112 total views
ನವದೆಹಲಿ, ಆ.17- ಸಾಲದ ಹರಿವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ 3 ಲಕ್ಷ ರೂ.ವರೆಗಿನ ಅಲ್ಪಾವಧಿಯ ಕೃಷಿ ಸಾಲದ ಮೇಲೆ ವಾರ್ಷಿಕ ಶೇಕಡಾ 1.5 ರ ಬಡ್ಡಿ ರಿಯಾಯಿತಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 2022-23 ಹಣಕಾಸು ವರ್ಷಕ್ಕೆ ಸಾಲ ನೀಡುವ ಸಾರ್ವಜನಿಕ ವಲಯದ ಬ್ಯಾಂಕ್ಗಳು, ಖಾಸಗಿ ವಲಯದ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳು ಶೇ. 1.5 ರಷ್ಟು ಬಡ್ಡಿ ಸಹಾಯಧನ ಒದಗಿಸಲು ನಿರ್ಧರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಈ ವಿಷಯ ತಿಳಿಸಿದ್ದಾರೆ. 2024-25 ರವರೆಗೆ ರೈತರಿಗೆ 3 ಲಕ್ಷ ರೂ.ವರೆಗೆ ಅಲ್ಪಾವಧಿಯ ಕೃಷಿ ಸಾಲ ನೀಡಲು ಸಮ್ಮತಿ ನೀಡಲಾಗಿದೆ.ಈ ಯೋಜನೆಯ ಅಡಿಯಲ್ಲಿ 2022-23 ರಿಂದ 2024-25 ರ ಅವಧಿಗೆ 34,856 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಬಡ್ಡಿ ರಿಯಾಯಿತಿ ಹೆಚ್ಚಳ ಕೃಷಿ ವಲಯದಲ್ಲಿ ಸಾಲದ ಹರಿವಿನ ಸುಸ್ಥಿರತೆ ಖಚಿತಪಡಿಸುತ್ತದೆ ಮತ್ತು ಸಾಲ ನೀಡುವ ಸಂಸ್ಥೆಗಳ ವಿಶೇಷವಾಗಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ಆರ್ಥಿಕ ಆರೋಗ್ಯ ಮತ್ತು ಕಾರ್ಯಸಾಧ್ಯತೆಯನ್ನು ಖಚಿತಪಡಿಸುತ್ತದೆ, ಗ್ರಾಮೀಣ ಆರ್ಥಿಕತೆಯಲ್ಲಿ ಸಾಕಷ್ಟು ಕೃಷಿ ಸಾಲವಖಾತ್ರಿಗೊಳಿಸುತ್ತದೆ ಎಂದು ಹೇಳಿದ್ದಾರೆ. ಪಶುಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಅಲ್ಪಾವಧಿಯ ಕೃಷಿ ಸಾಲ ಒದಗಿಸುವುದರಿಂದ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ. ಕೃಷಿ ಮತ್ತು ಪಶುಸಂಗೋಪನೆ, ಹೈನುಗಾರಿಕೆ, ಕೋಳಿ, ಮೀನುಗಾರಿಕೆ ಸೇರಿದಂತೆ ಇತರ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ 3 ಲಕ್ಷ ರೂ.ವರೆಗಿನ ಅಲ್ಪಾವಧಿ ಕೃಷಿ ಸಾಲವನ್ನು ವಾರ್ಷಿಕ ಶೇ.7 ದರದಲ್ಲಿ ನೀಡಲಾಗುತ್ತದೆ. ಸಾಲವನ್ನು ತ್ವರಿತವಾಗಿ ಮತ್ತು ಸಕಾಲಿಕವಾಗಿ ಮರುಪಾವತಿಸಲು ರೈತರಿಗೆ ಹೆಚ್ಚುವರಿ 3 ಪ್ರತಿಶತ ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ವರದಿಗಾರರು:- ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್