸ್ಥಳದಿಂದ ವೇದಿಕೆ ಸ್ಥಳದ ವರೆಗೆ ಜಾನಪದ ಶೋಭಾ ಯಾತ್ರೆ ಸಾಗಲಿದೆ ಎಂದರು.
ಉತ್ಸವದ ಅಂಗವಾಗಿ ಶ್ವಾನಗಳ ಪ್ರದರ್ಶನ, ಕೃಷಿ ಮೇಳ, ಮಕ್ಕಳ ಮತ್ತು ಮಹಿಳೆಯರ ಹಬ್ಬ, ಗಾಳಿಪಟ ಉತ್ಸವ, ಚಿತ್ರಕಲೆ ಮತು ಶಿಲ್ಪ ಕಲೆಗಳ ಕಾರ್ಯಾಗಾರ, ಫಲಪುಷ್ಪ ಪ್ರದರ್ಶನ, ಚಿತ್ರ ಸಂತೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕುಸ್ತಿ, ಮಲ್ಲಕಂಬ ಸೇರಿದಂತೆ ಗ್ರಾಮೀಣ ಮತ್ತು ಸಾಹಸ ಕ್ರೀಡೆಗಳು ಹಾಗೂ ಜಲ ಕ್ರೀಡೆಗಳನ್ನು ಆಯೋಜಿಸಬೇಕು. ಕಲಬುರಗಿ ಕೋಟೆ ಸೇರಿದಂತೆ ಸ್ಥಳೀಯ ಪ್ರಮುಖ ಸರ್ಕಾರಿ ಕಚೇರಿಗಳು, ವೃತ್ತಗಳು, ಐತಿಹಾಸಿಕ ಸ್ಮಾರಕಗಳನ್ನು ವಿದ್ಯುದೀಪಗಳಿಂದ ಆಲಂಕೃತಗೊಳಿಸಬೇಕು ಎಂದು ಅನಿರುದ್ಧ ಶ್ರವಣ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ವಸ್ತು ಪ್ರದರ್ಶನ, ಕವಿಗಳೊಂದಿಗೆ ಮುಕ್ತ ಸಂವಾದ ಮೂರು ದಿನಗಳ ಉತ್ಸವದಲ್ಲಿ ವಸ್ತು ಪ್ರದರ್ಶನ ಮಳಿಗೆ ಹಾಕಲಾಗುತ್ತಿದ್ದು, ಸ್ಥಳೀಯ ಕೈಗಾರಿಕೆ, ಆಹಾರ, ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಇಲ್ಲಿ ಅವಕಾಶ ನೀಡಲಾಗುವುದು. ಸ್ಥಳೀಯ ಪ್ರಕಾಶನ ಸಂಸ್ಥೆಗಳು ಹೊರತಂದಿರುವ ಪುಸ್ತಕ ಪ್ರದರ್ಶನಕ್ಕೂ ಇಲ್ಲಿ ಅವಕಾಶವಿದ್ದು, ಸ್ಥಳೀಯ ಖ್ಯಾತ ಬರಹಗಾರರು, ಕವಿಗಳು ಸಾರ್ವಜನಿಕರು, ಓದುಗರೊಂದಿಗೆ ಮುಕ್ತವಾಗಿ ಸಂವಾದ ನಡೆಸುವರು.
ಉತ್ಸವಕ್ಕೆ ಖಾದ್ಯ, ಮತ್ಸ್ಯ ಮೇಳ ಮೆರಗು ಕಲ್ಯಾಣ ಕರ್ನಾಟಕದ ಮಾಮು ಮಾಲ್ ಪುರಿ, ಸುಸಲಾ ಭಜಿ ಸೇರಿದಂತೆ ಸ್ಥಳೀಯ ತಿಂಡಿ ತಿನುಸು ಖಾದ್ಯಗಳ ಜೊತೆಗೆ ಇತರೆ ಪ್ರದೇಶ ಹಾಗೂ ಹೊರ ರಾಜ್ಯದ ಖಾದ್ಯಗಳ ಮೇಳ ಸಹ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಕಲಾ ರಸಿಕರು ವಿವಿಧ ತಿಂಡಿಗಳನ್ನು ಸವಿಯಬಹುದಾಗಿದೆ. ಇದರ ಜೊತೆಗೆ ಮತ್ಸ್ಯ ಮೇಳ ಸಹ ಆಯೋಜಿಸಲಾಗುತ್ತಿದ್ದು, ರಂಗು-ರಂಗೀನ ಮೀನುಗಳ ಪ್ರದರ್ಶನ ನಡೆಯಲಿದೆ.
ಹೆಲಿರೈಡ್ ಪ್ರಮುಖ ಆಕರ್ಷಣೆ ಉತ್ಸವದಲ್ಲಿ ಪ್ರಮುಖವಾಗಿ ಹೆಲಿಕಾಫ್ಟರ್ ರೈಡ್ ಸಾರ್ವಜನಿಕರ ಆಕರ್ಷಣೆಯಾಗಲಿದೆ. ಹೆಲಿಪ್ಯಾಡ್ ನಿರ್ಮಾಣ ಮತ್ತು ಹೆಲಿರೈಡ್‍ಗೆ ಸಿದ್ಧತೆ ಮಾಡಿಕೊಳ್ಳುವಂತೆ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ಚರ್ಚಿಸುವಂತೆ ತಿಳಿಸಿದರು. ಜೊತೆಗೆ ಮ್ಯಾರಥಾನ್, ಸೈಕ್ಲಥಾನ್, ಹಾಟ ಏರ್ ಬಲೂನ್‍ಗಳ ಹಾರಾಟ ಸಹ ಆಯೋಜಿಸಲಾಗುವುದು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ್, ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ, ಮಹಾನಗರ ಪಾಲಿಯ ಆಯುಕ್ತ ಪಾಟೀಲ ಭುವನೇಶ ದೇವಿದಾಸ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಎ.ಸಿ.ಪಿ. ದೀಪನ್ ಎಂ.ಎನ್., ಕೆ.ಕೆ.ಆರ್.ಡಿ.ಬಿ ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಜಗನ್ನಾಥ ಹಲಿಂಗೆ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರಾಗಿರುವ ಅಧಿಕಾರಿಗಳು ಭಾಗವಹಿಸಿದ್ದರು. ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್