ಶಿಡ್ಲಘಟ್ಟ:-ಮಕ್ಕಳು ಪಠ್ಯದ ಚಟುವಟಿಕೆಗಳಲ್ಲಿ ಯಾವ ರೀತಿ ಪಾಲ್ಗೊಳ್ಳುವಿರೊ ಅದೇ ರೀತಿಯಲ್ಲಿ ಕ್ರೀಡೆಗಳಲ್ಲಿಯೂ ಭಾಗವಹಿಸಬೇಕು ಎಂದು ಬಾಲಾಜಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಮುನಿರಾಜು ಹೇಳಿದರು.
ತಾಲೂಕಿನ ಜಂಗಮಕೋಟೆಯ ಬಾಲಾಜಿ ವಿದ್ಯಾನಿಕೇತನ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲುವು ಸಾಧಿಸಿ ತಾಲೂಕು ಮಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಕ್ರೀಡೆಗಳು ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ದೃಢತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದು , ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಹೇಳಿದರು.
ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗಿರೀಶ್ ಮಾತನಾಡಿ, ಜಂಗಮಕೋಟೆ ಜ್ಞಾನಜ್ಯೋತಿ ಶಾಲೆ ಆವರಣದಲ್ಲಿ ನೆಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಬಾಲಾಜಿ ವಿದ್ಯಾನಿಕೇತನ ಆಂಗ್ಲ ಮಾದ್ಯಮ ಶಾಲೆಯ ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 75 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ, ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಹೇಳಿದ ಅವರು, ವಾಲಿಬಾಲ್, ಚೆಸ್, ಥ್ರೋ ಬಾಲ್, ಗುಂಡು ಎಸೆತ, ಚಕ್ರ ಎಸೆತ, 100 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ನಡಿಗೆ, ಕೇರಂ, ಇತರೆ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಬಾಲಕ ಬಾಲಕಿಯರು ಹೋಬಳಿ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ,ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಮಾಲ ಮಂಜುನಾಥ್, ದೈಹಿಕ ಶಿಕ್ಷಕ ಚಂದ್ರು, ಶಿಕ್ಷಕರಾದ ನಾಗೇಶ್, ನವೀನ್, ಪುಷ್ಪ , ಕಿರಣ್ , ಸುಧಾ , ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.