22 total views
ಕಲಬುರಗಿ -ರಾಜ್ಯದ ಗಡಿ ಭಾಗದ ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರು, ಶಾಲಾ ಕೊಠಡಿ ನಿರ್ಮಾಣ, ಗ್ರಂಥಾಲಯ, ಶಿಕ್ಷಕರ ನೇಮಕ ಸೇರಿದಂತೆ ಸಮಗ್ರ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು. ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಪ್ರಾಧಿಕಾರದ ಅನುದಾನದಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಗಡಿ ಗ್ರಾಮಗಳನ್ನು ನಿರ್ಲಕ್ಷಿಸಬಾರದು. ಗಡಿ ಜನರಲ್ಲಿ ಅನಾಥರು ಎಂಬ ಭಾವನೆ ಮೂಡದಂತೆ ಅಧಿಕಾರಿ ವರ್ಗ ಕಾರ್ಯನಿರ್ವಹಿಸಬೇಕು ಎಂದರು. ಕಲಬುರಗಿ ಜಿಲ್ಲೆಯ ಗಡಿಯಲ್ಲಿ ಮಹಾರಾಷ್ಟ್ರ, ತೆಲಂಗಾಣಾ ರಾಜ್ಯಗಳಿದ್ದು, ಗಡಿಯಲ್ಲಿ ಅನ್ಯ ಭಾಷಿಕರ ಪ್ರಭಾವದಿಂದ ಕೆಲವೊಮ್ಮೆ ನಮ್ಮ ಹಳ್ಳಿಗಳ ಹೆಸರು ತಪ್ಪಾಗಿ ಬರೆದು ಮುಂದೇ ಅದನ್ನೆ ರೂಢಿಗತ ಮಾಡುವ ಸಾಧ್ಯತೆ ಇರುತ್ತದೆ. ಇದನ್ನು ಸ್ಥಳೀಯ ತಹಶೀಲ್ದಾರರು ನಿಗಾ ವಹಿಸಿ ತಪ್ಪಾಗದಂತೆ ನೋಡಿಕೊಳ್ಳಬೇಕು. ಗಡಿಯಲ್ಲಿನ ಆರೋಗ್ಯ ಕೇಂದ್ರ ಬಲವರ್ಧನೆ, ಎಸ್.ಸಿ.-ಎಸ್.ಟಿ. ವಸತಿ ನಿಲಯಗಳಿಗೆ ಮೂಲಸೌಕರ್ಯ ಪೂರೈಕೆಗೆ ಹೆಚ್ಚಿನ ಗಮನ ಹರಿಸಬೇಕು. ನರೇಗಾ ಯೋಜನೆಯಡಿ ಶಾಲಾ ಕಂಪೌಂಡ ನಿರ್ಮಿಸಬೇಕು ಮತ್ತು ಶಾಲೆ ಆಸ್ತಿ ವಹಿ ದಾಖಲೆ ನಿರ್ವಹಿಸಬೇಕು. ಇನ್ನೂ ಪ್ರಾಧಿಕಾರದಿಂದ ಬಿಡುಗಡೆಯಾದ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ಜಿಲ್ಲೆಯಿಂದ ಬಂದಿಲ್ಲ, ಕೂಡಲೆ ಕಳುಹಿಸಬೇಕು ಎಂದರು. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಡಿಯಲ್ಲಿಯೇ ಆಯೋಜಿಸಬೇಕು. ಕನ್ನಡದ ಶ್ರೇಷ್ಠ ಕವಿಗಳ, ಜ್ಞಾನಪೀಠ ಪುರಸ್ಕೃತರ ಕುರಿತು ಇಂದಿನ ಪಳಿಗೆಗೆ ಪರಿಚಯಿಸುವ ಕೆಲಸ ಗಡಿಯಲ್ಲಿ ನಿರಂತರ ಸಾಗಬೇಕು. ಕೌಶಲ್ಯಭಿವೃದ್ಧಿ ಇಲಾಖೆಯಿಂದ ವೃತ್ತಿಪರ ಕೌಶಲ್ಯ ತರಬೇತಿ ಅಲ್ಲಿನ ಯುವಕ-ಯುವತಿಯರಿಗೆ ಪ್ರಥಮಾದ್ಯತೆ ಮೇಲೆ ನೀಡಬೇಕು ಎಂದರು. ದೇಶ ಭಕ್ತಿ-ನಾಡು ಪ್ರೀತಿ ಪರಿಕಲ್ಪನೆಯಲ್ಲಿ ಗಡಿ ಪ್ರದೇಶದಲ್ಲಿ ಕನ್ನಡ ಬೆಳವಣಿಗೆಗೆ ಶ್ರಮಿಸಿದ ಕವಿಗಳು, ಸಂತರು, ದಾರ್ಶನಿಕರು, ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟಗಾರ ನೆನಪು ಚಿರಸ್ಥಾಯಿಯಾಗಿರಿಸಲು ಸ್ಮಾರಕ ನಿರ್ಮಿಸುವ ಯೋಚನೆ ಪ್ರಾಧಿಕಾರರ ಹೊಮದಿಎ. ಈ ಬಗ್ಗೆ ಮಹಾತ್ಮರ ಮಾಹಿತಿ ನೀಡಬೇಕು ಎಂದ ಅವರು, ರಾಜ್ಯ ಪ್ರವೇಶದ ಸ್ಥಳದಲ್ಲಿ ಕನ್ನಡ ನಾನ್ನುಡಿವುಳ್ಳ ಸ್ವಾಗತ ಕಮಾನು ನಿರ್ಮಿಸಬೇಕು ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು. ಶಾಲಾ ಕೊಠಡಿ ಮತ್ತು ಖಾಲಿ ಶಿಕ್ಷಕರ ವರದಿ ಸಲ್ಲಿಸಿ: ಗಡಿ ಗ್ರಾಮಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿಪಡಿಸುವ ಮಹಾ ಅಭಿಲಾಷೆ ಪ್ರಾಧಿಕಾರ ಹೊಂದಿದೆ. ಹೀಗಾಗಿ ಜಿಲ್ಲೆಯ ಗಡಿ ಭಾಗದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಶಿಕ್ಷಕರ ಭರ್ತಿ ಮಾಡಲು ಖಾಲಿ ಹುದ್ದೆಗಳ ಕುರಿತು ಜಿಲ್ಲಾಧಿಕಾರಿಗಳ ಮೂಲಕ ವರದಿ ಸಲ್ಲಿಸಬೇಕು ಎಂದು ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ ಅವರಿಗೆ ಡಾ.ಸಿ.ಸೋಮಶೇಖರ ನಿರ್ದೇಶನ ನೀಡಿದರು. ಕನ್ನಡದ ಕಂಪು ಪಸರಿಸುವ ಆಂದೋಲನ ಕೈಗೊಳ್ಳಿ: ಜಿಲ್ಲಾ ಮಟ್ಟದ ಅಧಿಕಾರಿಗಳು ತಿಂಗಳಲ್ಲಿ ಒಮ್ಮೆಯಾದರು ಗಡಿ ಭಾಗದ ಗ್ರಾಮಕ್ಕೆ ಭೇಟಿ ಕೊಟ್ಟು ಅಲ್ಲಿನ ಜನರ ಅಹವಾಲು ಆಲಿಸಬೇಕು. ಜೊತೆಗೆ ಸ್ಥಳೀಯ ಸ್ತ್ರೀ ಶಕ್ತಿ ಗುಂಪುಗಳನ್ನೇ ಕನ್ನಡದ ರಾಯಭಾರಿಯನ್ನಾಗಿ ಮಾಡಿಕೊಂಡು ಗಡಿಯಲ್ಲಿ ಕನ್ನಡ ಕಂಪು ಪಸರಿಸಲು ಆಂದೋಲನ ನೃಪತುಂಗನ ನಾಡಿನಿಂದಲೇ ಶುರುವಾಗಲಿ. ಎಲ್ಲವು ಸರ್ಕಾರವೇ ಮಾಡಲಿ ಎಂದರೆ ಆಗದು. ಸ್ವಯಂ ಪ್ರೇರಣೆಯಿಂದ ನಾವೇ ಮುಂದಾಗಬೇಕಿದೆ. ಇದರಲ್ಲಿ ನಿವೃತ್ತ ಶಿಕ್ಷಕರ ಸೇವೆ ಪಡೆಯಿರಿ ಎಂದು ಡಾ.ಸಿ.