124 total views
ಕಲಬುರಗಿ ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗದ ಕುರಿತು ಜನಜಾಗೃತಿ ಮೂಡಿಸಲು ಬರುವ ಸೆಪ್ಟೆಂಬರ್ ಮಾಹೆಯಲ್ಲಿ ಕಲಬುರಗಿಯಲ್ಲಿ ಏಕಕಾಲದಲ್ಲಿ 25 ಸಾವಿರ ಜನರನ್ನು ಸೇರಿಸಿ ಯೋಗಾಥಾನ್-2022 ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ ಎಂದು ಡಿ.ಸಿ.ಯಶವಂತ ವಿ. ಗುರುಕರ್ ತಿಳಿಸಿದರು.
ಸೋಮವಾರ ಯೋಗಾಥಾನ್-2022 ಕಾರ್ಯಕ್ರಮ ಕುರಿತಂತೆ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದರಲ್ಲಿ ಜಿಲ್ಲೆಯ ಎಲ್ಲಾ ಯೋಗ ಸಂಸ್ಥೆಗಳು ಸಕ್ರೀಯವಾಗಿ ಭಾಗವಹಿಸಬೇಕೆಂದು ತಿಳಿಸಿದರು.
ಯೋಗಾಥಾನ್-2022ರಲ್ಲಿ ಭಾಗವಹಿಸಲು ಈಗಾಗಲೆ ಜಿಲ್ಲೆಯಿಂದ 457 ಜನ ಯೋಗ ತರಬೇತಿದಾರರು, 370 ಯೋಗ ತರಬೇತಿ ಸಂಸ್ಥೆಗಳು ಹಾಗೂ 16,300 ಜನರು ಆನ್ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಗೆ ನೀಡಿದ ಗುರಿ ತಲುಪಲು ಪ್ರತಿ ತರಬೇತುದಾರನಿಗೆ 100 ಜನರನ್ನು ಯೋಗ ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಲು ತಿಳಿಸಬೇಕು. ಶೀಘ್ರವೇ ತರಬೇತುದಾರರೊಂದಿಗೆ ಸಭೆ ನಡೆಸಿ ಎಂದು ಡಿ.ಸಿ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಅವರಿಗೆ ಸೂಚಿಸಿದರು.
ಯೋಗಾಭ್ಯಾಸದಲ್ಲಿ ಭಾಗವಹಿಸುವ ಯೋಗ ಪಟುಗಳು ತಾವೇ ನೆಲದ ಮೇಲೆ ಹಾಸಲು ಟಾವೆಲ್, ಚಾಪೆ ತರಬೇಕು. ಅಂದು ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ. ಯೋಗಾಭ್ಯಾಸದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಟಿ.ಶರ್ಟ್ ವಿತರಿಸಲಾಗುತ್ತದೆ ಎಂದರು.
ಗಿನ್ನೀಸ್ ದಾಖಲೆಗೆ ಪ್ರಯತ್ನ: ಯೋಗಾಥಾನ್-2022 ಸಂಯೋಜಕ ವಿವೇಕ ಪ್ರಕಾಶ ಮಾತನಾಡಿ, ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಮತ್ತು ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ 25 ಸ್ಥಳಗಳಲ್ಲಿ ಸುಮಾರು 5 ಲಕ್ಷ ಜನರಿಂದ ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮೂಲಕ ಗಿನ್ನೀಸ್ ದಾಖಲೆ ಸೃಷ್ಠಿಸಲು ಪ್ರಯತ್ನಿಸಲಾಗುತ್ತಿದೆ.
2018ರಲ್ಲಿ ರಾಜ್ಯದ ಮೈಸೂರಿನಲ್ಲಿ ಏಕಕಾಲದಲ್ಲಿ 55,000 ಜನ ಯೋಗಾಭ್ಯಾಸ ಮಾಡುವ ಮೂಲಕ ಗಿನ್ನೀಸ್ ದಾಖಲೆ ಮಾಡಲಾಗಿತ್ತು. ತದನಂತರ 2019ರಲ್ಲಿ ರಾಜಸ್ತಾನದ ಕೋಟಾದಲ್ಲಿ 1.21 ಲಕ್ಷ ಜನ ಯೋಗಾಭ್ಯಾಸದಿಂದ ಇದುವೇ ಪ್ರಸ್ತುತ ಗಿನ್ನೀಸ್ ದಾಖಲೆ ಹೆಸರಲ್ಲಿದ್ದು, ಹೊಸ ವಿಶ್ವ ದಾಖಲೆ ಸೃಷ್ಠಿಸಬೇಕಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಯೋಗಾಭ್ಯಾಸದ ವಿವಿಧ ಆಸನಗಳನ್ನು ಸರಿಯಾಗಿ ಮಾಡುವುದು ತುಂಬಾನೆ ಮುಖ್ಯವಾಗಿದೆ. ಒಂದು ವೇಳೆ 100 ಜನರಲ್ಲಿ ಇಬ್ಬರು ಸರಿಯಾಗಿ ಆಸನ ಮಾಡದೇ ಹೋದಲ್ಲಿ ಇಡೀ ಸ್ಥಳವನ್ನು ಅಮಾನ್ಯವಾಗುತ್ತದೆ. ಪ್ರತಿಯೊಬ್ಬ ಯೋಗ ಪಟುವಿನ ಆಸನಗಳನ್ನು ಚಿತ್ರೀಕರಿಸಲಾಗುತ್ತದೆ ಎಂದು ಕಾರ್ಯಕ್ರಮದ ಕುರಿತು ವಿವರಣೆ ನೀಡಿದ ವಿವೇಕ ಪ್ರಕಾಶ ಅವರು, ಆಗಸ್ಟ್ 25 ರೊಳಗೆ ತರಬೇತಿದಾರರು www.yogathon2022.com ಮೂಲಕ ಹೆಸರು ನೊಂದಾಯಿಸಿಕೊಂಡು ಆನ್ಲೈನ್ ಮತ್ತು ದೈಹಿಕವಾಗಿ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ ಎಂದರು.
ಸಭೆಯಲ್ಲಿ ಗಿನ್ನೀಸ್ ದಾಖಲೆ ತಂಡದ ಕರ್ನಾಟಕದ ಪ್ರತಿನಿಧಿ ಶೈಲಜಾ ಶ್ರೀಕಾಂತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಸೇರಿದಂತೆ ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳು, ಯೋಗ ಕಾಲೇಜುಗಳ ಮುಖ್ಯಸ್ಥರು ಇದ್ದರು.
ವರದಿಗಾರರು:- ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್