156 total views
ಕಲಬುರಗಿ: ಕಲಬುರಗಿ ಹಾಗೂ ಬೀದರ ಜಿಲ್ಲೆಯಾದ್ಯಂತ 2 ಲಕ್ಷ ಹೆಕ್ಟೇರ್ ತೊಗರಿ ಬೆಳೆ ನೆಟೆರೋಗದಿಂದ ವ್ಯಾಪಕ ಹಾನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಇಂದು ಸಂಜೆ ಮಹತ್ವದ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ದೇವಲಗಾಣಗಾಪುರದಲ್ಲಿ ಇಂದು ನಡೆಯಲಿರುವ ಹಿರಿಯ ಹೋರಾಟಗಾರ ಹಾಗೂ ವಿಧಾನ ಪರಿಷತ್ ಮಾಜಿ ಸಚೇತಕ ವಿಠ್ಠಲ್ ಹೇರೂರ್ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆಗಾಗಿ ಗಾಣಗಾಪುರಕ್ಕೆ ತೆರಳುವ ಮುನ್ನ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ತೊಗರಿ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೇಗೆ ಪರಿಹಾರ ನೀಡಬೇಕು ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು. ಕಾಶಿ ವಿಶ್ಚನಾಥನ ಮಾದರಿಯಲ್ಲಿ ಗಾಣಗಾಪೂರ ಅಭಿವೃದ್ಧಿ, 67 ಕೋಟಿ ರೂ. ಡಿ.ಪಿ.ಆರ್ ಸಿದ್ಧ: ಕಾಶಿ ವಿಶ್ಚನಾಥ ಮತ್ತು ಉಜ್ಜೈನಿಯ ಕಾಳ ಹಸ್ತಿ ಮಾದರಿಯಲ್ಲಿ ಕಲಬುರಗಿಯ ದತ್ತಾತ್ರೇಯ ಸುಕ್ಷೇತ್ರವಾದ ಗಾಣಗಾಪೂರ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೆ 5 ಕೋಟಿ ರೂ. ನೀಡಲಾಗಿದೆ. ಜಿಲ್ಲಾಡಳಿತ ದತ್ತನ ಕ್ಷೇತ್ರದ ಅಭಿವೃದ್ಧಿಗೆ 67 ಕೋಟಿ ರೂ. ವೆಚ್ಚದ ಡಿ.ಪಿ.ಆರ್. ಸಿದ್ದಪಡಿಸಿದ್ದು, ಬರುವ ಆಯವ್ಯಯದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸಿ.ಎಂ. ಬಸವರಾಜ ಬೊಮ್ಮಾಯಿ ತಿಳಿಸಿದರು. ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಎಂ.ಎಲ್.ಸಿ ಗಳಾದ ಶಶೀಲ್ ಜಿ ನಮೋಶಿ, ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಸವರಾಜ ಪಾಟೀಲ್ ಇಂಗಿನಶೆಟ್ಟಿ, ಇದ್ದರು. ಆರ್.ಡಿ.ಪಾಟೀಲ್ ಹೇಳಿಕೆ: ತನಿಖೆ ಬಳಿಕ ಕ್ರಮ ಪಿ.ಎಸ್.ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಆರ್. ಡಿ. ಪಾಟೀಲ್ ತನಿಖಾಧಿಕಾರಿ ವಿರುದ್ದ ಹಣ ಬೇಡಿಕೆ ಇಟ್ಟ ವಿಡಿಯೋ ಪ್ರಸಾರಗೊಂಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಆರೋಪಿ ಏನು ಹೇಳಿದ್ದಾನೆ ಎಂಬುದು ಪೊಲೀಸ್ತ ನಿಖಾಧಿ ಕಾರಿಗಳಿಗೆ ಗೊತ್ತಿರುತ್ತದೆ. ಆದರೂ ವಿಡಿಯೋ ಹೇಳಿಕೆ ಕುರಿತು ತನಿಖೆಗೆ ಆದೇಶಿಸಲಾಗುವುದು. ತನಿಖೆ ಬಳಿಕ ಅಧಿಕಾರಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ನಿಜ ಎಂಬುದು ಸಾಬೀತಾದರೆ ಆ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು. ಸದ್ಯಕ್ಕಂತುವ ಕೋರ್ಟ್ ಆದೇಶದ ಮೂಲಕ ತನಿಖೆ ನಡೆಯುತ್ತಿದೆ. ಮೊದಲು ಆರೋಪಿಯ ಆಡಿಯೋದಲ್ಲಿ ಏನಿದೆ ಎಂಬುದನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್