278 total views
1977ರಲ್ಲಿ ಭಾರತದ ದೂರದರ್ಶನ ನಕ್ಷೆಯಲ್ಲಿ ಕರ್ನಾಟಕ ಮಿಂಚಲು ಆರಂಭಿಸಿತು. ಇದೇ ವರ್ಷ ಸೆಪ್ಟೆಂಬರ್ 3ರಂದು ಕಲ್ಬುಗಿ ದೂರದರ್ಶನ ಕೇಂದ್ರ ಪ್ರಸಾರ ಕಾರ್ಯ ಆರಂಭಿಸಿತು. 1981ರ ಜನವರಿ 1ನೇ ತಾರೀಖು ದೂರದರ್ಶನ ಬೆಂಗಳೂರು ಮಹಾನಗರಕ್ಕೆ ಕಾಲಿಟ್ಟಿತು. ಡಾ.ಅಂಬೇಡ್ಕರ್ ಬೀದಿಯಲ್ಲಿರುವ ವಿಶ್ವೇಶ್ವರಯ್ಯ ಗೋಪುರದ 2ನೇ ಮಹಡಿಯಿಂದ ಬೆಂಗಳೂರು ದೂರದರ್ಶನ ಪ್ರಸಾರ ಕಾರ್ಯ ಆರಂಭಿಸಿತು. 1988ರಲ್ಲಿ ಜಯಚಾಮರಾಜೇಂದ್ರ ನಗರದಲ್ಲಿ ವ್ಯವಸ್ಥಿತ ಸ್ಟುಡಿಯೋ ನಿರ್ಮಾಣವಾಯಿತು. ನಂತರ ಇಲ್ಲಿಂದ ಕಾರ್ಯಕ್ರಮಗಳ ಪ್ರಸಾರದ ಅವಧಿಯನ್ನು ಹೆಚ್ಚಿಸಲಾಯಿತು. 1994ರಲ್ಲಿ ಪ್ರಾರಂಭವಾದ ಡಿ.ಡಿ-9 ಉಪಗ್ರಹ ವಾಹಿನಿಯೆ ಚಂದನ. 2000ದಲ್ಲಿ ಈ ಉಪಗ್ರಹ ವಾಹಿನಿಗೆ ‘ಚಂದನ’ ಎಂದು ನಾಮಕರಣ ಮಾಡಲಾಯಿತು. 1983ರ ರಾಜ್ಯೋತ್ಸವ ದಿನದಂದು ಕನ್ನಡ ವಾರ್ತಾಪ್ರಸಾರ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಾರಂಭವಾಯಿತು. ಕ್ರಮೇಣ ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮಗಳಲ್ಲಿ ವಸ್ತು ವೈವಿಧ್ಯತೆ ಕಂಡು ಬರಲಾರಂಭಿಸಿತು. ದಸರಾ ಉತ್ಸವ, ಕ್ರಿಕೆಟ್ ಪಂದ್ಯಗಳ ನೇರಪ್ರಸಾರ, ಧಾರವಾಹಿಗಳು, ಮಹಿಳೆಯರ ಕಾರ್ಯಕ್ರಮಗಳು, ರೈತರಿಗಾಗಿ ವಿಶೇಷ ಕಾರ್ಯಕ್ರಮಗಳು, ಶ್ರೇಷ್ಠ ಕನ್ನಡ ಸಣ್ಣಕತೆಗಳ ಟಿವಿ ಚಲನಚಿತ್ರಗಳು ಮೊದಲಾದ ಕಾರ್ಯಕ್ರಮಗಳಿಂದ ವಸ್ತು ವೈವಿಧ್ಯತೆ ಹೆಚ್ಚಿತು. ಜೊತೆಗೆ 1995ರ ಮಾರ್ಚ್ 8ರಂದು ‘ಹಲೋ ಸೋದರಿ’ ಕಾರ್ಯಕ್ರಮಗಳೊಂದಿಗೆ ಫೋನ್ ಇನ್ ಕಾರ್ಯಕ್ರಮ ಆರಂಭಿಸಿತು. ಇದು ದ್ವಿಮುಖ ಸಂವಹನೆಯ ಮೊದಲ ಯತ್ನವಾಗಿ ಬೆಂಗಳೂರು ಕೇಂದ್ರದ ಯಶಸ್ಸಿಗೆ ಇನ್ನೊಂದು ಪುಟ ದಾಖಲಾಯಿತು. ಕನ್ನಡ ಕಾರ್ಯಕ್ರಮಗಳನ್ನು ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ತಲುಪಿಸುವ ಘನೋದ್ದೇಶದಿಂದ 1984ರಲ್ಲಿ ಮಂಗಳೂರು, ದಾವಣಗೆರೆ, ಬಿಜಾಪುರ, ಬಳ್ಳಾರಿ, ಗದಗ, ರಾಯಚೂರು, ಮೈಸೂರು, ಹೊಸಪೇಟೆ, ಬೆಳಗಾವಿಗಳಲ್ಲಿ ಮರುಪ್ರಸಾರ ಕೇಂದ್ರಗಳನ್ನು ಆರಂಭಿಸಲಾಯಿತು. ಮುಂದಿನ ವರ್ಷಗಳಲ್ಲಿ ಹಾಸನ, ತಿಪಟೂರು, ಕೊಡಗು, ಶಿವಮೊಗ್ಗ ನಗರಗಳಿಗೂ ಮರುಪ್ರಸಾರ ಕೇಂದ್ರಗಳ ಭಾಗ್ಯ ಲಭಿಸಿತು. 1994ರ ಸ್ವಾತಂತ್ರ್ಯ ದಿನದಿಂದ ಕರ್ನಾಟಕ ಪ್ರಾದೇಶಿಕ ಪ್ರಸಾರ ಸೇವೆ ಪ್ರಾರಂಭವಾಯಿತು. ಇದರಿಂದಾಗಿ ಸಂಪೂರ್ಣ ಕನ್ನಡ ಕಾರ್ಯಗಳು ಬಿತ್ತರಗೊಳ್ಳುವಂತಾಯಿತು.