142 total views
ಮೈಸೂರು:-ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ಮೈಸೂರು ಜಿಲ್ಲಾ ಪತ್ರಕರ್ತ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಕೊಲಿಜಿಯಂ ನಲ್ಲಿ ಸರ್ಕಾರದ ಪ್ರತಿನಿಧಿ ಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿರುವುದು ನ್ಯಾಯಾಂಗವನ್ನು ತನ್ನ ಸ್ವಾಧೀನಕ್ಕೆ ಪಡೆಯುವ ಉದ್ದೇಶ.ಇದು ಯಾವುದೇ ಕಾರಣಕ್ಕೂ ಆಗಬಾರದು ಎಂದು ಹೇಳಿದರು.
ಒಬ್ಬ ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರ ಕೊಲಿಜಿಯಂಗೆ ಬಿಟ್ಟರೆ ಹೊರಗಿನವರಿಗೆ ಗೊತ್ತಿರುವುದಿಲ್ಲ. ನ್ಯಾಯಾಧೀಶರಾಗಿ ನೇಮಕವಾಗುವ ವಕೀಲರು ನ್ಯಾಯಾಲಯದಲ್ಲಿ ಯಾವ ರೀತಿ ಪ್ರಕರಣಗಳನ್ನು ಮಾಡಿದ್ದಾರೆ. ಇವರ ಅನುಭವ ಏನು? ಮತ್ತು ಇವರು ನ್ಯಾಧೀಶರ ಹುದ್ದೆಗೆ ಅರ್ಹರೆ ಎಂಬುದು ಕೊಲಿಜಿಯಂ ಗೆ ಮಾತ್ರ ಗೊತ್ತಿರುತ್ತದೆ. ಹಾಗಾಗಿ ಸರ್ಕಾರದ ಪ್ರತಿನಿಧಿಗಳ ಹಸ್ತಕ್ಷೇಪ ಸರಿಯಲ್ಲ ಎಂದು ಅವರು ಅಭಿಪ್ರಾಯಿಸಿದರು.
ಒಂದು ಸಚಿವ ಸಂಪುಟಕ್ಕೆ ಯಾರನ್ನು ನೇಮಕ ಮಾಡಿಕೊಳ್ಳಬೇಕು ಬೇಡ ಎಂಬ ಅಧಿಕಾರ ಮುಖ್ಯಮಂತ್ರಿಗೆ ಇರುತ್ತದೆ. ಅದೇ ರೀತಿ ಯಾರನ್ನು ಹೈಕೋಟ್೯ ಸುಪ್ರೀಂಕೋಟ್೯ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಕೊಲಿಜಿಯಂ ವಿವೇಚನೆಗೆ ಬಿಟ್ಟಿದ್ದು, ಕೊಲಿಜಿಯಂ ನಲ್ಲಿ ಮುಖ್ಯ ನ್ಯಾಯಾಧೀಶರ ತೀರ್ಮಾನವೇ ಅಂತಿಮವಾಗುವುದಿಲ್ಲ. ಅಲ್ಲಿಯೂ ಸಹ ಮೂರು ಪೀಠ ಐವರ ಪೀಠ ಎಂಬುದಿರುತ್ತದೆ. ಅವರ ಶಿಫಾರಸಿನ ಮೇಲೆ ನೇಮಕ ಮಾಡುವುದು. ಹಾಗಾಗಿ ಸರ್ಕಾರದ ಮಧ್ಯಪ್ರವೇಶ ಇರಬಾರದು ಎಂದು ಅವರು ಹೇಳಿದರು.
ಶಾಸಕಾಂಗ ಈಗಾಗಲೇ ಕಾರ್ಯಾಂಗದ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಅದೇ ರೀತಿ ನ್ಯಾಯಾಂಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಹಿಂದೆ ಇದ್ದಂತಹ ಸರ್ಕಾರಗಳಲ್ಲಿ ಇಂತಹ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಮಧ್ಯ. ಪ್ರವೇಶ ಮಾಡಲು ಹೊರಟಿರುವುದು ಅತ್ಯಂತ ದುರಂತ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನಕಾರ್ಯದರ್ಶಿ ಸುಬ್ರಮಣ್ಯ, ಜಿಲ್ಲಾ ಉಪಾಧ್ಯಕ್ಷ ಧರ್ಮಾಪುರ ನಾರಾಯಣ, ನಗರ ಕಾರ್ಯದರ್ಶಿ ರಂಗಸ್ವಾಮಿ ಉಪಸ್ಥಿತರಿದ್ದರು.