10 total views
ಮೈಸೂರು:-ಕನ್ನಡವೆಂದರೆ ಕನಕ, ಕನಕನೆಂದರೆ ಕನ್ನಡವೆನ್ನುಷ್ಟರ ಮಟ್ಟಿಗೆ ಕನ್ನಡಕ್ಕೂ ಕನಕನಿಗೂ ಅವಿನಾಭಾವ ಸಂಬಂಧವಿದ್ದು, ಸಾಮಾನ್ಯವಾಗಿ ಕನ್ನಡ ರಾಜ್ಯೋತ್ಸವ ತಿಂಗಳಲ್ಲೇ ಕನ್ನಡ ನಾಡು ಕಂಡ ಸಂತ ಶ್ರೇಷ್ಠ ಕನಕದಾಸ ಜಯಂತಿಯನ್ನೂ ನಾಡು ಆಚರಿಸುವುದರಿಂದ ಕನ್ನಡ ರಾಜ್ಯೋತ್ಸವವೆಂಬುದು ಕನಕೋತ್ಸವವೂ ಹೌದೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.ಬನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕಾಲೇಜಿನ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ವಿಭಾಗದ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಮತ್ತು 535ನೇ ಕನಕದಾಸರ ಜಯಂತ್ಯೋತ್ಸವ ವನ್ನು ತಾಯಿ ಭುವನೇಶ್ವರಿ ಹಾಗೂ ಕನಕದಾಸರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಮೋಹನ ತರಂಗಿಣಿ,ನಳಚರಿತ್ರೆ, ರಾಮಧಾನ್ಯಚರಿತೆ, ಹರಿಭಕ್ತಸಾರ, ನೃಸಿಂಹ ಸ್ತವ ದಂತಹ ಶ್ರೇಷ್ಠ ಪಂಚ ಮಹಾಕಾವ್ಯಗಳು ಸೇರಿದಂತೆ ಸಾವಿರಾರು ಕೀರ್ತನೆಗಳನ್ನು, ಸುಳಾದಿಗಳನ್ನು, ಮುಂಡಿಗೆಗಳನ್ನು ಮಾನವೀಯ ನೆಲೆಯಲ್ಲಿ ನಾಡಿಗೆ ನೀಡಿ ಕನ್ನಡವನ್ನು ಶ್ರೀಮಂತ ಗೊಳಿಸಿದವರು ಕನಕದಾಸರೆಂದರು.
ಕನಕದಾಸರಂತಹ ಸಹಸ್ರ ಸಹಸ್ರ ಶ್ರೇಷ್ಠ ಮಹನೀಯರನ್ನು ಒಳಗೊಂಡಿರುವ ಕನ್ನಡ ಭಾಷೆಗೆ ಅದರದೇ ಆದ ಒಂದು ಕನಕ ಚರಿತ್ರೆ ಇದೆ. ಈ ಸುವರ್ಣ ಚರಿತ್ರೆ ಇಂದು, ನಿನ್ನೆ, ಮೊನ್ನೆಯಲ್ಲ.ಇದಕ್ಕೆ ಐದು ಸಾವಿರಕ್ಕೂ ಮಿಗಿಲಾದ ಇತಿಹಾಸವುಂಟು. ಮಾತನಾಡುವ ಜಗತ್ತಿನೊಡನೆ ನಮ್ಮ ಕನ್ನಡ ಭಾಷೆಯೂ ಹುಟ್ಟಿತೆಂಬ ಮಾತೂ ಇದೆ. ಇಂಥ ಕನ್ನಡ ಭಾಷಿಗರು ನಾವೆಂಬುದಕ್ಕೆ ಪ್ರತಿಯೊಬ್ಬ ಕನ್ನಡಿಗರೂ ಹೆಮ್ಮೆ ಪಡಬೇಕು. ಕನ್ನಡದಲ್ಲಿ ಏನಿಲ್ಲ ಎನ್ನುವಂತಿಲ್ಲ. ಎಲ್ಲವೂ ಇದೆ. ಇದನ್ನು ಪಡೆದುಕೊಳ್ಳುವ ತಾಕತ್ತು ಕನ್ನಡದ ಮಣ್ಣಿನ ಮಕ್ಕಳಿಗಿರಬೇಕಷ್ಟೇ. ಇದು ಆದಾಗಲೇ ಕನ್ನಡ ಅನ್ನದ ಭಾಷೆಯಾಗುತ್ತದೆ. ಚಿನ್ನದ ಭಾಷೆಯೂ ಆಗುತ್ತದೆ. ನಮ್ಮ ಕನ್ನಡ ಭಾಷೆಯ ಮುಂದೆ ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳು ಏನೇನು ಅಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬಿಟ್ಟು ಮೇಲರಿಮೆ ಹೊಂದಿ ಅಭಿಮಾನದಿಂದ ಕನ್ನಡ ನಾಡು ಕಟ್ಟುವ ಕೆಲಸವನ್ನು ಮಾಡಬೇಕೆಂದ ಅವರು, ಕನ್ನಡವನ್ನು ಯಾರೂ ಬೆಳೆಸಬೇಕಾಗಿಲ್ಲ ಈಗಾಗಲೇ ಅದು ಬೃಹತ್ ಪ್ರಾಚೀನ ವೃಕ್ಷ ವಾಗಿ ಬೆಳೆದಿದೆ.ಅದರ ಅಡಿಯ ತಂಪು ನೆರಳಲ್ಲಿ ನಾವು ಬೆಳೆದು ಕನ್ನಡದ ಕೀರ್ತಿಯನ್ನು ಬೆಳಗ ಬೇಕಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ.ಎಚ್. ಸೀಗನಾಯಕ ಅವರು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಜ್ಞಾನಾರ್ಜನೆಗೆ ಅನುಕೂಲವಾದ ಕನ್ನಡ ಮತ್ತು ಕನ್ನಡ ಸಾಹಿತ್ಯ ಚರಿತ್ರೆಯನ್ನು ಸವಿವರವಾಗಿ ತಿಳಿಸಿಕೊಟ್ಟರು. ನಂತರ ಅವರು, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಗೀತ ಗಾಯನ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾವಂತ ವಿದ್ಯಾರ್ಥಿಗಳಾದ ಕೆ.ರಂಜಿತಾ ಎಂ.ಜೆ. ನವೀನ, ಆರ್. ಚಂದನಾ. ಸಿ.ಶಂಕರ, ಎಂ.ಎಸ್. ಸೌಂದರ್ಯ, ವಿ. ಶ್ರೀನಿವಾಸ್ ಅವರುಗಳಿಗೆ ಬಹುಮಾನ ವಿತರಿಸಿ ಗೌರವಿಸಿದರು. ಬೋಧಕರಾದ ಡಾ. ಎಸ್. ಶ್ರೀಕಂಠ ಪ್ರಸಾದ್, ಡಾ.ಎಂ.ಎಸ್. ಮಹದೇವ, ಡಾ.ನೀಲಕಂಠ ಸ್ವಾಮಿ, ಡಾ. ಎನ್. ರವಿಕುಮಾರ್. ಡಿ ಯಶೋಧ, ಎಸ್.ಎಸ್. ಲಕ್ಷ್ಮಿ, ಎಸ್. ರಾಜಶೇಖರ, ಪಿ. ನಂದನ್, ಡಿ.ರೂಪಾ,ಕಿಶೋರ್ ಕುಮಾರ್, ಜಯಶಂಕರ್, ಎನ್. ಸಂಧ್ಯಾರಾಣಿ, ನಿರ್ಮಲಾ, ಅರುಣ್ ಮತ್ತು ಅಧೀಕ್ಷಕಿ ಆರ್. ಸುಜಾತ ಹಾಗೂ ಗ್ರಂಥಪಾಲಕ ಸಿದ್ದರಾಮಯ್ಯ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರೆಲ್ಲರನ್ನೂ ಕನ್ನಡ ಪ್ರಾಧ್ಯಾಪಕ ಡಾ. ಎಂ.ಎಸ್. ಮಹಾದೇವ ಸ್ವಾಗತಿಸಿದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.