82 total views
ಮೈಸೂರು:-ಕುಡಿದ ಮತ್ತಿನಲ್ಲಿದ್ದ ತಂದೆಯಿಂದಲೇ ಸುತ್ತಿಗೆಯಿಂದ ಹಲ್ಲೆಗೆ ಒಳಗಾಗಿ ತೀವ್ರಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತಾಲ್ಲೂಕಿನ ಉದ್ಬೂರು ಗ್ರಾಮದ ಇಬ್ಬರು ಮಕ್ಕಳ ಪೈಕಿ ಹಿರಿಯ ಮಗಳು ಕುಸುಮ(೧೪) ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆನ.೧೭ರಂದು ಗುರುವಾರ ರಾತ್ರಿ ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದ ತಮ್ಮ ಮನೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಡಿ.ಸ್ವಾಮಿ(೩೮) ಎಂಬಾತ ತನ್ನ ಮಕ್ಕಳಾದ ಕುಸುಮ(೧೪) ಹಾಗೂ ಧನ್ಯಶ್ರೀ(೪) ಮೇಲೆ ಸುತ್ತಿಗೆಯಿಂದ ತೀವ್ರವಾಗಿ ಹಲ್ಲೆ ನಡೆಸಿ, ಈಗ ಪೊಲೀಸರಿಂದ ಬಂಧಿತನಾಗಿದ್ದಾನೆ.
ಘಟನೆ ನಂತರ ತೀವ್ರ ಗಾಯಗೊಂಡಿದ್ದ ಇಬ್ಬರು ಮಕ್ಕಳನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾಘಟಕದಲ್ಲಿರಿಸಿ ವೈದ್ಯರು ಕಳೆದ ಏಳು ದಿನಗಳಿಂದಲೂ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದ ಹಿರಿಯ ಮಗಳು ಕುಸುಮ(೧೪) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾಳೆ.
ಘಟನೆ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಗುರುವಾರಬೆಳಿಗ್ಗೆ ಪೊಲೀಸರ ಸಮ್ಮುಖದಲ್ಲಿ ಮಹಜರು ನಡೆಸಿದ ನಂತರ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಕಿರಿಯ ಪುತ್ರಿ ಧನ್ಯಶ್ರೀ(೪)ಯನ್ನೂ ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆ ಇನ್ನೂ ಕಣ್ಣು ಬಿಟ್ಟು ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ. ಆಕೆಯನ್ನು ಬದುಕುಳಿಸುವ ಪ್ರಯತ್ನವನ್ನು ವೈದ್ಯರು ಮುಂದುವರಿಸಿದ್ದಾರೆ