22 total views
ಮೈಸೂರು:-ಮೂರು ತಿಂಗಳೊಳಗೆ ಚಿರತೆ ದಾಳಿಯಿಂದ ನಾಲ್ವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ಕೈಗೊಂಡಿರುವ ಟಿ.ನರಸೀಪುರ ತಾಲೂಕಿನ 21 ಗ್ರಾಮಗಳಲ್ಲಿ ಚಿರತೆಗಳನ್ನು ಬಲೆಗೆ ಬೀಳಿಸಲು ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.ರಾತ್ರಿ ಸಮಯದಲ್ಲಿ ಗ್ರಾಮಸ್ಥರು ಹೊರಗೆ ಬಾರದಂತೆ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ ಮಾಲತಿ ಪ್ರಿಯಾ ತಿಳಿಸಿದ್ದಾರೆ.ಚಿರತೆ ದಾಳಿಯಿಂದ ಸಾವು ಸಂಭವಿಸಿದ ಕನ್ನಾಯಕನಹಳ್ಳಿ, ಹೊರಳಳ್ಳಿ, ಎಸ್ ಕೆಬ್ಬೆಹುಂಡಿ ಸೇರಿದಂತೆ ಜಗಜೀವನಗ್ರಾಮ, ಚಿಕ್ಕ ಲಕ್ಷ್ಮೀಪುರ, ತಮ್ಮಡಿಪುರ, ನರಗ್ಯಾತನಹಳ್ಳಿ, ಸೋಸಲೆ, ಕೆಬ್ಬೆ, ಕೊಳತ್ತೂರು, ಸೀಗವಾಡಿಪುರ, ಕೆಂಪಾಪುರ, ರಾಮೇಗೌಡ, ಕೆಂಪೆಹುಂಡಿ, ಕೋನಗಳ್ಳಿ, ಚಿದ್ರವಳ್ಳಿ, ಮುದುಕನಾಪುರ, ಹಾಲವಾರ, ದೊಡ್ಡಬಾಗಿಲು, ಹಸುವತ್ತಿ, ಚಿಟಗಯ್ಯನ ಕೊಪ್ಪಲು ಗ್ರಾಮಗಳಲ್ಲಿ ಕರ್ಫ್ಯೂ ವಿಧಿಸಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು. ಬಂಡೀಪುರದ ವಿಶೇಷ ಹುಲಿ ರಕ್ಷಣಾ ಪಡೆ ಸೇರಿದಂತೆ 90 ಸಿಬ್ಬಂದಿಗಳೊಂದಿಗೆ 13 ವಿಶೇಷ ತಂಡಗಳು ಚಿರತೆಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿವೆ. 74 ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 18 ಕೇಜ್‌ಗಳನ್ನು ಇರಿಸಲಾಗಿದೆ ಎಂದು ಮಾಲತಿ ಪ್ರಿಯಾ ಹೇಳಿದರು. ಶನಿವಾರ ರಾತ್ರಿ 11 ವರ್ಷದ ಜಯಂತ್ ಹತ್ಯೆಗೀಡಾದ ಹೊರಲಹಳ್ಳಿಯಲ್ಲಿ 20 ಟ್ರ್ಯಾಪ್ ಕ್ಯಾಮೆರಾಗಳು, ದನದ ಕೊಟ್ಟಿಗೆಯನ್ನು ಹೋಲುವ ಪಂಜರ ಮತ್ತು ಇನ್ನೊಂದು ಪಂಜರವನ್ನು ಅಳವಡಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ತಿಳಿಸಿದ್ದಾರೆ