84 total views
ನೀ ಯಾಕ ಮನಿ ಮಾಡ್ದಿ ?
ಹೆಂಗೋ ಆರಾಮಿದ್ದೆ ನನ್ ಪಾಡಿಗೆ ನಾ
ಗೀಚ್ಕೊಂಡು ರಾಚ್ಕೊಂಡು ನಾಲ್ಕ ಮಂದಿ
ನಡುಽಕ್ಕ ನಾನೂ ಬರೆಯುವ್ಹಂಗ,
ಲೇಖನಿ ಹಿಡ್ದು ಎದಿಯುಬ್ಸಿ ಮೆರಕೋತ ||
ತೆಲಿ ಬುಡ ಇಲ್ದ ತೆಲಿಗೆ ಬಲ ನಿಡ್ಕೋತ
ನಾಲ್ಕ ಪದದಾಗ ಸಾಕ್ ನಾಲ್ಕ್ ಸಾಲ್ ಹಾಡ್ಕೋತ
ನನ್ ಛಾಪಿನ ತೋಪದಾಗ ಗುಂಡ್ ಹಾರ್ಸಿ
ಮೊಂಡತನದ ಬಂಡಾಟದಾಗ ಇದ್ದೆ ಮೆರಕೋತ ||
ಅದ್ಹೆಂಗ ಹೊಕ್ಯೋ ನೀ ಮಿಕ್ಕಿ
ಹಾರೋ ಹಕ್ಕಿ ಬಾನ ತೆಕ್ಕಿ ತೋರಿದ್ಹಂಗ
ಉಕ್ಕಿ ಹರಿಯೋ ಭಾವಕ್ಕ ತೊರಿ ಜಾರಿ
ಕಡಲಿಗೆ ಹಾರಿದ್ಹಂಗ ಹಾರಿ ನೀ ಕುಂತಿ ||
ನಿದ್ದಿ ನುಂಗಿದ ರಾತ್ರಿನ ಗದ್ದಿ ಮಾಡ್ದಿ
ಹದ ಮಾಡೋಹಂಗ ಪದ ಹಾಡ್ದಿ
ಅದ್ಯಾವ ಗುಂಗನ್ಯಾಗ ಕದ ತೆರದ್ನೋ ಏನೋ
ನೀ ಬಂದ್ ಮನದಾಗ ಮನಿ ಮಾಡ್ದಿ ||
ನಾ ಏನ್ ಬರುದ್ರೂ ಕಮ್ಮಿ,
ಅನ್ನೋಹಂಗ ಮಾಡಿ ಇನ್ನೀಟು ಇನ್ನೀಟು
ಅನಕೋತ ಬರಿಯೋಹಂಗ ಮಾಡ್ದಿ
ನಿನ್ನ ಒಂದು ಕವನಕ್ಕ ನನ್ನ ನೂರೂ
ಸಾಲಂಗಿಲ್ಲ, ನೀ ಯಾಕ ಮನಿ ಮಾಡ್ದಿ ?!
ನಿತ್ಯ ನಿನ್ನ ಜಪ ಮಾಡೋಹಂಗ ಕಾಡ್ದಿ ?! ||
✏ಲಿಂಬಿ
ಲಿಂಗೇಶ್ ಎಚ್ ಬಿದರಕುಂದಿ
ದಾವಣಗೆರೆ