210 total views
ಕಲಬುರಗಿ ಇಂದಿನ ಮಕ್ಕಳು ಓದುವುದನ್ನು ರೂಢಿಸಿಕೊಳ್ಳಬೇಕು. ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ ಎಂದು ಥಟ್ ಅಂತ ಹೇಳಿ ಖ್ಯಾತಿಯ ನಿರೂಪಕ ಡಾ. ನಾ ಸೋಮೇಶ್ವರ ಮಕ್ಕಳಿಗೆ ಕಿವಿಮಾತು ಹೇಳಿದರು.
ಗುರುವಾರ ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಭಿವೃದ್ಧಿ ಮಂಡಳಿ, ಕಲಬುರಗಿ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಆಯೋಜಿಸಿದ ಜಿಲ್ಲಾ ಮಟ್ಟದ “ಕಲ್ಯಾಣ ಕಣ್ಮಣಿ” ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ವಿಜ್ ಎಂಬ ಶಬ್ದಕ್ಕೆ ಯಾವುದೇ ಮೂಲ ಅರ್ಥವಿಲ್ಲ. ಆದರೆ ಕ್ವಿಜ್ ಎಂದರೆ ಪ್ರಶ್ನೆಯನ್ನು ಕೇಳುವುದಾಗಿದೆ ಎಂದು ನಾವು ತಿಳಿದುಕೊಂಡಿದ್ದೇವೆ. ಇಡಿ ಜಗತ್ತಿನಲ್ಲಿ ಮೊದಲ ಬಾರಿಗೆ ರಸಪ್ರಶ್ನೆ ಸ್ಪರ್ಧೆ ಮಹಾಭಾರತದಲ್ಲಿ ನಡೆದಿದೆ. ಯಕ್ಷನೂ ಪಾಂಡವರಿಗೆ ಪ್ರಶ್ನೆ ಕೇಳುವ ಸಂಗತಿಯೇ ಕ್ವಿಜ್ ಕಾರ್ಯಕ್ರಮವಾಗಿತ್ತು ಎಂದರು.
ಡಿ.ಡಿ.ಪಿ.ಐ. ಸಕ್ರೆಪ್ಪಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿನ ಪ್ರತಿಭೆಗಳನ್ನು ಗುರುತಿಸಲು ಆಯೋಜಿಸಿದೆ. ಪ್ರದೇಶದ ಇತಿಹಾಸ, ಸಂಸ್ಕøತಿ, ಕಲೆ ಮಕ್ಕಳು ಅರಿಯಬೇಕಿದೆ ಎಂದರು.
ಕಾಗಿಣಾ ಪ್ರಥಮ, ಕೃಷ್ಣೆ ತಂಡ ದ್ವಿತೀಯ ಸ್ಥಾನ: ಕಲ್ಯಾಣ ಕಣ್ಮಣಿ ರಸಪ್ರೆಶ್ನೆ ಕಾರ್ಯಕ್ರಮ ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದ 80 ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಿ 12 ವಿದ್ಯಾರ್ಥಿಗಳನ್ನು ಅಂತಿಮವಾಗಿ ರಸಪ್ರಶ್ನೆಗೆ ಆಯ್ಕೆ ಮಾಡಿ ಬೆಣ್ಣೆತೋರಾ, ಕೃಷ್ಣೆ, ಭೀಮೆ ಹಾಗೂ ಕಾಗಿಣಾ ಎಂದು 4 ತಂಡಗಳನ್ನು ರಚಿಸಿ ವಿದ್ಯಾರ್ಥಿಗಳನ್ನು ವಿಂಗಡಿಸಲಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ ಇತಿಹಾಸ, ಸಲೆ ವ್ಯಕ್ತಿ, ಸ್ಥಳದ ಮಹತ್ವ ಸೇರಿದಂತೆ ಅನೇಕ ವಿಷಯಗಳ ಪ್ರಶ್ನೆ ರಸಪ್ರಶ್ನೆಯಲ್ಲಿ ಕೇಳಲಾಯಿತು. ಕೊನೆಯದಾಗಿ 11 ಸುತ್ತಿನಲ್ಲಿ ಕಾಗಿಣಾ ತಂಡ ಅತಿ ಹೆಚ್ಚು ಅಂಕ ಪಡೆದು ವಿಜಯಶಾಲಿಯಾಯಿತು. ತಂಡದಲ್ಲಿ ಕು. ಬಸಮ್ಮ, ಕು. ಅಂಬಿಕಾ ಹಾಗೂ ಕು.ಗಂಗಮ್ಮ ಇದ್ದರು. ಕೃಷ್ಣೆ ತಂಡ 2ನೇ ಸ್ಥಾನ ಪಡೆದುಕೊಂಡಿತ್ತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರೆಮ್ಮ ಡವಳಗಿ, ಸಾಹಿತಿ ಎಸ್.ಎಸ್.ಹೀರೆಮಠ, ಉಪನ್ಯಾಸಕ ಸಂತೋಷ ಕುಲಕರ್ಣಿ, ವಿಜಯ ಕುಮಾರ, ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಇದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ 80 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವರದಿಗಾರರು:- ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್