ಸೋಮಶೇಖರ ಅಧಿಕಾರಿಗಳಿಗೆ ಸಲಹೆ ನೀಡಿದರು. ಅಕ್ಕಲಕೋಟೆಯಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಭವನ, ಪ್ರಸ್ತಾವನೆ ಸಲ್ಲಿಸಿ ಸೋಲಾಪೂರ ಜಿಲ್ಲೆಯ ಅಕ್ಕಲೋಟೆಯಲ್ಲಿ ಆದರ್ಶ ಕನ್ನಡ ಬಳಗದವರು ಡಾ. ಜಯದೇವಿ ತಾಯಿ ಲಿಗಾಡೆ ಕನ್ನಡ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಜಮೀನು ನೀಡಲು ಮುಂದೆ ಬಂದಿದ್ದಾರೆ. ಸದರಿ ಸಂಸ್ಥೆಯ ಮನವಿಯನ್ನು ಪ್ರಾಧಿಕಾರ ಪುರಸ್ಕರಿಸಿದ್ದು, ಅಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣದ ಜವಾಬ್ದಾರಿ ಕಲಬುರಗಿ ಜಿಲ್ಲಾಡಳಿತಕ್ಕೆ ವಹಿಸಲಾಗುತ್ತದೆ. ಈ ಕುರಿತು ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ ಅದಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಡಾ.ಸಿ.ಸೋಮಶೇಖರ ಡಿ.ಸಿ. ಯಶವಂತ ವಿ. ಗುರುಕರ್ ಅವರಿಗೆ ತಿಳಿಸಿದರು. ಡಿ.ಸಿ. ಯಶವಂತ ವಿ.ಗುರುಕರ್ ಮಾತನಾಡಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ.ಸಿ.ಸೋಮಶೇಕರ ಅವರು, ಕನ್ನಡ ಪ್ರೇಮಿ ಜೊತೆಗೆ ನಿವೃತ್ತ ಐ.ಎ.ಎಸ್. ಅಧಿಕಾರಿಯಾಗಿದ್ದಾರೆ. ಅವರ ಸಲಹೆ-ಸೂಚನೆಗಳನು ಕಡ್ಡಾಯವಾಗಿ ಪಾಲಿಸುವ ಮೂಲಕ ಗಡಿ ಪ್ರದೇಶಗಳ ಅಭಿವೃದ್ಧಿಗೆ ಅಧಿಕಾರಿಗಳು ಕೈಜೋಡಿಸಬೇಕು. ಪ್ರಾಧಿಕಾರದಿಂದ ಅನುದಾನ ಪಡೆದ ಸಂಘ-ಸಂಸ್ಥೆಗಳಿಂದ ಕೂಡಲೆ ಹಣ ಬಳಕೆ ಪ್ರಮಾಣ ಪತ್ರ ಪಡೆಯಲು ಶೀಘ್ರದಲ್ಲಿ ಸಂಘ-ಸಂಸ್ಥೆಗಳ ಸಭೆ ಕರೆಯುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕ ದತ್ತಪ್ಪ ಸಾಗನೂರ ಅವರಿಗೆ ಸೂಚಿಸಿದರು. ಸಭೆಯಲ್ಲಿ ಸಹಾಯಕ ಆಯುಕ್ತರಾದ ಮಮತಾ ಕುಮಾರಿ, ಕಾರ್ತಿಕ ರೆಡ್ಡಿ ಸೇರಿದಂತೆ ಇನ್ನಿತರ ಜಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ವರದಿಗಾರರು – ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್